ನವದೆಹಲಿ: ಭವಿಷ್ಯದ ಪೀಳಿಗೆಗೂ ಧೂಮಪಾನವನ್ನು ನಿಷೇಧಿಸಿ(Smoking Ban) ಕಾನೂನು ರೂಪಿಸಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಕೀರ್ತಿಗೆ ನ್ಯೂಜಿಲೆಂಡ್ ಪಾತ್ರವಾಗಿದೆ. ಈ ವಿನೂತನ ರೀತಿಯ ಕಾನೂನು 2023ರಿಂದ ಜಾರಿಗೆ ಬರಲಿದೆ. 14 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಂಪೂರ್ಣವಾಗಿ ಸಿಗರೇಟ್ ನಿಷೇಧಿಸಲಾಗಿದೆ. ಅವರು ಸಿಗರೇಟ್ ಖರೀದಿಸಲೂ ಈ ಕಾನೂನಿನಡಿ ಸಾಧ್ಯವಾಗುವುದಿಲ್ಲ.
ಮಂಗಳವಾರ ನ್ಯೂಜಿಲೆಂಡ್ ಸಂಸತ್ತಿನ ಈ ಕಾನೂನು ಅಗೀಕರಿಸಿದೆ. ಈ ಹೊಸ ಕಾನೂನುಗಳ ಸರಣಿಯು ವಿಶ್ವದ ಅತ್ಯಂತ ಕಟ್ಟುನಿಟ್ಟಾದ ಕಾನೂನುಗಳಾಗಿವೆ. ಈ ಶಾಸನವು ಹೊಗೆ ಮುಕ್ತ ಭವಿಷ್ಯದತ್ತ ಪ್ರಗತಿಯನ್ನು ವೇಗಗೊಳಿಸುತ್ತದೆ ಎಂದು ನ್ಯೂಜಿಲೆಂಡ್‌ನ ಸಹಾಯಕ ಆರೋಗ್ಯ ಸಚಿವ ಡಾ ಆಯೇಶಾ ವೆರಾಲ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನ್ಯೂಜಿಲೆಂಡ್‌ನ ಈ ಹೊಸ ಕಾನೂನು 2009 ಜನವರಿ 1ರಂದು ಮತ್ತು ಅದರ ನಂತರ ಜನಿಸಿದ ಯಾರಿಗಾದರೂ ತಂಬಾಕು ಮಾರಾಟ ಮಾಡುವುದನ್ನು ನಿಷೇಧಿಸುತ್ತದೆ. ಹಾಗೆಯೇ ತಂಬಾಕು ನಿಷೇಧ ವಯಸ್ಸನ್ನು ವಾರ್ಷಿಕವಾಗಿ ಹೆಚ್ಚಿಸುತ್ತಾ ಹೋಗಲಾಗುತ್ತದೆ. ಹಾಗಾಗಿ, ಈ ನಿಷೇಧವು ವ್ಯಕ್ತಿಯ ಪೂರ್ತಿ ಜೀವನ ಅವಧಿಗೆ ಅನ್ವಯಿಸಲಿದ್ದು, ಜತೆಗೆ ಸುಮಾರು 95,910 ಡಾಲರ್ ದಂಡಕ್ಕೂ ಕಾರಣವಾಗಬಹುದು. 2025ರ ವೇಳೆಗೆ ನ್ಯೂಜಿಲೆಂಡ್ ಅನ್ನು ಧೂಮಪಾನ ಮುಕ್ತ ಮಾಡುವ ಪ್ರಯತ್ನದಲ್ಲಿ ಈ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ ನ್ಯೂಜಿಲೆಂಡ್ ಸರ್ಕಾರವು ತಿಳಿಸಿದೆ.
ಇದನ್ನೂ ಓದಿ | ವಿಸ್ತಾರ Explainer | ಲೂಸ್ ಸಿಗರೇಟ್ ಮಾರಾಟ ನಿಷೇಧಕ್ಕೆ ಚಿಂತನೆ ಏಕೆ? ಇದರ ಹಿಂದಿನ ಉದ್ದೇಶ ಏನು?