ಕೇಪ್‌ಟೌನ್: ವಿಮಾನ ಪ್ರಯಾಣವು ಎಷ್ಟು ಆರಾಮದಾಯಕವೋ, ಎಷ್ಟು ಐಷಾರಾಮಿಯೋ, ಕೆಲವೊಮ್ಮೆ ಅಷ್ಟೇ ಅಪಾಯ, ಆತಂಕ ತಂದೊಡ್ಡುತ್ತದೆ. ವಿಮಾನಗಳ ಹಾರಾಟವು ಸೂಕ್ಷ್ಮ ವಿಷಯವಾದ ಕಾರಣ ಹಾಗೂ ನೂರಾರು ಜನರ ರಕ್ಷಣೆಯ ವಿಷಯವಾದ ಕಾರಣ ಹಾರುತ್ತಿದ್ದಾಗ ಒಂದು ಸಣ್ಣ ಹಕ್ಕಿ ಡಿಕ್ಕಿಯಾದರೂ ಅದನ್ನು ತುರ್ತು ಭೂಸ್ಪರ್ಶ ಮಾಡಲಾಗುತ್ತದೆ. ಪರಿಸ್ಥಿತಿ ಹೀಗಿರುವಾಗಲೇ ದಕ್ಷಿಣ ಆಫ್ರಿಕಾದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ನಾಗರಹಾವೊಂದು (Snake On Plane) ಪತ್ತೆಯಾಗಿದ್ದು, ಎಚ್ಚೆತ್ತ ಪೈಲಟ್ ಕೂಡಲೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾದ ಬ್ಲೊಂಫೊಂಟೀನ್ ಹಾಗೂ ಪ್ರಿಟೋರಿಯಾ ಮಧ್ಯೆ ವಿಮಾನ ಹಾರಾಟ ನಡೆಸುತ್ತಿತ್ತು. ಸುಮಾರು 11 ಸಾವಿರ ಅಡಿ ಎತ್ತರದಲ್ಲಿ ವಿಮಾನ ಹಾರುತ್ತಿತ್ತು. ಇದೇ ವೇಳೆ ಪೈಲಟ್ ರುಡಾಲ್ಫ್ ಎರಾಸ್ಮಸ್‌ಗೆ ಏನೋ ತಣ್ಣಗಿನ ವಸ್ತು ಸ್ಪರ್ಶವಾದ ಅನುಭವವಾಗಿದೆ. ನೀರೇನಾದರೂ ಚೆಲ್ಲಿರಬೇಕು ಎಂದು ಭಾವಿಸಿದ ಅವರು ಸೀಟಿನ ಕೆಳಗೆ ನೋಡಿದ್ದಾರೆ. ಆಗ ಬೆಚ್ಚಗೆ ನಾಗರ ಹಾವೊಂದು ಮಲಗಿದ್ದನ್ನು ನೋಡಿ ಅವರಿಗೆ ಎದೆ ಧಸಕ್ ಎಂದಿದೆ. ಆದರೂ, ಗಲಿಬಿಲಿಗೊಳ್ಳದ ಅವರು ಕೂಡಲೇ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ.
“ನಾನು ಮೊದಲಿಗೆ ನೀರು ಚೆಲ್ಲಿರಬೇಕು ಇಲ್ಲವೇ ನೀರಿನ ಬಾಟಲಿ ಇರಬೇಕು ಎಂದು ಅಂದುಕೊಂಡಿದ್ದೆ. ಆದರೆ, ಯಾವಾಗ ಪೈಲಟ್ ಸೀಟಿನ ಕೆಳಗೆ ನೋಡಿದೆನೋ, ಒಂದು ಕ್ಷಣ ದಂಗಾದೆ. ಪುಣ್ಯಕ್ಕೆ ಹಾವು ಮಲಗಿತ್ತು. ಅದು ಅಲುಗಾಡುತ್ತಿರಲಿಲ್ಲ. ಕೂಡಲೇ ನಾನು ವಿಮಾನವನ್ನು ಲ್ಯಾಂಡ್ ಮಾಡಿದೆ. ಇದು ನನ್ನ ಪೈಲಟ್ ವೃತ್ತಿ ಜೀವನದಲ್ಲಿಯೇ ಅತ್ಯಂತ ವಿಶೇಷ ಹಾಗೂ ಭಯಂಕರ ಅನುಭವವಾಗಿದೆ” ಎಂದು ಹೇಳಿದ್ದಾರೆ. ವಿಮಾನ ಲ್ಯಾಂಡ್ ಆಗುತ್ತಲೇ ಜನ ಗಡಿಬಿಡಿಯಿಂದ ಹೊರಗೆ ಬಂದಿದ್ದಾರೆ. ಬಳಿಕ ಎಷ್ಟು ಹೊತ್ತು ಹುಡುಕಾಡಿದರೂ ಹಾವು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದಷ್ಟೇ, ದುಬೈಗೆ ಹೊರಟಿದ್ದ ಫೆಡ್‌ಎಕ್ಸ್ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿಯಾಗಿ, ದೆಹಲಿಯಲ್ಲಿರುವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡ್ ಆಗಿತ್ತು. ಹಾಗೆಯೇ, ವಿಮಾನ ನಿಲ್ದಾಣದಲ್ಲಿ (Delhi Airport) ಸಂಪೂರ್ಣವಾಗಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ವಿಮಾಣ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದರು.
“ಫೆಡ್‌ಎಕ್ಸ್ ವಿಮಾನವು ದೆಹಲಿಯಿಂದ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಹಕ್ಕಿ ಡಿಕ್ಕಿಯಾಗಿದೆ. ಸುಮಾರು ಸಾವಿರ ಅಡಿ ಎತ್ತರದಲ್ಲಿ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿದೆ. ಕೂಡಲೇ ವಿಮಾನದ ಅಧಿಕಾರಿಗಳು ಎಚ್ಚೆತ್ತುಕೊಂಡು ತುರ್ತು ಪರಿಸ್ಥಿತಿ ಘೋಷಿಸಿದರು. ಇದಾದ ಬಳಿಕ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ” ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಸ್ಪಷ್ಟಪಡಿಸಿತ್ತು.
ಇದನ್ನೂ ಓದಿ: Air Asia Flight: ಬೆಂಗಳೂರಿನಿಂದ ಹಾರಾಟ ಆರಂಭಿಸಿದ ಕೆಲವೇ ನಿಮಿಷದಲ್ಲಿ ಏರ್ ಏಷ್ಯಾ ವಿಮಾನ ತುರ್ತು ಭೂಸ್ಪರ್ಶ