ವಾಷಿಂಗ್ಟನ್: ಚಂದ್ರ ಹಾಗೂ ಮಂಗಳನ ಅಂಗಳಕ್ಕೆ ಜನರನ್ನೂ ಕೊಂಡೊಯ್ಯಬೇಕು, ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಮುನ್ನುಡಿ ಬರೆಯಬೇಕು ಎಂಬ ಎಲಾನ್ ಮಸ್ಕ್ ಕನಸಿಗೆ ಆರಂಭಿಕ ಹಂತದಲ್ಲಿಯೇ ಹಿನ್ನಡೆಯಾಗಿದೆ. ಎಲಾನ್ ಮಸ್ಕ್ ನೇತೃತ್ವದ ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಸೂಪರ್ ಹೆವಿ (Starship Super Heavy) ರಾಕೆಟ್‌ನ ಪರೀಕ್ಷಾರ್ಥ ಉಡಾವಣೆಯನ್ನು (Starship Rocket Launch) ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ.
ಪರೀಕ್ಷಾರ್ಥ ಉಡಾವಣೆಯನ್ನು ರದ್ದುಗೊಳಿಸಿರುವ ಕುರಿತು ಸ್ಪೇಸ್‌ಎಕ್ಸ್‌ನ ಎಲಾನ್ ಮಸ್ಕ್ ಅವರೇ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. “ಪ್ರೆಶರಂಟ್ ವಾಲ್ವ್ ಫ್ರೀಜ್ ಆಗಿದೆ. ಹಾಗಾಗಿ, ಇಂದು ಸ್ಟಾರ್‌ಶಿಪ್ ರಾಕೆಟ್ ಉಡಾವಣೆ ಮಾಡುತ್ತಿಲ್ಲ. ಇದರಿಂದ ನಾವು ತುಂಬ ಕಲಿತಿದ್ದೇವೆ. ಕೆಲವೇ ದಿನಗಳಲ್ಲಿ ಮತ್ತೆ ಪರೀಕ್ಷಾರ್ಥ ಉಡಾವಣೆ ಕುರಿತು ಮಾಹಿತಿ ನೀಡಲಾಗುವುದು” ಎಂದು ಹೇಳಿದ್ದಾರೆ.
ಎಲಾನ್ ಮಸ್ಕ್ ಟ್ವೀಟ್
ಕೆಲವು ದಿನಗಳ ಹಿಂದಷ್ಟೇ ಸ್ಟಾರ್‌ಶಿಪ್ ಸೂಪರ್ ಹೆವಿ ರಾಕೆಟ್ ಉಡಾವಣೆಗೆ ಅಮೆರಿಕ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಅನುಮತಿ ನೀಡಿತ್ತು. ಸೋಮವಾರ ಸ್ಥಳೀಯ ಕಾಲಮಾನದ ಪ್ರಕಾರ ಸಂಜೆ 5 ಗಂಟೆಯಿಂದ 7ರ ಅವಧಿಯಲ್ಲಿ ರಾಕೆಟ್‌ಅನ್ನು ಉಡಾವಣೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉಡಾವಣೆಯನ್ನು ಮುಂದೂಡಲಾಗಿದೆ.
ಹೀಗಿದೆ ದೈತ್ಯ ರಾಕೆಟ್
ಸ್ಟಾರ್‌ಶಿಪ್ ರಾಕೆಟ್ ಜಗತ್ತಿನಲ್ಲೇ ಬೃಹತ್ ಹಾಗೂ ಅತಿ ಹೆಚ್ಚು ಸಾಮರ್ಥ್ಯ ಹೊಂದಿರುವ ರಾಕೆಟ್ ಎನಿಸಿದೆ. ಇದು 394 ಅಡಿ ಎತ್ತರ ಹಾಗೂ 90 ಅಡಿ ಅಗಲ ಇದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಾಕೆಟ್, ಟೆಕ್ಸಾಸ್‌ನ ದಕ್ಷಿಣ ತುದಿಯಿಂದ ಹವಾಯಿವರೆಗೆ ಹಾರಾಟ ನಡೆಸುತ್ತಿತ್ತು. ಪರೀಕ್ಷಾರ್ಥವಾಗಿ ಉಡಾವಣೆ ಮಾಡಿದರೆ, ರಾಕೆಟ್ ಸಮುದ್ರದ ಪಾಲಾಗುತ್ತಿದ್ದ ಕಾರಣ ಬಾಹ್ಯಾಕಾಶ ತಂತ್ರಜ್ಞರು ಉಡಾವಣೆಯನ್ನು ರದ್ದುಪಡಿಸಿದರು ಎಂದು ತಿಳಿದುಬಂದಿದೆ.
ಪರೀಕ್ಷಾರ್ಥ ಉಡಾವಣೆಯ ವೇಳೆ ರಾಕೆಟ್‌ನಲ್ಲಿ ಮನಷ್ಯರಾಗಲಿ, ಉಪಗ್ರಹಗಳಾಗಲಿ ಇಲ್ಲ. ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾದರೆ, ನಂತರದ ಹಂತದಲ್ಲಿ ಮನುಷ್ಯರು ಹಾಗೂ ಉಪಗ್ರಹಗಳನ್ನು ನಭಕ್ಕೆ ಹಾರಿಸುವ ಯೋಜನೆ ಸ್ಪೇಸ್‌ಎಕ್ಸ್ ಮುಂದಿದೆ. ಭವಿಷ್ಯದ ದಿನಗಳಲ್ಲಿ ಜನರನ್ನು ಚಂದ್ರ ಹಾಗೂ ಮಂಗಳನ ಅಂಗಳಕ್ಕೆ ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಎಲಾನ್ ಮಸ್ಕ್ ಅವರ ಮಹತ್ವದ ಕನಸಾಗಿದೆ.