ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ದಿವಾಳಿಯಾಗಿರುವ ಶ್ರೀಲಂಕಾ, ವ್ಯಾಪಾರ, ಹೂಡಿಕೆ, ಪ್ರವಾಸೋದ್ಯಮದ ಅಭಿವೃದ್ಧಿಗೆ ಮತ್ತೊಮ್ಮೆ ಚೀನಾದ ನೆರವನ್ನು ಕೋರಿದೆ.
ಶ್ರೀಲಂಕಾದ ಆರ್ಥಿಕ ದುಸ್ಥಿತಿಗೆ ಚೀನಾದಿಂದ ಪಡೆದಿರುವ ಸಾಲದ ಹೊರೆ ಪ್ರಮುಖ ಕಾರಣಗಳಲ್ಲೊಂದು ಎಂಬ ಆರೋಪ ಇದ್ದರೂ, ಶ್ರೀಲಂಕಾ ಮತ್ತೆ ಚೀನಾದ ಮೊರೆ ಹೋಗಿದೆ. ಚೀನಾದಿಂದ ೪೦೦ ಡಾಲರ್ ತುರ್ತು ಹಣಕಾಸು ನೆರವನ್ನು (೩೧,೬೦೦ ಕೋಟಿ ರೂ.) ಪಡೆಯಲು ಶ್ರೀಲಂಕಾ ಯತ್ನಿಸುತ್ತಿದೆ. ಚೀನಾದ ವಿದೇಶಿ ಸಾಲದಲ್ಲಿ ೧೦% ಚೀನಾ ಮೂಲದಿಂದ ಪಡೆದಿರುವ ಸಾಲವಾಗಿದೆ.
೨.೨ ಕೋಟಿ ಜನಸಂಖ್ಯೆಯ ಶ್ರೀಲಂಕಾ ೧೯೪೮ರಲ್ಲಿ ಸ್ವಾತಂತ್ರ್ಯ ಗಳಿಸಿದ ಬಳಿಕ ಇಲ್ಲಿಯವರೆಗಿನ ಇತಿಹಾಸದಲ್ಲಿಯೇ ಸಂಕಷ್ಟದ ಕಾಲಘಟ್ಟವನ್ನು ಎದುರಿಸುತ್ತಿದೆ. ನಾಗರಿಕ ದಂಗೆಯ ಪರಿಣಾಮ ರಾಜಪಕ್ಸ ಸರ್ಕಾರ ಪತನವಾಗಿತ್ತು.
೧೦೦ ದಿನಗಳ ಬಳಿಕ ಶ್ರೀಲಂಕಾ ಅಧ್ಯಕ್ಷರ ಕಚೇರಿ ಸೋಮವಾರದಿಂದ ಪುನರಾರಂಭವಾಗಿದೆ. ಕಳೆದ ಏಪ್ರಿಲ್ ೯ರಿಂದ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅಧ್ಯಕ್ಷರ ಕಚೇರಿ ಬಂದ್ ಆಗಿತ್ತು. ಪ್ರತಿಭಟನಾಕಾರರು ದಂಗೆ ಎದ್ದು ಅಧ್ಯಕ್ಷರ ಕಚೇರಿಗೆ ಮುತ್ತಿಗೆ ಹಾಕಿದ್ದರು. ಕಳೆದ ಶುಕ್ರವಾರ ಪೊಲೀಸರು ಇಡೀ ಕಚೇರಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಸೋಮವಾರದಿಂದ ಸಿಬ್ಬಂದಿ ಕಾರ್ಯನಿರ್ವಹಣೆಯನ್ನು ಪುನರಾರಂಭಿಸಿದ್ದಾರೆ. ಶಾಂತಿಯುತ ಪ್ರತಿಭಟನೆಗೆ ಸರ್ಕಾರ ಬೆಂಬಲಿಸಲಿದೆ ಎಂದು ಅಧ್ಯಕ್ಷ ವಿಕ್ರಮಸಿಂಘೆ ಹೇಳಿದ್ದಾರೆ.
ಚೀನಾ ಹಲವಾರು ಸಣ್ಣ ಪುಟ್ಟ ದೇಶಗಳಿಗೆ ಸಾಲ ಕೊಟ್ಟು ಬಳಿಕ ತನ್ನ ಪ್ರಭಾವವನ್ನು ಹೆಚ್ಚಿಸುತ್ತದೆ. ಶ್ರೀಲಂಕಾವನ್ನೂ ಈ ಹಿಂದೆ ಭಾರಿ ಸಾಲ ಕೊಟ್ಟು ಬಳಿಕ ಇಕ್ಕಟ್ಟಿಗೆ ಸಿಲುಕಿಸಿತ್ತು. ಶ್ರೀಲಂಕಾದಲ್ಲಿ ಚೀನಾದ ಪ್ರಭಾವ ಹೆಚ್ಚುವುದು ಭಾರತದ ಹಿತಾಸಕ್ತಿ ದೃಷ್ಟಿಯಿಂದಲೂ ಕಳವಳಕಾರಿಯಾಗಿದೆ. ಮತ್ತೊಂದು ಕಡೆ ಭಾರತ ಕೂಡ ಶ್ರೀಲಂಕಾದಲ್ಲಿ ಚೀನಾ ಪ್ರಾಬಲ್ಯ ತಡೆಗೆ ಸಜ್ಜಾಗಿದೆ.