ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಈಗಾಗಲೇ ತಿಳಿಸಿರುವಂತೆ ರಾಜೀನಾಮೆ ನೀಡಲಿದ್ದಾರೆ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ತಿಳಿಸಿದ್ದಾರೆ.
ಅಧ್ಯಕ್ಷ ಗೊಟಬಯ ಅವರು ಜುಲೈ ೧೩ರಂದು ರಾಜೀನಾಮೆ ನೀಡಲಿದ್ದಾರೆ ಎಂದು ಸ್ಪೀಕರ್ ತಿಳಿಸಿದ್ದಾರೆ. ಸಾವಿರಾರು ಮಂದಿ ಪ್ರತಿಭಟನಾಕಾರರು ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ ಬಳಿಕ ಸ್ಪೀಕರ್ ಈ ವಿಷಯ ತಿಳಿಸಿದ್ದರು. ಇದೀಗ ಪ್ರಧಾನಿಯವರ ಕಚೇರಿ ಅಧಿಕೃತವಾಗಿ ದೃಢಪಡಿಸಿದೆ.
ಪ್ರಧಾನಿ ರನಿಲ್ ವಿಕ್ರಮಸಿಂಘೆ ಕೂಡ ಕಳೆದ ಶನಿವಾರ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಗೊಟಬಯ ರಾಜೀನಾಮೆಯ ಬಳಿಕ ಸರ್ವ ಪಕ್ಷಗಳ ಹಂಗಾಮಿ ಸರ್ಕಾರ ರಚನೆಗೆ ಪ್ರತಿಪಕ್ಷಗಳು ಸಮ್ಮತಿಸಿವೆ.
ಈ ನಡುವೆ ಪ್ರತಿಭಟನೆ ನಡೆಯುತ್ತಿರುವ ಗಾಲ್ ಫೇಸ್ ಸ್ಥಳಕ್ಕೆ ಸೇನಾ ಪಡೆಯ ರವಾನೆ ಕುರಿತ ವರದಿಗಳನ್ನು ಮಿಲಿಟರಿ ಮುಖ್ಯಸ್ಥರು ನಿರಾಕರಿಸಿದ್ದಾರೆ. ಪ್ರತಿಭಟನೆಯನ್ನು ಹತ್ತಿಕ್ಕಲು ಸೇನೆ ಮುಂದಾಗಿಲ್ಲ ಎಂದು ಅವರು ತಿಳಿಸಿದ್ದಾರೆ.