ಕೊಲಂಬೊ: ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಸರ್ವ ಪಕ್ಷಗಳ ಸರ್ಕಾರ ರಚನೆಯಾಗಲಿದ್ದು, ನೂತನ ಅಧ್ಯಕ್ಷರನ್ನು ಜುಲೈ ೨೦ರಂದು ಆಯ್ಕೆ ಮಾಡಲಾಗುತ್ತದೆ.
ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಪ್ರಧಾನಿ ರನಿಲ್ ವಿಕ್ರಮಸಿಂಘೆ ಈಗಾಗಲೇ ಪ್ರಕಟಿಸಿದಂತೆ ರಾಜೀನಾಮೆ ನೀಡಲಿದ್ದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.
ಸೋಮವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ವಿಷಯವನ್ನು ಸ್ಪೀಕರ್ ಮಹಿಂದಾ ಯಪ ಅಭಯ ವರ್ಧನ ತಿಳಿಸಿದ್ದಾರೆ. ನೂತನ ಸರ್ಕಾರ ರಚನೆಯಾದ ಮೇಲೆ ತಾವು ರಾಜೀನಾಮೆ ನೀಡುವುದಾಗಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಸ್ಪಷ್ಟಪಡಿಸಿದ್ದಾರೆ.
ಸದೇಶದ ಸಂವಿಧಾನಕ್ಕಿಂತ ಯಾರೂ ಮೇಲಲ್ಲ, ಸಂಸತ್ತಿನ ತೀರ್ಮಾನದಂತೆಯೇ ಎಲ್ಲರೂ ನಡೆಯಬೇಕು. ಹೊರಗಿನಿಂದ ಯಾರೂ ಅಧಿಕಾರ ಚಲಾಯಿಸುವಂತಿಲ್ಲ ಎಂದಿರುವ ಪ್ರಧಾನಿ ವಿಕ್ರಮಸಿಂಘೆ ಸರ್ವಪಕ್ಷಗಳ ಸರ್ಕಾರ ಅಧಿಕಾರಕ್ಕೆ ಬರುವುದನ್ನು ಖಚಿತಪಡಿಸಿದ್ದಾರೆ.
ಜುಲೈ ೧೫ರಂದು ಸಂಸತ್ ಅಧಿವೇಶನ ಆರಂಭವಾಗಲಿದ್ದು, ಅಧ್ಯಕ್ಷರ ಹುದ್ದೆಯ ಕುರಿತು ಅಧಿಕೃತವಾಗಿ ಪ್ರಕಟಣೆ ಹೊರಡಿಸಲಾಗುತ್ತದೆ. ಜುಲೈ ೧೯ರಂದು ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ೨೦ರಂದು ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಶ್ರೀಲಂಕಾದ ಸಂವಿಧಾನದ ಪ್ರಕಾರ ಅಧ್ಯಕ್ಷರು ಮತ್ತು ಪ್ರಧಾನಿ ಇಬ್ಬರೂ ರಾಜೀನಾಮೆ ನೀಡಿದರೂ, ೩೦ ದಿನಗಳ ಕಾಲ ಸ್ಪೀಕರ್ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಬಹುದಾಗಿರುತ್ತದೆ.
ಅಧ್ಯಕ್ಷ ಗೊಟಬಯ ರಾಜಪಕ್ಸ ಬುಧವಾರದಂದು ರಾಜೀನಾಮೆ ನೀಡಲಿದ್ದಾರೆ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ಪ್ರಕಟಿಸಿದ್ದಾರೆ. ಆದರೆ ಅಧ್ಯಕ್ಷರ ಕಾರ್ಯಾಲಯವು ಈ ಹೇಳಿಕೆಯನ್ನು ನಿರಾಕರಿಸಿದ್ದು, ಸ್ಪೀಕರ್ ಮಾತ್ರ ಅಧ್ಯಕ್ಷರಿಗೆ ಸಂಬಂಧಸಿದಂತೆ ಹೇಳಿಕೆ ನೀಡಬಹುದಾಗಿದೆ ಎಂದಿದೆ. ಇದರಿಂದ ದ್ವೀಪರಾಷ್ಟ್ರದ ಇಬ್ಬರು ನಾಯಕರ ನಡುವೆ ಭಿನ್ನಾಭಿಪ್ರಾಯಗಳಿರುವುದು ಬೆಳಕಿಗೆ ಬಂದಿದೆ.
ಅಧ್ಯಕ್ಷರೆಲ್ಲಿ?: ಈ ನಡುವೆ ಅಧ್ಯಕ್ಷ ಗೊಟಬಯ ರಾಜಪಕ್ಸ ಎಲ್ಲಿದ್ದಾರೆ ಎಂಬ ಕುರಿತು ಗೊಂದಲ ಹಾಗೆಯೇ ಮುಂದುವರಿದಿದೆ. ಅವರು ರಾಷ್ಟ್ರವನ್ನು ತೊರಿದ್ದಾರೆಯೇ ಅಥವಾ ದೇಶದಲ್ಲಿಯೇ ರಹಸ್ಯ ತಾಣದಲ್ಲಿ ಅಡಗಿಕೊಂಡಿದ್ದಾರೆಯೇ? ಎಂಬ ಕುರಿತು ಲಂಕಾದ ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಈ ನಡುವೆ ಅವರು ಸೋಮವಾರ ರಾತ್ರಿ ದುಬೈಗೆ ತೆರಳಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಅವರು ಈಗಾಗಲೇ ದೇಶ ತೊರೆದಿದ್ದಾರೆ ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದ ಸ್ಪೀಕರ್ ಮಹಿಂದಾ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದು, ರಾಜಪಕ್ಸ ಇನ್ನೂ ದೇಶದಲ್ಲಿಯೇ ಇದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐಗೆ ಖಚಿತ ಪಡಿಸಿದ್ದಾರೆ.
ಇದನ್ನೂ ಓದಿ| ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜೀನಾಮೆ ದೃಢೀಕರಿಸಿದ ಪ್ರಧಾನಿ ರನಿಲ್ ವಿಕ್ರಮಸಿಂಘೆ