ಕೊಲಂಬೊ: ಶ್ರೀಲಂಕಾದಲ್ಲಿ ಸರ್ಕಾರದ ವಿರುದ್ಧ ನಾಗರಿಕ ದಂಗೆಯ ನಡುವೆ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಸೇನಾ ಪಡೆಯ ಮೂವರು ಮುಖ್ಯಸ್ಥರನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.
ನಾಗರಿಕರ ದಂಗೆ ತಾರಕಕ್ಕೇರುತ್ತಿದ್ದಂತೆ ಅಧಿಕೃತ ನಿವಾಸವನ್ನು ತೊರೆದು, ನೌಕಾಪಡೆಯ ಹಡಗಿನ ಮೂಲಕ ತೆರಳಿದ್ದ ಅಧ್ಯಕ್ಷ ರಾಜಪಕ್ಷ ಜುಲೈ ೯ರ ಪ್ರತಿಭಟನೆಯ ಬಳಿಕ ಲಂಕಾಗೆ ಸೋಮವಾರ ಹಿಂತಿರುಗಿದ್ದಾರೆ. ಹಾಗೂ ಸೇನೆಯ ಮೂವರು ಮುಖ್ಯಸ್ಥರನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಅಧ್ಯಕ್ಷ ಗೊಟಬಯ ಎಲ್ಲಿದ್ದಾರೆ ಎಂಬುದರ ಬಗ್ಗೆ ಅವರ ಕಚೇರಿ ಇನ್ನೂ ದೃಢಪಡಿಸಿಲ್ಲ.
ಅಧ್ಯಕ್ಷ ರಾಜಪಕ್ಸ ಅವರು ನಾಳೆ (ಜುಲೈ ೧೩) ರಾಜೀನಾಮೆ ನೀಡುವ ನಿರೀಕ್ಷೆ ಇದೆ. ಪ್ರಧಾನಿ ವಿಕ್ರಮಸಿಂಘೆ ಕೂಡ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಹೀಗಿದ್ದರೂ ನಾಗರಿಕರ ಪ್ರತಿಭಟನೆ ಮುಂದುವರಿದಿದೆ.
ಈ ನಡುವೆ ಪ್ರಮುಖ ಪ್ರತಿಪಕ್ಷ ಸಮಾಗಿ ಜನ ಬಾಲಾವೆಗಯಾ (ಎಸ್‌ಜೆಬಿ) ಸೋಮವಾರ ಹಂಗಾಮಿ ಅಧ್ಯಕ್ಷ ಹುದ್ದೆಗೆ ಅಭ್ಯರ್ಥಿಯಾಗಿ ಸಜಿತ್ ಪ್ರೇಮದಾಸ ಅವರನ್ನು ಅವಿರೋಧವಾಗಿ ಹೆಸರಿಸಿದೆ. ಶ್ರೀಲಂಕಾದಲ್ಲಿ ಅಧಿಕಾರ ವರ್ಗಾವಣೆ ಶಾಂತ ರೀತಿಯಲ್ಲಿ ನಡೆಯಬೇಕು ಎಂದು ವಿಶ್ವಸಂಸ್ಥೆ ಪ್ರತಿಕ್ರಿಯಿಸಿದೆ.
ಜುಲೈ ೨೦ರಂದು ಶ್ರೀಲಂಕಾ ಸಂಸತ್ತಿನಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸರ್ವಪಕ್ಷಗಳ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಅಸ್ತಿತ್ವಕ್ಕೆ ಬರಲಿದೆ ಸರ್ವ ಪಕ್ಷಗಳ ಸರ್ಕಾರ; ಜು.20ಕ್ಕೆ ನೂತನ ಅಧ್ಯಕ್ಷರ ಆಯ್ಕೆ