- ಶ್ರೀಲಂಕಾದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ 8 ಬಲಿ,
- ಸಂಸದರ ಹತ್ಯೆ
- 200ಕ್ಕೂ ಹೆಚ್ಚು ಮಂದಿಗೆ ಗಾಯ
- ರಾಜಪಕ್ಷ ಬೆಂಬಲಿಗರು-ಪ್ರತಿಪಕ್ಷ, ಪ್ರತಿಭಟನಾಕಾರರ ನಡುವೆ ಘರ್ಷಣೆ
- ದೇಶಾದ್ಯಂತ ಕರ್ಫ್ಯೂ ಜಾರಿ
ಕೊಲಂಬೊ: ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ಪ್ರಧಾನಿ ಮಹಿಂದ ರಾಜಪಕ್ಷ ಸೋಮವಾರ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದ್ದು, ಮಾಜಿ ಪ್ರಧಾನಿಯ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ ಮಂಗಳವಾರ 8ಕ್ಕೆ ಏರಿದೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸರಕಾರದ ಪರ ಮತ್ತು ವಿರೋಧಿಗಳ ನಡುವಣ ಹಿಂಸಾಚಾರ ತಾರಕಕ್ಕೇರಿದೆ. ನಾಗರಿಕ ದಂಗೆಯನ್ನು ಹತ್ತಿಕ್ಕಲು ದೇಶಾದ್ಯಂತ ಕರ್ಫ್ಯೂ ಜಾರಿಯಾಗಿದೆ. ಕೊಲಂಬೊದಲ್ಲಿ ಭದ್ರತೆಗೆ ಸೇನೆಯನ್ನು ನಿಯೋಜಿಸಲಾಗಿದೆ. ಹತರಾದವರಲ್ಲಿ ಒಬ್ಬ ಸಂಸದರೂ ಸೇರಿದ್ದಾರೆ. 40ಕ್ಕೂ ಹೆಚ್ಚು ರಾಜಕಾರಣಿಗಳ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.
ಮಹಿಂದ ರಾಜಪಕ್ಷ ಅವರು ಹೆಚ್ಚುತ್ತಿರುವ ಒತ್ತಡಕ್ಕೆ ಮಣಿದು ಸೋಮವಾರ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಇದರೊಂದಿಗೆ ಹಿಂಸಾಚಾರ ಕೂಡ ಉಲ್ಬಣಿಸಿದೆ. ಮಹಿಂದ ರಾಜಪಕ್ಷ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.
ಸರಕಾರದ ಪರ-ವಿರೋಧಿಗಳ ಹಿಂಸಾಚಾರ
ಪ್ರಧಾನಿಯವರ ಅಧಿಕೃತ ನಿವಾಸಕ್ಕೆ ಸಾವಿರಾರು ಸರಕಾರಿ ವಿರೋಧಿ ಪ್ರತಿಭಟನಾಕಾರರು ಸೋಮವಾರ ಮುತ್ತಿಗೆ ಹಾಕಿದ್ದರು. ಆಗ ಮಹಿಂದ ರಾಜಪಕ್ಷ ಅವರ ಉದ್ರಿಕ್ತ ಬೆಂಬಲಿಗರು ಹಾಗೂ ಪ್ರತಿಭಟನಾಕಾರರ ನಡುವೆ ಹಿಂಸಾಚಾರ ಉಂಟಾಯಿತು. ಗೆಜೆಟ್ ಅಧಿಸೂಚನೆಯ ಪ್ರಕಾರ ರಾಜೀನಾಮೆ ಅಂಗೀಕಾರವಾಗಿದೆ. ಮಹಿಂದ ಅವರ ಕಿರಿಯ ಸೋದರ ಮತ್ತು ಅಧ್ಯಕ್ಷ ಗೋಟಬಯಾ ರಾಜಪಕ್ಷ ಅವರು ಪ್ರಸ್ತುತ ಆಡಳಿತದ ಸಾರಥ್ಯ ವಹಿಸಿದ್ದಾರೆ.
ಮಾಜಿ ಪ್ರಧಾನಿ ನಿವಾಸಕ್ಕೆ ಬೆಂಕಿ
ಪ್ರಧಾನಿ ಹುದ್ದೆಗೆ ಮಹಿಂದಾ ರಾಜಪಕ್ಷ ಸೋಮವಾರ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಲಂಕಾದ ಕುರುನೇಗಲ್‌ನಲ್ಲಿರುವ ಅವರ ನಿವಾಸಕ್ಕೆ ಪ್ರತಿಭಟನಾಕಾರರು ಸೋಮವಾರ ಬೆಂಕಿ ಹಚ್ಚಿದರು.
ಮೆಡಾಮುಲನಾ ಮತ್ತು ಹಂಬನಟೊಟಾದಲ್ಲಿ ರಾಜಪಕ್ಷ ಅವರ ಪೂರ್ವಿಕರ ನಿವಾಸ, ಮ್ಯೂಸಿಯಂ ಕೂಡ ಬೆಂಕಿಗೆ ಆಹುತಿಯಾಗಿದೆ. ರಾಜಪಕ್ಷ ಅವರ ಹೆತ್ತವರ ಮೇಣದ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ. ಮೊರಾತುವಾದ ಮೇಯರ್ ಸಮನ್ ಲಾಲ್ ಫನಾಂಡೊ, ಸಂಸದರಾದ ಸನತ್ ನಿಶಾಂತ, ರಮೇಶ್ ಪತಿರಣ, ಮಹಿಪಾಲ ಹೀರತ್, ತಿಸ್ಸಾ ಕುಟ್ಟಿರಚಿಚಿ, ನಿಮಲ್ ಲಾನ್ಸಾ ಅವರ ನಿವಾಸ ಹೊತ್ತಿ ಉರಿದಿದೆ. ವಿದ್ಯಾರ್ಥಿ ಸಂಘಟನೆ ಇಂಟರ್ ಯೂನಿವರ್ಸಿಟಿ ಸ್ಟೂಡೆಂಟ್ಸ್ ಫೆಡರೇಷನ್ (ಐಯುಎಸ್‌ಎಫ್) ಕಾರ್ಯಕರ್ತರು ಬೀದಿಗಿಳಿದಿದ್ದು, ಆಡಳಿತಾರೂಢ ಪಕ್ಷದ ರಾಜಕಾರಣಿಗಳು, ಸಂಸದರ ನಿವಾಸಕ್ಕೆ ದಾಳಿ ನಡೆಸಿದರು.
ಸಂಸದರ ಹತ್ಯೆ
ಶ್ರೀಲಂಕಾದ ಆಡಳಿತಾರೂಢ ಪಕ್ಷದ ಸಂಸದ ಅಮರಕೀರ್ತಿ ಅಥುಕೊರೊಲಾ ಗಲಭೆಯಲ್ಲಿ ಸೋಮವಾರ ಹತರಾಗಿದ್ದಾರೆ. ತಮ್ಮ ಕಾರಿಗೆ ಅಡ್ಡ ಬಂದ ಇಬ್ಬರು ಪ್ರತಿಭಟನಾಕಾರರ ಮೇಲೆ ಸಂಸದರು ಗುಂಡು ಹಾರಿಸಿದರು. ಇದಾದ ನಂತರ ಸಂಸದರು ಸಾವಿಗೀಡಾಗಿದ್ದಾರೆ. ಕೆಲ ವರದಿಗಳ ಪ್ರಕಾರ ಸಂಸದರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಡಳಿತ ಪಕ್ಷದ ಸಂಸದರು, ಸಚಿವರ ನಿವಾಸಗಳಿಗೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು.
ಆಡಳಿತ ವಿರೋಧಿ ಅಲೆ, ಆರ್ಥಿಕ ಬಿಕ್ಕಟ್ಟು
ಲಂಕಾದ್ಯಂತ ಕಳೆದ ಹಲವಾರು ವಾರಗಳಿಂದ ಸರಕಾರಿ ವಿರೋಧಿ ಪ್ರತಿಭಟನೆಗಳು ನಡೆಯುತ್ತಿವೆ. ಆಹಾರ ಮತ್ತು ಇಂಧನ ಬಿಕ್ಕಟ್ಟು ತೀವ್ರವಾಗಿದೆ. ವಿದೇಶಿ ವಿನಿಮಯ ಸಂಗ್ರಹ ಬರಿದಾಗಿದೆ. ಕೋವಿಡ್ ಬಿಕ್ಕಟ್ಟಿನ ಬಳಿಕ ಪ್ರವಾಸೋದ್ಯಮ ನೆಲಕಚ್ಚಿದೆ. ರಾಜಪಕ್ಷ ಕುಟುಂಬದ ಕೌಟುಂಬಿಕ ರಾಜಕೀಯದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಭ್ರಷ್ಟಾಚಾರ ಪ್ರಕರಣಗಳ ಕಳಂಕವನ್ನು ರಾಜಪಕ್ಸ ಕುಟುಂಬ ಎದುರಿಸುತ್ತಿದೆ. ಕಳೆದ ವರ್ಷ ಶ್ರೀಲಂಕಾದಲ್ಲಿ ಸಂಪೂರ್ಣ ಸಾವಯವ ಕೃಷಿಗೋಸ್ಕರ ರಾಸಾಯನಿಕ ಗೊಬ್ಬರ ಬಳಕೆಯನ್ನು ಶೇ.100ರಷ್ಟು ನಿಷೇಧಿಸಲಾಯಿತು. ಇದು ಕೂಡ ಆಹಾರ ಬಿಕ್ಕಟ್ಟಿಗೆ ಕಾರಣ ಎನ್ನಲಾಗುತ್ತಿದೆ.