ಸೋಲ್: ದಕ್ಷಿಣ ಕೊರಿಯಾದಲ್ಲಿ ಹಾಲೊವೀನ್ ಪಾರ್ಟಿ (Halloween Party) (ಭೂತದ ವೇಷ ಧರಿಸಿ ಪಾರ್ಟಿ ಮಾಡುವುದು) ವೇಳೆ ಕಾಲ್ತುಳಿತ ಉಂಟಾಗಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 151 ಕ್ಕೆ ಏರಿಕೆಯಾಗಿದೆ. ಕನಿಷ್ಠ 270 ಮಂದಿ ಕಣ್ಮರೆಯಾಗಿದ್ದಾರೆ.
ಗಾಯಾಳುಗಳನ್ನು ಹಾಗೂ ಹೃದಯಾಘಾತಕ್ಕೀಡಾದವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ಕೂಡ ಅಧಿಕಾರಿಗಳಿಗೆ ಕಷ್ಟವಾಗಿದೆ. ಘಟನೆಯಲ್ಲಿ 150ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಈ ದುರ್ಘಟನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ವಿಶ್ವ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.
“ಸೋಲ್‌ನ ಇಟಾಯೆವೊನ್ ಪ್ರದೇಶದಲ್ಲಿ ನೂರಾರು ಜನ ಹಾಲೊವೀನ್ ಪಾರ್ಟಿ ಮಾಡುತ್ತಿದ್ದರು. ಇದೇ ವೇಳೆ ನೂಕುನುಗ್ಗಲು ಉಂಟಾಗಿ, ಕಾಲ್ತುಳಿತವೂ ಆಗಿದೆ. ಆದರೆ, ವಿಚಿತ್ರ ಎಂಬಂತೆ 50ಕ್ಕೂ ಹೆಚ್ಚು ಜನರಿಗೆ ಹೃದಯಾಘಾತವಾಗಿದೆ. ಏಕಾಏಕಿ ಇಷ್ಟೊಂದು ಜನರಿಗೆ ಹೃದಯಾಘಾತವಾಗಲು ಕಾರಣ ಏನೆಂದು ಗೊತ್ತಾಗಿಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹ್ಯಾಮಿಲ್ಟನ್ ಹೋಟೆಲ್‌ನಲ್ಲಿ ಪಾರ್ಟಿ ಮಾಡುವಾಗ ದುರಂತ ಸಂಭವಿಸಿದೆ. 400ಕ್ಕೂ ಅಧಿಕ ಎಮರ್ಜನ್ಸಿ ವರ್ಕರ್‌ಗಳು, 140ಕ್ಕೂ ಅಧಿಕ ವಾಹನಗಳನ್ನು ಸ್ಥಳಕ್ಕೆ ರವಾನಿಸಿ, ಗಾಯಗೊಂಡವರು, ಹೃದಯಾಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಇದುವರೆಗೆ ಅಧಿಕಾರಿಗಳು ಸಾವಿನ ಕುರಿತು ನಿಖರ ಮಾಹಿತಿ ನೀಡಿಲ್ಲ.
ಏನಿದು ಹಾಲೋವಿನ್?
ಹಾಲೋವಿನ್ ಹಬ್ಬಕ್ಕೆ ಅದರದ್ದೇ ಪ್ರಾಚೀನ ಇತಿಹಾಸ ಇದೆ. ಹಾಲೋವಿನ್ ಹಬ್ಬದ ದಿನ ತಮ್ಮ ಪೂರ್ವಜರು ಮನೆಗೆ ಬರುತ್ತಾರೆ ಎಂದು ಜನ ನಂಬುತ್ತಾರೆ. ಆ ದಿನ ಪೂರ್ವಜರನ್ನು ಗೌರವಿಸಲು ಅಸ್ತಿ ಪಂಜರ, ಭೂತ-ಪ್ರೇತಗಳಂತೆ ಭಯಾನಕವಾಗಿ ವೇಷ ಭೂಷಣಗಳನ್ನು ಧರಿಸಿ ಪಾರ್ಟಿ ಮಾಡುತ್ತಾರೆ. ವಿಶೇಷವಾಗಿ ಮಕ್ಕಳಿಗೆ ಇದನ್ನು ಬಲು ಮೋಜಿನ ಹಬ್ಬ ಎಂದು ಪರಿಗಣಿಸಲಾಗುತ್ತದೆ. ಹಲವಾರು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ಹಾಲೋವಿನ್ ಹಬ್ಬವನ್ನು ಆಚರಿಸಲಾಗುತ್ತದೆ.
ಇದರೊಂದಿಗೆ ಸಾರ್ವಜನಿಕ ಸಮಾರಂಭಗಳಲ್ಲಿ ತಿಂಗಳೊಳಗೆ ಎರಡನೇ ಭೀಕರ ದುರಂತ ಸಂಭವಿಸಿದಂತಾಗಿದೆ. ಕಳೆದ ಅಕ್ಟೋಬರ್ 1ರಂದು ಇಂಡೊನೇಷ್ಯಾದ ಮಲಾಂಗ್‌ನಲ್ಲಿ ಫುಟ್ಬಾಲ್ ಪಂದ್ಯವೊಂದರ ವೇಳೆ ಘರ್ಷಣೆ, ಕಾಲ್ತುಳಿತಕ್ಕೆ ಸಿಲುಕಿ 125 ಮಂದಿ ಸಾವಿಗೀಡಾಗಿದ್ದರು.