Site icon Vistara News

Stampede: ಸೇನಾ ನೇಮಕಾತಿ ವೇಳೆ ಕಾಲ್ತುಳಿತ; 31 ಸಾವು, 140 ಮಂದಿಗೆ ಗಾಯ

stampede Congo republic

ಕಾಂಗೋ: ರಿಪಬ್ಲಿಕ್ ಆಫ್ ಕಾಂಗೋದ (Congo republic) ರಾಜಧಾನಿ ಬ್ರ್ಯಾಝಾವಿಲ್ಲೆಯ ಕ್ರೀಡಾಂಗಣದಲ್ಲಿ ಸೇನಾ ನೇಮಕಾತಿ ಅಭಿಯಾನದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ (Stampede) ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಮತ್ತು 140ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.

ನ.14ರಿಂದ ಸೇನಾ ನೇಮಕಾತಿ ಆಂದೋಲನ ನಡೆಯುತ್ತಿದ್ದ ಒರ್ನಾನೊ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ಈ ದುರಂತ ನಡೆದಿದೆ. ಸರ್ಕಾರದ ಪ್ರಕಾರ, ನೇಮಕಾತಿ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದೆ. ಸತ್ತವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಒಂದು ದಿನದ ಶೋಕಾಚರಣೆಯನ್ನು ಘೋಷಿಸಲಾಯಿತು.

ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಉದ್ಯೋಗ ನೀಡುವ ಕೆಲವೇ ಸಂಸ್ಥೆಗಳಲ್ಲಿ ಒಂದಾದ ಸೇನೆಗೆ ಸೇರಲು ಸಾಲುಗಟ್ಟಿ ನಿಂತಿದ್ದ 18ರಿಂದ 25 ವರ್ಷ ವಯಸ್ಸಿನ ಉತ್ಸಾಹಿ ಯುವಕರಿಂದ ಕಾಲ್ತುಳಿತ ಉಂಟಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ವಿಶ್ವಬ್ಯಾಂಕ್ ಅಂಕಿಅಂಶಗಳ ಪ್ರಕಾರ, ಕಾಂಗೋ ಗಣರಾಜ್ಯದಲ್ಲಿ ಯುವ ನಿರುದ್ಯೋಗ ದರ ಸುಮಾರು 42 ಪ್ರತಿಶತದಷ್ಟಿದೆ. ತೈಲ ಉತ್ಪಾದಿಸುವ ರಾಷ್ಟ್ರವಾಗಿದ್ದರೂ ಇಲ್ಲಿ ಬಡತನ ವ್ಯಾಪಕವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 15 ಪ್ರತಿಶತ ಜನ ಮಾತ್ರ ವಿದ್ಯುತ್ ಪಡೆದಿದ್ದಾರೆ.

ಒರ್ನಾನೊ ಕ್ರೀಡಾಂಗಣದಲ್ಲಿ ಸಾಲುಗಟ್ಟಿ ನಿಂತಿದ್ದ ಕೆಲವರು ತಾಳ್ಮೆ ಕಳೆದುಕೊಂಡು ಬಲವಂತವಾಗಿ ನುಗ್ಗಾಡಿದ ಪರಿಣಾಮ ದುರಂತಕ್ಕೆ ಕಾರಣವಾಯಿತು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಸಂಘಟಕರ ಪ್ರಕಾರ, ಇದು ನೇಮಕಾತಿಯ ಕೊನೆಯ ದಿನವಾಗಿತ್ತು. ಅದಕ್ಕಾಗಿಯೇ ಸಾವಿರಾರು ಜನ ತಡರಾತ್ರಿಯವರೆಗೆ ಕಾದಿದ್ದರು. ಕೆಲವರು ತಾಳ್ಮೆ ಕಳೆದುಕೊಂಡು ಬಲವಂತವಾಗಿ ಒಳಗೆ ನುಗ್ಗಾಡಿದ ಪರಿಣಾಮ ನೂಕುನುಗ್ಗಲು ಉಂಟಾಯಿತು.

ಇದನ್ನೂ ಓದಿ: Durga Puja: ಕಾಪಾಡಲಿಲ್ಲ ದುರ್ಗೆ; ಪೂಜೆ ವೇಳೆ ಕಾಲ್ತುಳಿತಕ್ಕೆ ಮಗು ಸೇರಿ ಮೂವರ ಸಾವು

Exit mobile version