Site icon Vistara News

Israel Palestine War: ಬಾಯ್ತೆರೆದ ಹೊಟ್ಟೆ, ಕಂದಮ್ಮಗಳ ಶವಗಳು; ಇಸ್ರೇಲಿಗರ ಸ್ಥಿತಿ ಶತ್ರುಗೂ ಬೇಡ!

Israel Palestine War

Stomach Ripped Open, Baby Was There: Israel Is Collecting Bodies Near Gaza

ಜೆರುಸಲೇಂ: ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ನಡುವಿನ ಸಮರವು (Israel Palestine War) ಏಳನೇ ದಿನಕ್ಕೆ ಕಾಲಿಟ್ಟಿದೆ. ಇಸ್ರೇಲ್‌ ಮೇಲೆ ಸಾವಿರಾರು ರಾಕೆಟ್‌ಗಳ ಮೂಲಕ ದಾಳಿ ಆರಂಭಿಸಿದ ಹಮಾಸ್‌ ಉಗ್ರರ ಮೇಲೆ ಇಸ್ರೇಲ್‌ ಕೂಡ ದಾಳಿ ನಡೆಸುತ್ತಿದೆ. ಆದರೆ, ದಾಳಿ-ಪ್ರತಿದಾಳಿಯಿಂದಾಗಿ ಇಸ್ರೇಲ್‌ ಹಾಗೂ ಗಾಜಾಪಟ್ಟಿಯು ಅಕ್ಷರಶಃ ಮಸಣದಂತಾಗಿವೆ. ಅದರಲ್ಲೂ, ಗಾಜಾ ಪಟ್ಟಿಯ ಬಳಿ ಭಾರಿ ಪ್ರಮಾಣದಲ್ಲಿ ಇಸ್ರೇಲ್‌ ನಾಗರಿಕರು, ಮಕ್ಕಳ ಶವಗಳು ಪತ್ತೆಯಾಗಿರುವುದು ಹಮಾಸ್‌ ಉಗ್ರರ(Hamas Terrorists) ಕ್ರೌರ್ಯವನ್ನು ಸಾರುತ್ತಿದೆ.

ಇಸ್ರೇಲ್‌ ಯಾವಾಗ ದಾಳಿಗೆ ಈಡಾಗುತ್ತದೆಯೋ, ಯಾವಾಗೆಲ್ಲ ಶತ್ರುಗಳ ದಾಳಿಗೆ ಜನ ಸಾವಿಗೀಡಾಗುತ್ತಾರೋ, ಆಗೆಲ್ಲ ಶವಗಳನ್ನು ಹೊರತೆಗೆಯುವ ಕಾರ್ಯದಲ್ಲಿ ಯೊಸ್ಸಿ ಲಾಂಡೌ (Yossi Landau) ತೊಡಗುತ್ತಾರೆ. ಆದರೆ, ಈ ಬಾರಿ ಅವರಿಗೆ ಶವಗಳನ್ನು ಹೊರತೆಗೆಯುವುದು ಬಿಡಿ, ಅವುಗಳನ್ನು ನೋಡಲು ಕೂಡ ಆಗುತ್ತಿಲ್ಲ. ಗಾಜಾ ಸಮೀಪದ ಸ್ಡೆರೋಟ್‌ ಎಂಬ ಪಟ್ಟಣದಲ್ಲಿ ಹಮಾಸ್‌ ಉಗ್ರರ ದಾಳಿಗೆ ಬಲಿಯಾಗಿರುವ ಶವಗಳನ್ನು ನೋಡಿದ ಕರಾಳ ಅನುಭವವನ್ನು ಅವರು ಮಾಧ್ಯಮಗಳ ಜತೆ ಹಂಚಿಕೊಂಡಿದ್ದಾರೆ. “ಜನರ ಕರುಳುಗಳು ಹೊರಗೆ ಬಂದಿವೆ. ಮಕ್ಕಳ ಹೊಟ್ಟೆಗಳು ಬಾಯ್ತೆರೆದಿವೆ. ಎಲ್ಲೆಂದರಲ್ಲಿ ಬಿದ್ದಿರುವ ಶವಗಳು ಮನಸ್ಸನ್ನು ಕಿವುಚುತ್ತಿವೆ” ಎಂದು ಅವರು ಹೇಳಿದ್ದಾರೆ.

ದಾಳಿಯಿಂದ ಮಕ್ಕಳ ಪರಿಸ್ಥಿತಿ

“ಜನರ ಶವಗಳನ್ನು ಹೊರತೆಗೆಯುವ ಜಾಕಾ ಎಂಬ ಸಂಸ್ಥೆಗೆ ನಾನು 33 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆದರೆ, ನಾನು ಎಂದಿಗೂ ಮಾನಸಿಕವಾಗಿ ಇಷ್ಟು ಕುಗ್ಗಿರಲಿಲ್ಲ. ನಾನು ಇಲ್ಲಿಗೆ ಕಾರಿನಲ್ಲಿ ಬಂದರೆ, ಕಣ್ಣಿನ ದೃಷ್ಟಿ ಹಾಯಿಸಿದ ಕಡೆಗೆಲ್ಲ ಶವಗಳೇ ಕಾಣುತ್ತಿವೆ. ಕಾರಿನಲ್ಲಿ 15 ನಿಮಿಷ ಸಾಗುವ ದಾರಿಯನ್ನು 11 ತಾಸು ಕ್ರಮಿಸಿದ್ದೇನೆ. ಜನರ ಶವಗಳನ್ನು ನೋಡಿದರೆ ಮನಸ್ಸು ಕುದ್ದುಹೋಗುತ್ತಿದೆ” ಎಂದು 55 ವರ್ಷದ ಯೊಸ್ಸಿ ಲಾಂಡೌ ಅವರು ಕರಾಳ ಅನುಭವವನ್ನು ಬಿಚ್ಚಿದ್ದಾರೆ.

ಇದನ್ನೂ ಓದಿ: Israel Palestine War: ಸಿರಿಯಾದ ಎರಡು ಏರ್‌ಪೋರ್ಟ್‌ಗಳನ್ನು ಧ್ವಂಸ ಮಾಡಿದ ಇಸ್ರೇಲ್

ಹಸುಳೆಗಳ ಫೋಟೊ ಹಂಚಿಕೊಂಡ ಇಸ್ರೇಲ್‌

ಹಸುಳೆಗಳು ಮತ್ತು ಮಕ್ಕಳನ್ನು ಹಮಾಸ್ ಬಂಡುಕೋರರು ಹತ್ಯೆ ಮಾಡಿದ, ಜೀವಂತವಾಗಿ ಸುಟ್ಟು ಹಾಕಿದ ಫೋಟೋಗಳನ್ನು ಇಸ್ರೇಲ್‌ಗೆ ಭೇಟಿ ನೀಡಿದ ಅಮೆರಿಕದ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಾರ್ಯಾಲವು ತೋರಿಸಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಯುದ್ಧದ ವೇಳೆ, ಹಮಾಸ್ ಬಂಡುಕೋರರು ಮಕ್ಕಳನ್ನೂ ಹತ್ಯೆ ಮಾಡಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯವು ಹೇಳಿದೆ.

ವಾರ್ ರೂಮ್‌ಗಳು, ಮಿಲಿಟರಿ ನೆಲೆಗಳು, ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಟ್ಟಡಗಳು ಮತ್ತು ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕ ಹೊಂದಿದ ಸ್ಥಳಗಳು ಸೇರಿದಂತೆ ಗಾಜಾ ಪಟ್ಟಿಯಾದ್ಯಂತ ಹಮಾಸ್‌ನ ಎಲ್ಲಾ ಸಂಪನ್ಮೂಲಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಮಿಲಿಟರಿ ಹೇಳಿಕೊಂಡಿದೆ. ಹಮಾಸ್ ದಾಳಿಯ ನಂತರ ಇಸ್ರೇಲ್‌ನಲ್ಲಿ ಸಾವಿನ ಸಂಖ್ಯೆ 1,200 ಕ್ಕೆ ಏರಿದೆ ಮತ್ತು ಸುಮಾರು 3,300 ಮಂದಿ ಗಾಯಗೊಂಡಿದ್ದಾರೆ. ಏತನ್ಮಧ್ಯೆ, ಇಸ್ರೇಲ್ ದಾಳಿಗೆ ಗಾಜಾ ಪಟ್ಟಿಯಲ್ಲಿ 1,350 ಕ್ಕೂ ಹೆಚ್ಚು ಪ್ಯಾಲೆಸ್ಟೀನಿರು ಮೃತಪಟ್ಟಿದ್ದಾರೆ.

Exit mobile version