Site icon Vistara News

Indian Cultural Centre: ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು ಆಯ್ಕೆ

subramanya hebbagelu elected vice-president of Indian Cultural Centre in Qatar for the second time in a row

ದೊಹಾ (ಕತಾರ್): ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ನೂತನ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಕರ್ನಾಟಕದ ಬೈಂದೂರು ಮೂಲದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಆಯ್ಕೆಯಾಗಿದ್ದಾರೆ. ಈ ಮೂಲಕ ಸತತ ಎರಡನೇ ಬಾರಿಗೆ ಅವರು ಕತಾರ್‌ನ ಐಸಿಸಿ (Indian Cultural Centre) ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ 2023-2025 ಅವಧಿಗೆ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಂಗಸಂಸ್ಥೆಗಳ ಅಡಿಯಲ್ಲಿ ನೋಂದಣಿಯಾಗಿರುವ ಕತಾರ್‌ನ ಕರ್ನಾಟಕ ಸಂಘದ ಪ್ರತಿನಿಧಿಯಾಗಿ ಇವರು ಚುನಾಯಿತರಾಗಿದ್ದಾರೆ.

ಐಸಿಸಿ ಆಡಳಿತ ಸಮಿತಿಯ ರಚನೆಗಾಗಿ ನಡೆದ ಚುನಾವಣೆಯಲ್ಲಿ ಸಾವಿರಾರು ಸದಸ್ಯರು ಆನ್‌ಲೈನ್‌ “ಡಿಜಿಪೋಲ್“ ತಂತ್ರಾಂಶದ ಮೂಲಕ ತಮ್ಮ ಮತವನ್ನು ಚಲಾಯಿಸಿದ್ದರು. ಎರಡನೇ ಬಾರಿಗೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸುಬ್ರಹ್ಮಣ್ಯ ಅವರು ಜನರ ಸೇವೆಗೆ ಹೆಸರುವಾಸಿಯಾಗಿ ಈ ಸಂಸ್ಥೆಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ | Viral News : 14 ವರ್ಷದ ಕೆಲಸದಲ್ಲಿ 4,500 ಬಾರಿ ಸಿಗರೇಟ್‌ ಸೇದಿದ ಉದ್ಯೋಗಿ; 9 ಲಕ್ಷ ರೂ. ದಂಡ ಹಾಕಿದ ಸಂಸ್ಥೆ!

ಒಂದೂವರೆ ದಶಕದಿಂದ ಕತಾರ್‌ನಲ್ಲಿ ಕಾರ್ಯನಿಮಿತ್ತ ನೆಲೆಸಿರುವ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಕಳೆದ ಒಂದು ದಶಕದಿಂದ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಕೊರೊನಾ ಕಾಲದಲ್ಲಿ ಜನರಿಗೆ ಆಹಾರದ ಸಾಮಗ್ರಿ ಹಾಗೂ ಊಟದ ವ್ಯವಸ್ಥೆ, ಒಂದೇ ಭಾರತ್ ಅಡಿಯಲ್ಲಿ ನೂರಾರು ಭಾರತೀಯರನ್ನು ಮಾತೃಭೂಮಿಗೆ ಹಿಂದಿರುಗಲು ವಿಮಾನ ಸೇವೆ ಕಲ್ಪಿಸಿ ಕೊಡುವುದಕ್ಕೆ ಸಹಾಯ ಮಾಡಿದ್ದರು. ಹಾಗೆಯೇ ರಕ್ತದಾನ ಶಿಬಿರ, ಪರಿಸರ ದಿನಾಚರಣೆಗೆ ಸಸಿ ನೆಡುವ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇನ್ನು ವಿವಿಧ ಕಾರಣಗಳಿಂದ ನಿಧನರಾಗುವ ಭಾರತೀಯರ ಮೃತದೇಹವನ್ನು ಕತಾರ್‌ನಿಂದ ಮಾತೃಭೂಮಿಗೆ ತ್ವರಿತ ಗತಿಯಲ್ಲಿ ತಲುಪಿಸುವುದರಲ್ಲಿ ಇವರ ಕೊಡುಗೆ ಅಪಾರ. ಕಳೆದ ಆರು ವರ್ಷಗಳಲ್ಲಿ ಇಂತಹ ನೂರಾರು ಸೇವಾ ಕಾರ್ಯಗಳನ್ನು ನೆರವೇರಿಸಿದ್ದಾರೆ. ಕರ್ನಾಟಕ ಸಂಘ ಕತಾರ್, ಭಾರತೀಯ ಸಮುದಾಯ ಹಿತೈಷಿ ವೇದಿಕೆ (ಐ.ಸಿ.ಬಿ.ಎಫ್) ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ (ಐ.ಸಿ.ಸಿ) ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ | Google Layoffs: ಗೂಗಲ್‌ನಿಂದ ವಜಾಗೊಂಡ ನೌಕರರಿಗೆ ಸಿಗಲಿದೆ 2.6 ಕೋಟಿ ರೂ., ಇವರಿಗೆ ಬೇರೆ ನೌಕರಿಯೇ ಬೇಕಿಲ್ಲ

ಭಾರತೀಯ ದೂತವಾಸದ ಅಧಿಕಾರಿಗಳು ಹಾಗೂ ರಾಯಭಾರಿಗಳು ಇವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ರಾಯಭಾರಿಗಳಾದ ದೀಪಕ್ ಮಿತ್ತಲ್ ಹಾಗೂ ನಿಕಟ ಪೂರ್ವ ರಾಯಭಾರಿ ಕುಮರನ್ ಅವರು ಸುಬ್ರಹ್ಮಣ್ಯ ಅವರ ಸೇವೆಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿದ್ದಾರೆ. ಹಲವಾರು ಸ್ಥಳೀಯ ಸಂಘ ಸಂಸ್ಥೆಗಳಿಂದ ಇವರನ್ನು ಗೌರವಿಸಿ ಸನ್ಮಾನಿಸಿದೆ.

Exit mobile version