ಖಾರ್ಟೂಮ್, ಸೂಡಾನ್: ಪ್ಯಾರಾ ಮಿಲಿಟರಿ ಮತ್ತು ಸೇನೆಯ ಜತೆಗಿನ ಸಂಘರ್ಷದಲ್ಲಿ (Sudan Clashes) ಈವರೆಗೆ 56 ಜನರು ಮೃತಪಟ್ಟಿದ್ದು, ಕನಿಷ್ಠ 183 ಜನರಿಗೆ ಗಾಯಗೊಂಡ ಘಟನೆ ಸೂಡಾನ್‌ನಲ್ಲಿ ನಡೆದಿದೆ. ಈ ಘಟನೆಯ ವೇಳೆ, ಭಾರತೀಯ ಮೂಲದ ವ್ಯಕ್ತಿಯೊಬ್ಬರು ಗುಂಡೇಟಿನಿಂದ ಮೃತಪಟ್ಟಿದ್ದಾರೆಂಬ ಮಾಹಿತಿಯನ್ನು ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ. ಮೃತ ವ್ಯಕ್ತಿಯನ್ನುಅಲ್ಬರ್ಟ್ ಆಗಸ್ಟಿನ್ ಎಂದು ಗುರುತಿಸಲಾಗಿದೆ.
ಸೂಡಾನ್ ರಾಜಧಾನಿ ಖರ್ಟೂಮ್ ಬಳಿ ಈ ಸೇನೆ ಮತ್ತು ಅರೆಸೇನೆ ನಡುವೆ ಸಂಘರ್ಷ ಏರ್ಪಟ್ಟಿದೆ. ಗುಂಡಿನ ದಾಳಿ ಮುಂದುವರಿದಿದ್ದು, ಮೃತರು ಹಾಗೂ ಗಾಯಾಳಗಳು ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಏತನ್ಮಧ್ಯೆ, ಸೆಂಟ್ರಲ್ ಖಾರ್ಟೂಮ್‌ನಲ್ಲಿರುವ ಫೆಡೈಲ್ ಆಸ್ಪತ್ರೆಯು ಕಳೆದ ಕೆಲವು ಗಂಟೆಗಳಲ್ಲಿ ಡಜನ್‌ಗಟ್ಟಲೇ ಗಾಯಗೊಂಡ ನಾಗರಿಕರು ಮತ್ತು ಮಿಲಿಟರಿ ಸಿಬ್ಬಂದಿಯನ್ನು ದಾಖಲಿಸಿಕೊಂಡಿದೆ. ಈ ಪೈಕಿ ಹೆಚ್ಚಿನವರ ಸ್ಥಿತಿ ಗಂಭೀರವಾಗಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಏತನ್ಮಧ್ಯೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸುಡಾನ್‌ನಲ್ಲಿ ಕ್ಷಿಪ್ರ ಬೆಂಬಲ ಪಡೆಗಳು ಮತ್ತು ಸುಡಾನ್ ಸಶಸ್ತ್ರ ಪಡೆಗಳ ನಡುವಿನ ಹೋರಾಟವನ್ನು ಖಂಡಿಸಿದ್ದಾರೆ. ಸೂಡಾನ್ ಕ್ಷಿಪ್ರ ಬೆಂಬಲ ಪಡೆಗಳು ಮತ್ತು ಸುಡಾನ್ ಸಶಸ್ತ್ರ ಪಡೆಗಳ ನಾಯಕರು ತಕ್ಷಣವೇ ಹಗೆತನವನ್ನು ನಿಲ್ಲಿಸಬೇಕು. ಕೂಡಲೇ ಶಾಂತಿಯನ್ನು ಪುನಃಸ್ಥಾಪಿಸಲು ಮುಂದಾಗಬೇಕು. ಮಾತುಕತೆ ಮೂಲಕ ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಬೇಕು. ಸೇನೆಗಳ ನಡುವಿನ ಸಂಘರ್ಷವು ನಾಗರಿಕರ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಹೇಳಿದ್ದಾರೆ.
ಭಾರತೀಯ ವ್ಯಕ್ತಿ ಗುಂಡಿಗೆ ಬಲಿ
ಏತನ್ಮಧ್ಯೆ, ಸೇನೆ ಮತ್ತು ಅರೆಸೇನಾ ಪಡೆಗಳು ಸಂಘರ್ಷದಲ್ಲಿ ಗುಂಡೇಟಿನಿಂದ ತೀವ್ರ ಗಾಯೊಗೊಂಡಿದ್ದ ಭಾರತೀಯ ಅಲ್ಬರ್ಟ್ ಆಗಸ್ಟಿನ್ ಅವರು ಮೃತಪಟ್ಟಿದ್ದಾರೆ. ಆಗಸ್ಟಿನ್ ಅವರು ಸೂಡಾನ್‌ನ ದಾಲ್ ಗ್ರೂಪ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಶನಿವಾರ ಗುಂಡೇಟು ಬಿದ್ದಿತ್ತು.
ಇದನ್ನೂ ಓದಿ: Russia-Ukraine war | ಹೊಸ ವರ್ಷ ಉಕ್ರೇನ್ ವಿರುದ್ಧ ಸಂಘರ್ಷ ತೀವ್ರಗೊಳಿಸುವ ಸಂಕಲ್ಪ ಮಾಡಿದ ಪುಟಿನ್
ಭಾರತೀಯ ರಾಯಭಾರಿ ಕಚೇರಿಯು ಸೂಡಾನ್‌ಗೆ ಪ್ರಯಾಣಿಸುವ ಭಾರತೀಯರು ತಮ್ಮ ಪ್ಲ್ಯಾನ್ ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ. ಭಾರತೀಯ ರಾಯಭಾರ ಕಚೇರಿ ಶನಿವಾರ ಟ್ವೀಟ್‌ನಲ್ಲಿ, ಸೂಡಾನ್‌ಗೆ ಪ್ರಯಾಣಿಸಲು ಯೋಜಿಸುತ್ತಿರುವ ಭಾರತೀಯರು ತಮ್ಮ ಪ್ರಯಾಣವನ್ನು ಮುಂದೂಡಬೇಕು. ಅಲ್ಲದೇ, ಹೆಚ್ಚಿನ ಮಾಹಿತಿಗಾಗಿ ಕಾಯುತ್ತೀರಿ ಎಂದು ಹೇಳಿದೆ.