ಪಾಕಿಸ್ತಾನದ ಬಲೂಚಿಸ್ತಾನ್ದ ಸಿಬಿ ಏರಿಯಾದಲ್ಲಿ ಸೂಸೈಡ್ ಬಾಂಬರ್ವೊಬ್ಬ ಬೈಕ್ನಿಂದ ಪೊಲೀಸರು ಪ್ರಯಾಣ ಮಾಡುತ್ತಿದ್ದ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ 9 ಪೊಲೀಸರು ಮೃತಪಟ್ಟಿದ್ದಾರೆ. ಈ ಸಿಬಿ ನಗರ, ಕ್ವೆಟ್ಟಾದ ಪೂರ್ವ ಭಾಗದಿಂದ 160 ಕಿಮೀ ದೂರದಲ್ಲಿದೆ. ಟ್ರಕ್ನಲ್ಲಿ ಹಲವು ಪೊಲೀಸರು ಪ್ರಯಾಣ ಮಾಡುತ್ತಿದ್ದರು. ಆಗ ವ್ಯಕ್ತಿಯೊಬ್ಬ (ಶಂಕಿತ ಉಗ್ರ) ಆ ವಾಹನಕ್ಕೆ ತನ್ನ ಬೈಕ್ ಡಿಕ್ಕಿ ಹೊಡೆಸಿದ್ದಾನೆ. ತತ್ಕ್ಷಣವೇ ಬೈಕ್, ವಾಹನ ಸ್ಫೋಟಗೊಂಡಿದೆ.
ಬಲೂಚಿಸ್ತಾನ್ದಲ್ಲಿ ಹಲವು ವರ್ಷಗಳಿಂದ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ನಡೆಯುತ್ತಿದೆ. ಪಾಕಿಸ್ತಾನ ಸರ್ಕಾರ ಇಲ್ಲಿನ ಅನಿಲ ಮತ್ತು ಖನಿಜ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ಬಂಡುಕೋರರು ಕಿಡಿಕಾರುತ್ತಿದ್ದಾರೆ. ಇನ್ನೊಂದೆಡೆ ಪಾಕಿಸ್ತಾನವೇ ಪೋಷಿಸಿದ ಉಗ್ರರು ಆ ದೇಶಕ್ಕೆ ಮಾರಕವಾಗುತ್ತಿದ್ದಾರೆ. ಇತ್ತೀಚೆಗೆ ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ (ಟಿಟಿಪಿ)ದ ಉಗ್ರರು ಕರಾಚಿ ಪೊಲೀಸ್ ಸ್ಟೇಶನ್ ಮೇಲೆ ಬಾಂಬ್ ದಾಳಿ ನಡೆಸಿ, ಅದನ್ನು ಅತಿಕ್ರಮಣ ಮಾಡಿಕೊಂಡಿದ್ದರು. ಬುಗ್ತಿ ಕ್ರಿಕೆಟ್ ಸ್ಟೇಡಿಯಂ ಬಳಿ ನಡೆಸಲಾಗಿದ್ದ ಸ್ಫೋಟದ ಹೊಣೆಯನ್ನೂ ಇದೇ ಟಿಟಿಪಿ ಉಗ್ರರೇ ಹೊತ್ತುಕೊಂಡಿದ್ದರು. ಜನವರಿ 30ರಂದು ಪೇಷಾವರ ಮಸೀದಿ ಮೇಲೆ ಬಾಂಬ್ ದಾಳಿಯಾಗಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಅದೂ ಕೂಡ ಟಿಟಿಪಿ ಭಯೋತ್ಪಾದಕರ ಕೃತ್ಯವೇ ಆಗಿತ್ತು. ಈ ಮಧ್ಯೆ ತೆಹ್ರೀಲ್ ಇ ಲಬ್ಬೈಕ್ ಪಾಕಿಸ್ತಾನ ಸಂಘಟನೆಯ ಉಗ್ರರು ಕರಾಚಿಯ ಮಸೀದಿ ಗೋಪುರ ಪುಡಿಗಟ್ಟುತ್ತಿರುವ ವಿಡಿಯೊ ವೈರಲ್ ಆಗಿತ್ತು.
ಇದನ್ನೂ ಓದಿ: Peshawar Blast: ನಾವೇ ಉಗ್ರರನ್ನು ಸೃಷ್ಟಿಸಿದವರು, ಅವರೀಗ ನಮಗೇ ಮುಳುವಾಗಿದ್ದಾರೆ: ಪೇಚಾಡಿದ ಪಾಕ್ ಸಚಿವ
ಈ ಸಲ ನಡೆದ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಉಗ್ರ ಸಂಘಟನೆಯಾಗಲೀ, ಬಲೂಚಿಸ್ತಾನ ಪ್ರತ್ಯೇಕ ಹೋರಾಟಗಾರರಾಗಲೀ ಹೊತ್ತುಕೊಂಡಿಲ್ಲ. 9 ಪೊಲೀಸರು ಮೃತಪಟ್ಟ ಜತೆಗೆ 7 ಪೊಲೀಸರು ಗಾಯಗೊಂಡಿದ್ದಾರೆ. ಆದರೆ ಇತ್ತೀಚೆಗೆ ಪಾಕಿಸ್ತಾನದಲ್ಲಿ ಪೊಲೀಸರನ್ನೇ ಟಾರ್ಗೆಟ್ ಮಾಡಿ ದಾಳಿ ನಡೆಸಲಾಗುತ್ತಿದೆ.