ಕರಾಚಿ: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಬಂಧನಕ್ಕೆಂದು ಅವರ ಮನೆಯ ಬಳಿ ಬಂದ ಪೊಲೀಸರ ವಿರುದ್ಧ, ಖಾನ್ ಬೆಂಬಲಿಗರು ಸಂಘರ್ಷ ನಡೆಸಿದ್ದಾರೆ. ಮಂಗಳವಾರ ರಾತ್ರಿ ಲಾಹೋರ್ನಲ್ಲಿರುವ ಇಮ್ರಾನ್ ಖಾನ್ ಮನೆಯೆದುರು ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಕಾರ್ಯಕರ್ತರು ನೆರೆದಿದ್ದರು. ಇಮ್ರಾನ್ ಖಾನ್ರನ್ನು ಬಂಧಿಸುವ ಸಲುವಾಗಿ ಅಲ್ಲಿಗೆ ಬಂದ ಪೊಲೀಸರೊಂದಿಗೆ ಹೊಡೆದಾಟಕ್ಕೆ ನಿಂತಿದ್ದಾರೆ. ಪ್ರತಿಯಾಗಿ ಪೊಲೀಸರು ಕೂಡ ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ ನಡೆಸಿದ್ದಾರೆ. ಈ ಸಂಘರ್ಷದಲ್ಲಿ ಪಿಟಿಐನ ಹಲವು ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಮಂಗಳವಾರ ಸಂಜೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿಡಿಯೊವೊಂದನ್ನು ಮಾಡಿ ಹರಿಬಿಟ್ಟಿದ್ದರು. ‘ನಾನು ಬಂಧಿಸಲ್ಪಡಬಹುದು ಅಥವಾ ಕೊಲ್ಲಲ್ಪಡಬಹುದು. ಈಗಾಗಲೇ ನನ್ನ ಮನೆಯ ಎದುರು ಪೊಲೀಸರು ಬಂದಿದ್ದಾರೆ’ ಎಂದು ತಿಳಿಸಿದ್ದರು. ಅಷ್ಟೇ ಅಲ್ಲ, ‘ನನ್ನ ಬಂಧನದ ವಿರುದ್ಧ ನೀವೆಲ್ಲ ಹೋರಾಡಿ. ನೀವು ಬೀದಿಗೆ ಇಳಿಯಿರಿ, ನಾನು ಮೊದಲಿನಿಂದಲೂ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ನಾನಂತೂ ಅದನ್ನು ಮುಂದುವರಿಸುತ್ತೇನೆ. ನೀವು ಗುಲಾಮಿತನವನ್ನು ಸಹಿಸಿಕೊಳ್ಳುವುದಿಲ್ಲ ಎಂದು ಸಾಬೀತು ಮಾಡಿ’ ಎಂದಿದ್ದರು.
ಇಮ್ರಾನ್ ಖಾನ್ ಸಂದೇಶದ ಬೆನ್ನಲ್ಲೇ ದೊಡ್ಡ ಸಂಖ್ಯೆಯಲ್ಲಿ ಅವರ ಬೆಂಬಲಿಗರು ಅಲ್ಲಿಗೆ ಧಾವಿಸಿ, ಪೊಲೀಸರನ್ನು ತಡೆದಿದ್ದಾರೆ. ಪೊಲೀಸರು ಮತ್ತು ಪಿಟಿಐ ಕಾರ್ಯಕರ್ತರ ನಡುವೆ ಸುಮಾರು 8 ತಾಸುಗಳ ಸುದೀರ್ಘ ಸಂಘರ್ಷ ಏರ್ಪಟ್ಟಿತ್ತು. ಇವರೆಲ್ಲ ಸೇರಿ ಪಂಜಾಬ್, ಲಾಹೋರ್ನ ಹಲವು ರಸ್ತೆಗಳನ್ನು ಬ್ಲಾಕ್ ಮಾಡಿದ್ದರು. ಬೀದಿಬೀದಿಗಳಲ್ಲಿ ದೊಡ್ಡಮಟ್ಟದ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದ್ದರು. ಹೀಗೆ, ಇಮ್ರಾನ್ ಖಾನ್ ಬಂಧನಕ್ಕೆ ಬಲವಾದ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸದೆ, ಹಾಗೇ ತೆರಳಿದ್ದಾರೆ.
ಇದನ್ನೂ ಓದಿ: Imran Khan: ಪಾಕ್‌ನಲ್ಲಿ ಕೆ.ಜಿ ತುಪ್ಪದ ಬೆಲೆ 600 ಶತಕೋಟಿ ರೂ., ಇಮ್ರಾನ್ ಖಾನ್ ಹೇಳಿಕೆಯ ವಿಡಿಯೊ ವೈರಲ್
ಇಮ್ರಾನ್ ಖಾನ್ ಅವರು ತೋಷಖಾನಾ ಭ್ರಷ್ಟಾಚಾರ ಕೇಸ್ನಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಅಂದರೆ ಇವರು ಪಾಕಿಸ್ತಾನದಲ್ಲಿ ಪ್ರಧಾನಮಂತ್ರಿಯಾಗಿದ್ದಾಗ, ಗಣ್ಯರಿಂದ ಪಡೆದಿದ್ದ ಉಡುಗೊರೆಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಇಮ್ರಾನ್ ಖಾನ್ ತಪ್ಪಿತಸ್ಥರು ಎಂದು ಚುನಾವಣಾ ಆಯೋಗವೇ ಘೋಷಣೆ ಮಾಡಿದೆ.