ಬೆಂಗಳೂರು: ಇತ್ತೀಚೆಗೆ ತೆರೆಕಂಡ ಮಲಯಾಳಂನ ‘ಮಂಜುಮ್ಮೆಲ್ ಬಾಯ್ಸ್’ (Manjummel Boys) ಚಿತ್ರ ದೇಶದ ಗಮನ ಸೆಳೆದಿದೆ. ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂ.ಗಿಂತಲೂ ಅಧಿಕ ಕಲೆಕ್ಷನ್ ಮಾಡಿದ ಈ ಚಿತ್ರ ಒಟಿಟಿಗೆ ಲಗ್ಗೆ ಇಟ್ಟು ಅಲ್ಲೂ ಸೂಪರ್ ಹಿಟ್ ಎನಿಸಿಕೊಂಡಿದೆ. ಚಿದಂಬರಂ ನಿರ್ದೇಶನದ ಈ ಸರ್ವೈವಲ್ ಡ್ರಾಮ ಸಾವಿನಂಚಿನಿಂದ ಬದುಕುಳಿದ ಯುವಕನೊಬ್ಬನ ಕಥೆ ಹೇಳುತ್ತದೆ. ಆತನನ್ನು ಬದುಕಿಸಲು ಸ್ನೇಹಿತರು ಪಟ್ಟ ಶ್ರಮವನ್ನು ಕಣ್ಣ ಮುಂದೆ ತಂದಿಡುತ್ತದೆ. ಈ ಚಿತ್ರವನ್ನು ನೋಡುತ್ತಿದ್ದರೆ 2018ರಲ್ಲಿ ನಡೆದ ಥೈಲ್ಯಾಂಡ್‌ನ ಗುಹೆಯೊಂದಲ್ಲಿ ಸಿಲುಕಿದ್ದ 13 ಮಂದಿಯ ರಕ್ಷಣೆಯ ರೋಚಕ ಕಾರ್ಯಾಚರಣೆ ಕಣ್ಣ ಮುಂದೆ ಬರುತ್ತದೆ. ವಿಶ್ವಾದ್ಯಂತ ಸುದ್ದಿಯಾಗಿದ್ದ ಆ ಸಾಹಸಗಾಥೆಯ ವಿವರ ಇಲ್ಲಿದೆ (Survival Story).
ಏನಾಗಿತ್ತು?
ಅದು 2018ರ ಜೂನ್ 23. ಥಾಯ್ ಫುಟ್ಬಾಲ್ ತಂಡ ದಿ ವೈಲ್ಡ್ ಬೋರ್ಸ್‌ನ 12 ಸದಸ್ಯರು (18 ವರ್ಷದೊಳಗಿನ ಮಕ್ಕಳು) 25 ವರ್ಷದ ತಮ್ಮ ತರಬೇತುದಾರ ಏಕಫೋಲ್ ಚಾಂಟಾವೊಂಗ್ ಅವರೊಂದಿಗೆ ಥೈಲ್ಯಾಂಡ್‌ನ ಥಾಮ್ ಲುವಾಂಗ್ ಗುಹೆಯಲ್ಲಿ ಸಿಕ್ಕಿ ಬೀಳುವುದರೊಂದಿಗೆ ರೋಚಕ ಘಟನೆಗೆ ಮುನ್ನಡಿ ಬರೆಯಲಾಗುತ್ತದೆ. ಬಿರುಸಾದ ಮಳೆಗೆ ಗುಹೆಯೊಳಗೆ ಸಿಕ್ಕಿ ಬೀಳುವ ಈ 13 ಮಂದಿ ಮುಂದಿನ 17 ದಿನ ಬದುಕುಳಿಯಲು ಅಕ್ಷರಶಃ ಹೋರಾಟ ನಡೆಸುತ್ತಾರೆ.
ದುರ್ಗಮ ಪ್ರದೇಶದಲ್ಲಿರುವ ಈ ಗುಹೆ ಮಕ್ಕಳ ನೆಚ್ಚಿನ ತಾಣ. ಜತೆಗೆ ಗುಹೆ ಒಳಗೆಲ್ಲ ಓಡಾಡಿ ಅವರಿಗೆ ಅಭ್ಯಾಸವಾಗಿತ್ತು. ಅಂದು ಕೂಡ ಈ ಗುಂಪು ತಮ್ಮ ಗೆಳೆಯನೊಬ್ಬನ ಹುಟ್ಟುಹಬ್ಬ ಆಚರಿಸಲು ತಿಂಡಿಗಳ ಜತೆಗೆ ಎಂದಿನಂತೆ ಥಾಮ್ ಲುವಾಂಗ್ ಗುಹೆ ಪ್ರವೇಶಿಸಿತು. ಆದರೆ ಬಳಿಕ ಸುರಿದ ಭೀಕರ ಮಳೆ ಅವರ ಜೀವನದ ಗತಿಯನ್ನೇ ಬದಲಾಯಿಸಲಿದೆ ಎಂದು ಆ ವೇಳೆಗೆ ಅವರಿಗೆ ತಿಳಿದಿರಲಿಲ್ಲ.
ರಣ ಭೀಕರ ಮಳೆ
ಮಕ್ಕಳು ಗುಹೆ ಒಳಗೆ ಪ್ರವೇಶಿಸುತ್ತಿದ್ದಂತೆ ಆರಂಭವಾಯಿತು ರಣ ಭೀಕರ ಮಳೆ. ಎಲ್ಲೆಡೆ ನೀರು ನುಗ್ಗಿ ಬರತೊಡಗಿತು. ಇದೇ ವೇಳೆ ಮಕ್ಕಳನ್ನು ಕಾಣದೆ ಪೋಷಕರು ಗಾಬರಿಗೆ ಒಳಗಾದರು. ಕೂಡಲೇ ಮಕ್ಕಳ ಫುಟ್ಬಾಲ್ ಕೋಚ್ ಏಕಫೋಲ್ ಚಾಂಟಾವೊಂಗ್ ಮಕ್ಕಳನ್ನು ಹುಡುಕಿಕೊಂಡು ಹೊರಟರು. ಮಕ್ಕಳು ಗುಹೆ ಒಳಗೆ ಇರುವುದು ಹೊರಗೆ ನಿಲ್ಲಿಸಿದ್ದ ಸೈಕಲ್ ಮೂಲಕ ಅವರಿಗೆ ಗೊತ್ತಾಯಿತು. ಅದಾಗಲೇ ಗುಹೆ ಒಳಗೆ ನೆರೆ ನುಗ್ಗಿತ್ತು. ಸಿಕ್ಕಿ ಬಿದ್ದಿರುವ ಮಕ್ಕಳನ್ನು ಹೇಗಾದರೂ ಮಾಡಿ ಹೊರ ಕರೆತರಬೇಕೆಂದು ಏಕಫೋಲ್ ಚಾಂಟಾವೊಂಗ್ ಕೂಡ ಗುಹೆ ಒಳ ಹೊಕ್ಕರು. ಆದರೆ ಬಳಿಕ ಅವರೂ ಅಲ್ಲಿ ಬಂಧಿಯಾದರು. ಯಾವ ಪರಿ ಪ್ರವಾಹ ಬಂದಿತ್ತು ಎಂದರೆ ಒಬ್ಬರಿಗೂ ಹೊರ ಬರಲು ಸಾಧ್ಯವಾಗಲಿಲ್ಲ. ಬಳಿಕ ಅವರನ್ನು ರಕ್ಷಿಸಲು ಕೈಗೊಂಡ ರೋಚಕ ಕಾರ್ಯಾಚರಣೆಗೆ ಇಡೀ ಜಗತ್ತೇ ಸಾಕ್ಷಿಯಾಯ್ತು. ಈ ಕಾರ್ಯಾಚರಣೆಗೆ ಭಾರತವೂ ಕೈ ಜೋಡಿಸಿತ್ತು. ಅಲ್ಲಿ ಸಿಲುಕಿಕೊಂಡಿರುವ ಮಕ್ಕಳು ಸೇರಿದಂತೆ ಕೋಚ್‌ನ ಸುರಕ್ಷತೆಗಾಗಿ ಕೋಟ್ಯಂತರ ಮಂದಿ ಪ್ರಾರ್ಥಿಸಿದ್ದರು.
9 ದಿನಗಳ ಬಳಿಕ…
ಈ ಫುಟ್ಬಾಲ್ ತಂಡ ಗುಹೆಯೊಳಗೆ ಸಿಕ್ಕಿಬಿದ್ದ 9 ದಿನಗಳ ಕಾಲ ಅವರನ್ನು ಸಂಪರ್ಕಿಸಲು ರಕ್ಷಣಾ ತಂಡಕ್ಕೆ ಸಾಧ್ಯವಾಗಲಿಲ್ಲ. ಬರ್ತ್‌ಡೇ ಪಾರ್ಟಿಗಾಗಿ ತಂದಿದ್ದ ತಿಂಡಿ, ಹನಿ ನೀರು ಮತ್ತು ಧ್ಯಾನ ಅವರ ಕುಟುಕು ಜೀವವನ್ನು ಉಳಿಸಿತ್ತು. ಜತೆಗೆ ಗುಹೆಯ ಮೇಲಿನಿಂತ ತೊಟ್ಟಿಕ್ಕುವ ನೀರೇ ಅವರಿಗೆ ಅಮೃತ ಸಮಾನವಾಗಿತ್ತು. ವಿಶೇಷ ಎಂದರೆ ಮಕ್ಕಳಿಗೆ ತಿಂಡಿ ಹಂಚಿದ್ದ ಕೋಚ್ ಅವರಿಗೆ ಕಡಿಮೆಯಾಗಬಾರದು ಎನ್ನುವ ಉದ್ದೇಶದಿಂದ ತಾವು ಸೇವಿಸಿರಲಿಲ್ಲ.
ಕೊನೆಗೂ ಮೂಡಿತು ಭರವಸೆಯ ಬೆಳಕು
ನೂರಾರು ಸ್ವಯಂ ಕಾರ್ಯಕರ್ತರು ಮತ್ತು ಅಧಿಕಾರಿಗಳು ವಿವಿಧ ದೇಶಗಳಿಂದ ನೆರವಿಗಾಗಿ ಧಾವಿಸಿದ್ದರು. ಕೊನೆಗೆ ಘಟನೆ ನಡೆದು 9 ದಿನಗಳಾದ ಬಳಿಕ ಜುಲೈ 2ರಂದು ಬ್ರಿಟನ್‌ನ ಇಬ್ಬರು ಮುಳುಗುತಜ್ಞರು ಕತ್ತಲನ್ನು ಸೀಳಿಕೊಂಡು ಗುಹೆಯ ಮುಂದೆ ಸಾಗಿದ್ದರು. ಅವರ ಹಾಯಿಸಿದ ಬೆಳಕಿಗೆ ಕೊನೆಗೂ ಕೋಚ್ ಮತ್ತು ಬಾಲಕರು ಕಾಣಿಸಿದ್ದರು. ತಿರುವು ಮುರುವುಗಳಿಂದ ಕೂಡಿದ್ದ, ಸಪೂರ ಗುಹೆಯಲ್ಲಿ ಸುಮಾರು 4 ಗಂಟೆಗಳ ಕಾಲ ಈಜಿದ ಬಳಿಕ ರಕ್ಷಣಾ ತಂಡಕ್ಕೆ ಮಕ್ಕಳು ಕಾಣಿಸಿದ್ದರು. ಅವರು ಪತ್ತೆಯಾಗಿದ್ದರೂ ರಕ್ಷಣೆ ಸುಲಭದ್ದಾಗಿರಲಿಲ್ಲ. ಗುಹೆಯ ಬಾಗಿಲಿನಿಂದ ಸುಮಾರು 2 ಮೈಲಿ ದೂರದಲ್ಲಿರುವ ಅವರನ್ನು ಹೊರಗೆ ಕರೆತಲು ಮತ್ತೂ 8 ದಿನ ಹಿಡಿಯಿತು ಎಂದರೆ ಅಲ್ಲಿನ ಪರಿಸ್ಥಿತಿಯನ್ನೊಮ್ಮೆ ಊಹಿಸಿ.
ಬಳಿಕ ಅವರಿಗೆ ಆಮ್ಲಜನಕ ಸರಬರಾಜು ಮಾಡಲು ಆರಂಭಿಸಲಾಯಿತು. ಇದರ ಜತೆಗೆ ಕಾರ್ಯಾಚರಣೆ ತಂಡ ಗುಹೆಯಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ನೀರನ್ನು ಯಂತ್ರ ಬಳಸಿ ಖಾಲಿ ಮಾಡಲು ಮುಂದಾಯಿತು. ಹೀಗೆ ಸತತ ಪ್ರಯತ್ನದ ಬಳಿಕ ಕೊನೆಗೂ ಜುಲೈ 10ರಂದು ಸುಮಾರು 17 ದಿನಗಳ ಬಳಿಕ 13 ಮಂದಿ ಸುರಕ್ಷಿತರಾಗಿ ಬಂಧಮುಕ್ತರಾದಾಗ ಇಡೀ ಜಗತ್ತೇ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು. ನೋವಿನ ವಿಚಾರ ಎಂದರೆ ಕಾರ್ಯಾಚರಣೆಯ ತಂಡದಲ್ಲಿದ್ದ ಇಬ್ಬರು ಮೃತಪಟ್ಟಿದ್ದರು.
ಭಾರತದ ನೆರವು
ಗುಹೆಯಲ್ಲಿದ್ದ ನೀರನ್ನು ಖಾಲಿ ಮಾಡುವ ಕಾರ್ಯದಲ್ಲಿ ಭಾರತವು ಗಣನೀಯ ಕೊಡುಗೆ ನೀಡಿದೆ ಎನ್ನುವುದು ನಾವೆಲ್ಲ ಹೆಮ್ಮೆ ಪಡುವ ವಿಚಾರ. ಹೌದು, ಗುಹೆಯೊಳಗೆ ತುಂಬಿದ್ದ ನೀರನ್ನು ಹೊರ ಹಾಕಲು ಥಾಯ್ ಸರ್ಕಾರ ಪೂನಾದ ಕಿರ್ಲೋಸ್ಕರ್ ಬ್ರದರ್ಸ್ ಕಂಪನಿಯ ಪರಿಣಿತರ ಸಹಾಯ ಪಡೆದುಕೊಂಡಿತ್ತು. ಭಾರತೀಯ ರಾಯಭಾರ ಕಚೇರಿಯ ಶಿಫಾರಸ್ಸಿನ ಮೇರೆಗೆ ಕಿರ್ಲೋಸ್ಕರ್ ಕಂಪನಿಯ ಭಾರತ, ಥಾಯ್ಲೆಂಡ್ ಮತ್ತು ಇಂಗ್ಲೆಂಡ್‌ನಲ್ಲಿರುವ ಪರಿಣಿತರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಡಾಕ್ಯುಮೆಂಟ್ರಿ
ಈ ಗ್ರೇಟ್ ಸರ್ವೈವಲ್ ಘಟನೆಯ ಕುರಿತಾಗಿ ಡಾಕ್ಯುಮೆಂಟ್ರಿ ತಯಾರಾಗಿದೆ. ʼದಿ ಟ್ರ್ಯಾಪ್ಡ್ 13: ಹೌ ವಿ ಸರ್ವೈವ್‌ಡ್ ದಿ ಥೈ ಕೇವ್ʼ (The Trapped 13: How We Survived The Thai Cave) ಶೀರ್ಷಿಕೆಯ ಈ ಡಾಕ್ಯುಮೆಂಟ್ರಿ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯ.
ಇದನ್ನೂ ಓದಿ: Success Story: ಕೆಜಿಎಫ್‌ನ ‘ರಾಕಿ’ ಹಾಗೆ ಸ್ವಂತ ಹೆಲಿಕಾಪ್ಟರ್‌ನಲ್ಲಿ ತಿರುಗಾಡುವ ರೈತ; ಯಾರಿವರು?