ತೈಪೆ: ಚೀನಾ-ಅಮೆರಿಕ-ತೈವಾನ್ (China- Taiwan) ಸದ್ಯ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ದೇಶಗಳು. ಅಮೆರಿಕದ ಜನಪ್ರತಿನಿಧಿಗಳ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ಗೆ ಭೇಟಿ ನೀಡಿದಾಗಿನಿಂದ ಚೀನಾ ಕೆಂಡಾಮಂಡಲವಾಗಿದೆ. ಇತ್ತ ತೈವಾನ್ ವಿರುದ್ಧ ಸಮರ ತಾಲೀಮು ನಡೆಸುತ್ತಿದ್ದರೆ, ಅತ್ತ ಅಮೆರಿಕದೊಂದಿಗೆ ಅಮೆರಿಕದೊಂದಿಗೆ ಹವಾಮಾನ, ರಕ್ಷಣಾ ಕ್ಷೇತ್ರ ಮತ್ತು ಹಲವು ಪ್ರಮುಖ ವಲಯಗಳಲ್ಲಿ ಸಹಕಾರ ಸಂಬಂಧವನ್ನು ಕೊನೆಗಾಣಿಸಿದೆ. ಅಂದರೆ ಹವಾಮಾನ ಬದಲಾವಣೆ, ರಕ್ಷಣಾ ಕ್ಷೇತ್ರದಲ್ಲಿ ಚೀನಾ ಮತ್ತು ಅಮೆರಿಕ ಮಾಡಿಕೊಂಡ ಒಪ್ಪಂದಗಳ ಬಗ್ಗೆ ಮಾತುಕತೆ, ಅಂತಾರಾಷ್ಟ್ರೀಯ ಅಪರಾಧಗಳ ತಡೆ ಕ್ರಮಗಳು, ತನಿಖೆಯಲ್ಲಿ ಇಷ್ಟು ದಿನ ಇದ್ದ ಪರಸ್ಪರ ಸಹಕಾರಗಳನ್ನೆಲ್ಲ ಚೀನಾ ನಿಲ್ಲಿಸುವುದಾಗಿ ತಿಳಿಸಿದೆ.
ನ್ಯಾನ್ಸಿ ಪೆಲೋಸಿ ಬರುತ್ತಾರೆ ಎಂಬ ವರದಿ ಹೊರಬಿದ್ದಾಗಿನಿಂದಲೂ ಚೀನಾ ತನ್ನ ನೆರೆಯಲ್ಲಿರುವ ಪುಟ್ಟ ದ್ವೀಪ ರಾಷ್ಟ್ರ ತೈವಾನ್ನ್ನು ಹೆದರಿಸುವ ಪ್ರಯತ್ನ ಮಾಡುತ್ತಿದೆ. ಆಗಸ್ಟ್ 3ರಂದು ನ್ಯಾನ್ಸಿ ಪೆಲೋಸಿ ತೈವಾನ್ಗೆ ಕಾಲಿಟ್ಟ ದಿನ ಚೀನಾ 21 ಯುದ್ಧ ವಿಮಾನಗಳನ್ನು ಹಾರಾಡಿಸಿತ್ತು. ನ್ಯಾನ್ಸಿ ಅಲ್ಲಿಂದ ಹೊರಬೀಳುತ್ತಿದ್ದಂತೆ ತೈವಾನ್ ರಕ್ಷಣಾ ವಲಯದಲ್ಲಿ ಚೀನಾ ಸಮರ ತಾಲೀಮು ತೀವ್ರಗೊಂಡಿದೆ. ಒಟ್ಟಾರೆ ಹೇಳಬೇಕೆಂದರೆ ಯುಎಸ್-ಚೀನಾ ಜಗಳದಲ್ಲಿ ತೈವಾನ್ ಬಡವಾಗುತ್ತಿದೆ.
ಈ ಮಧ್ಯೆ ತೈವಾನ್ನಲ್ಲಿ ಇನ್ನೊಂದು ಮಹತ್ವದ ಬೆಳವಣಿಗೆ ನಡೆದಿದೆ. ತೈವಾನ್ನ ಕ್ಷಿಪಣಿ ಅಭಿವೃದ್ಧಿ ತಂಡದ ಮುಖ್ಯಸ್ಥ ಮೃತಪಟ್ಟಿದ್ದಾರೆ. ಹೋಟೆಲ್ವೊಂದರ ಕೋಣೆಯಲ್ಲಿ ಶನಿವಾರ ಮುಂಜಾನೆ ಅವರ ಶವ ಪತ್ತೆಯಾಗಿದ್ದು, ಸಾವಿಗೆ ನಿಜವಾದ ಕಾರಣ ತಿಳಿದುಬಂದಿಲ್ಲ. ಇವರ ಸಾವಿನಲ್ಲಿ ಚೀನಾ ಕೈವಾಡ ಇದೆಯೋ-ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ತನಿಖೆ ಪ್ರಾರಂಭವಾಗಿದೆ. ಮೃತ ಅಧಿಕಾರಿಯ ಹೆಸರು ಒ ಯಾಂಗ್ ಲಿ ಸಿಂಗ್ ಎಂದಾಗಿದ್ದು, ತೈವಾನ್ ಸೇನಾ ಮಾಲೀಕತ್ವದ ಚುಂಗ್ ಶಾನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಮುಖ್ಯಸ್ಥರು.
ನ್ಯಾನ್ಸಿ ಪೆಲೋಸಿ ಮತ್ತು ಆಕೆಯ ಕುಟುಂಬದವರಿಗೆ ನಿರ್ಬಂಧ ಹೇರಿರುವ ಚೀನಾ, ತೈವಾನ್ ಆರು ಪ್ರಮುಖ ವಲಯಗಳಲ್ಲಿ ನಾಲ್ಕು ದಿನಗಳ ಸಮರ ತಾಲೀಮು ನಡೆಸುವುದಾಗಿ ಘೋಷಿಸಿತ್ತು. ಅದರಂತೆ ಇಂದು (ಶನಿವಾರ) ಕೊನೇ ದಿನ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ತೈವಾನ್, ಚೀನಾದ ಯುದ್ಧ ತಾಲೀಮನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಚೀನಾ ನಮ್ಮ ಮುಖ್ಯ ದ್ವೀಪದ ಮೇಲೆ ಕೂಡ ಸಮರಾಭ್ಯಾಸ ಮಾಡುತ್ತಿದೆ ಎಂದಿದೆ ಹಾಗೇ, ಶುಕ್ರವಾರ ಚೀನಾದ 68 ಯುದ್ಧ ವಿಮಾನಗಳು ಮತ್ತು 13 ಸಮರ ನೌಕೆಗಳು ತೈವಾನ್ ಗಡಿದಾಟಿ, ನಮ್ಮ ವಲಯವನ್ನು ಪ್ರವೇಶಿಸಿದ್ದಾಗಿ ತೈಪೆ ಮಿಲಿಟರಿ ಹೇಳಿಕೊಂಡಿದೆ.
ಇದನ್ನೂ ಓದಿ: ವಿಸ್ತಾರ Explainer | ತೈವಾನ್ ದ್ವೀಪದೇಶದಲ್ಲಿ ಚೀನಾ- ಅಮೆರಿಕ ತಿಕ್ಕಾಟದ ಹಕೀಕತ್ತು