Site icon Vistara News

Taliban | ಅಫಘಾನಿಸ್ತಾನದಲ್ಲಿ 1ರಿಂದ 6ನೇ ತರಗತಿಯವರೆಗೆ ಮಾತ್ರವೇ ಹೆಣ್ಣುಮಕ್ಕಳಿಗೆ ಶಾಲೆ: ತಾಲಿಬಾನ್‌ ಕಟ್ಟಪ್ಪಣೆ

ಕಾಬೂಲ್:‌ ಅಫಘಾನಿಸ್ತಾನವನ್ನು ತಾಲಿಬಾನಿಯರು(Taliban) ಆಕ್ರಮಿಸಿಕೊಂಡ ನಂತರ ಅಲ್ಲಿನವರ ಪರಿಸ್ಥಿತಿ ಹದಗೆಟ್ಟಿದೆ. ಅಲ್ಲಿನ ಹೆಣ್ಣು ಮಕ್ಕಳಂತೂ ಮೂಲಭೂತ ಹಕ್ಕುಗಳೂ ಸಿಗದೆ ಒದ್ದಾಡುವಂತಾಗಿದೆ. ಹಾಗಿರುವಾಗ ಇದೀಗ ಅಲ್ಲಿನ ತಾಲಿಬಾನಿ ಸರ್ಕಾರವು ಹೆಣ್ಣು ಮಕ್ಕಳ ಶಿಕ್ಷಣದ ವಿಚಾರದಲ್ಲಿ ಕೊಂಚ ರಿಯಾಯಿತಿ ತೋರಿದೆ. 1ರಿಂದ 6ನೇ ತರಗತಿಯವರೆಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.

ಇದನ್ನೂ ಓದಿ: Taliban shames Pakistan | 71ರ ಯುದ್ಧದಲ್ಲಿ ಭಾರತಕ್ಕೆ ಶರಣಾದ ಚಿತ್ರ ತೋರಿಸಿ ಪಾಕಿಸ್ತಾನವನ್ನು ಅಣಕಿಸಿದ ತಾಲಿಬಾನ್‌!

2021ರ ಆಗಸ್ಟ್‌ನಲ್ಲಿ ತಾಲಿಬಾನಿಯರು ಅಫಘಾನಿಸ್ತಾನವನ್ನು ಆಕ್ರಮಿಸಿಕೊಂಡಾಗಿನಿಂದಲೂ ಅಲ್ಲಿನ ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ ಪ್ರವೇಶ ರದ್ದಾಗಿದೆ. ಕಚೇರಿಗಳಲ್ಲೂ ಹೆಣ್ಣು ಮಕ್ಕಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಇದೀಗ ಪ್ರಾಥಮಿಕ ಶಾಲೆಗಳಿಗೆ ಹೆಣ್ಣು ಮಕ್ಕಳು ಹೋಗಬಹುದು ಎಂದು ತಾಲಿಬಾನ್‌ ಸರ್ಕಾರ ಹೇಳಿದೆ. ಅದಕ್ಕಾಗಿ ಎಲ್ಲ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಬಾಗಿಲು ತೆರೆಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಹೆಣ್ಣು ಮಕ್ಕಳು ಶಾಲೆಗೆ ತೆರಳುವಾಗ ಕಡ್ಡಾಯವಾಗಿ ಇಸ್ಲಾಂ ಧರ್ಮಕ್ಕೆ ಸರಿಹೊಂದುವ ಬಟ್ಟೆಯನ್ನು ತೊಟ್ಟಿರಬೇಕು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Video | ಅಫ್ಘಾನಿಸ್ತಾನದಲ್ಲಿ ಶಾಲೆ ಮೇಲೆ ಆತ್ಮಾಹುತಿ ಬಾಂಬ್​ ದಾಳಿ; 100 ಮಕ್ಕಳು ಸಾವು

ಆದರೆ ಮಾಧ್ಯಮಿಕ, ಪ್ರೌಢ ಮತ್ತು ಕಾಲೇಜು ಶಿಕ್ಷಣ ಈಗಲೂ ಅಲ್ಲಿನ ಹೆಣ್ಣು ಮಕ್ಕಳಿಗೆ ಕನಸು ಮಾತ್ರ. ಅದರ ಬಗ್ಗೆ ಸರ್ಕಾರ ಯಾವುದೇ ಸಡಿಲಿಕೆ ತೋರಿಸಿಲ್ಲ. ಈ ರೀತಿಯ ನಿಯಮವನ್ನು ಅಲ್ಲಿನ ಮಾನವ ಹಕ್ಕು ಸಂಘಟನೆಗಳು ವಿರೋಧಿಸಿವೆ. ತಾಲಿಬಾನಿಯರು ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕು ನೀಡದೆ ವಂಚಿಸುತ್ತಿದ್ದಾರೆ ಎಂದು ದೂರಿವೆ.

ಅಫಘಾನಿಸ್ತಾನವನ್ನು ತಾಲಿಬಾನ್‌ ಆಕ್ರಮಿಸಿಕೊಂಡಾಗಿನಿಂದಲೂ ಅಮೆರಿಕ ಸೇರಿ ಅನೇಕ ರಾಷ್ಟ್ರಗಳು ಅದರ ವಿರುದ್ಧ ನಿರ್ಬಂಧಗಳನ್ನು ಹೇರಿವೆ. ಆ ನಿರ್ಬಂಧಗಳನ್ನು ಸಡಿಲಿಸಬೇಕೆಂದರೆ ತಾಲಿಬಾನಿಯರು ಹೆಣ್ಣು ಮಕ್ಕಳ ಶಿಕ್ಷಣದ ವಿಚಾರದಲ್ಲಿ ಇರುವ ನಿಯಮಗಳನ್ನು ಬದಲಿಸಿಕೊಳ್ಳಬೇಕು ಎಂದು ಅಮೆರಿಕ ಹೇಳಿದೆ.

ತಾಲಿಬಾನಿಯರು ಅಫಘಾನಿಸ್ತಾನವನ್ನು ಆಕ್ರಮಿಸಿಕೊಳ್ಳುವ ಆರಂಭದಲ್ಲಿ ತಾವು ಹೆಣ್ಣು ಮಕ್ಕಳಿಗೆ ಹಕ್ಕುಗಳನ್ನು ನೀಡುವುದಾಗಿ ಹೇಳಿತ್ತು. ಆದರೆ ಕ್ರಮೇಣ ತಮ್ಮ ಕಠಿಣ ನಿಯಮಗಳನ್ನು ಹೇರಲಾರಂಭಿಸಿತು. ಹೆಣ್ಣು ಮಕ್ಕಳು ಶಿಕ್ಷಣ ಪಡೆಯಬಾರದು, ಕೆಲಸಕ್ಕೆ ಹೋಗಬಾರದು, ಸಾರ್ವಜನಿಕ ಸ್ಥಳದಲ್ಲಿ ಕಣ್ಣು ಮಾತ್ರ ಕಾಣುವಂತ ಬಟ್ಟೆ ಧರಿಸಿರಬೇಕು, ಪುರುಷನಿಲ್ಲದೆ ಒಬ್ಬಂಟಿಯಾಗಿ ಹೊರಗೆ ಓಡಾಡಬಾರದು ಎನ್ನುವ ಹಲವಾರು ನಿಯಮಗಳು ಅಲ್ಲಿವೆ.

Exit mobile version