ಕರಾಚಿ: ಪಾಕಿಸ್ತಾನದ ವಾಯುವ್ಯ ಭಾಗದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬನ್ನು ಜಿಲ್ಲೆಯಲ್ಲಿ ಭಯೋತ್ಪಾದಕರನ್ನು ಸೆರೆ ಇಟ್ಟಿದ್ದ ಕಾರಾಗೃಹ ಕೇಂದ್ರವನ್ನು ತಾಲಿಬಾನಿ ಉಗ್ರರು ವಶಪಡಿಸಿಕೊಂಡಿದ್ದಾರೆ ಮತ್ತು ಅದರಲ್ಲಿದ್ದ ಮೋಸ್ಟ್ ವಾಂಟೆಡ್ ಉಗ್ರರನ್ನೆಲ್ಲ ಬಿಡುಗಡೆ ಮಾಡಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾಗಿ ವರದಿಯಾಗಿದೆ.
ಇವರೆಲ್ಲ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಸಂಘಟನೆಯ ಉಗ್ರರಾಗಿದ್ದರು. ಭಾನುವಾರ ಬನ್ನು ಜಿಲ್ಲೆಯ ಕಂಟೋನ್ಮೆಂಟ್ ಏರಿಯಾಕ್ಕೆ ನುಗ್ಗಿದ್ದರು. ಅಲ್ಲಿದ್ದ ಭಯೋತ್ಪಾದನಾ ನಿಗ್ರಹ ಇಲಾಖೆ (CTD) ಸಿಬ್ಬಂದಿಯನ್ನು ಮತ್ತು ಇನ್ನಿತರ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳಾಗಿಟ್ಟುಕೊಂಡು, ಬೆದರಿಸಿದರು. ಬಳಿಕ ಜೈಲಿನಲ್ಲಿದ್ದ ಉಗ್ರರರನ್ನೆಲ್ಲ ಬಿಡುಗಡೆ ಮಾಡಿದರು ಎಂದು ಬನ್ನು ಜಿಲ್ಲೆ ಪೊಲೀಸ್ ವಕ್ತಾರ ಮೊಹಮ್ಮದ್ ನಸೀಬ್ ತಿಳಿಸಿದ್ದಾರೆ.
ಸದ್ಯ ಆ ಸ್ಥಳವನ್ನೆಲ್ಲ ಪಾಕಿಸ್ತಾನಿ ಸೈನಿಕರು ಸುತ್ತುವರಿದಿದ್ದಾರೆ. ಉದ್ವಿಗ್ನ ವಾತಾವರಣ ಇದ್ದು, ಸ್ಥಳೀಯ ನಿವಾಸಿಗಳಿಗೆ ಹೊರಗೆ ಬರದಂತೆ ಸೂಚಿಸಲಾಗಿದೆ. ಹೀಗೆ ಈ ತಾಲಿಬಾನ್ ಉಗ್ರರು ಬಂದು ಕಾರಾಗೃಹ ಕೇಂದ್ರ ವಶಕ್ಕೆ ಪಡೆಯುತ್ತಿದ್ದಂತೆ, ಅದರೊಳಗೆ ಇದ್ದ ಉಗ್ರರೂ ಭದ್ರತಾ ಸಿಬ್ಬಂದಿ ಮೇಲೆ ದಾಳಿಗೆ ಮುಂದಾದರು. ರಕ್ಷಣಾ ಸಿಬ್ಬಂದಿಯ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು ಎಂದು ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಮುಖ್ಯಮಂತ್ರಿಯ ವಿಶೇಷ ಸಹಾಯಕ ಬ್ಯಾರಿಸ್ಟರ್ ಮೊಹಮ್ಮದ್ ಅಲಿ ಸೈಫ್ ಹೇಳಿದ್ದಾರೆ.
ಈ ಭಯೋತ್ಪಾದನಾ ನಿಗ್ರಹ ಇಲಾಖೆ ಕಟ್ಟಡದೊಳಗಿನಿಂದ ವಿಡಿಯೊ ಮಾಡಿ ಹರಿಬಿಟ್ಟ ತಾಲಿಬಾನ್ ಉಗ್ರರು, ‘ನಾವು ಒಂಭತ್ತು ಪೊಲೀಸ್ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದೇವೆ. ಅವರನ್ನು ಬಿಡುಗಡೆ ಮಾಡಬೇಕು ಎಂದರೆ ನಮಗೆ ಅಫ್ಘಾನಿಸ್ತಾನಕ್ಕೆ ವಿಮಾನ ಮಾರ್ಗದ ಮೂಲಕ ತೆರಳಲು ಸೂಕ್ತ ವ್ಯವಸ್ಥೆ ಮಾಡಬೇಕು’ ಎಂದು ಬೇಡಿಕೆ ಇಟ್ಟಿದ್ದಾರೆ. ಅಲ್ಲಿ ಇನ್ನೂ ಕಾರ್ಯಾಚರಣೆ ನಡೆಯುತ್ತಲೇ ಇದೆ.
ಇದನ್ನೂ ಓದಿ: ಅವಿವೇಕಿ ಪಾಕಿಸ್ತಾನದ ಮತ್ತೊಂದು ಅಸಂಬದ್ಧ ಹೇಳಿಕೆ; ಸಚಿವೆ ಶಾಜಿಯಾರಿಂದ ಭಾರತಕ್ಕೆ ಅಣ್ವಸ್ತ್ರ ದಾಳಿ ಬೆದರಿಕೆ