Site icon Vistara News

Taliban Rule | ಸಾರ್ವಜನಿಕವಾಗಿ ಕಳ್ಳರ ಕೈ ಕತ್ತರಿಸಿದ ತಾಲಿಬಾನ್

Pakistan Taliban

ಕಂದಹಾರ್:‌ ದರೋಡೆ ಹಾಗೂ ವಿಕೃತಕಾಮದ ಆರೋಪದಲ್ಲಿ ಬಂಧಿತರಾದ ಒಂಬತ್ತು ಮಂದಿಯನ್ನು ಸಾರ್ವಜನಿಕ ಸ್ಟೇಡಿಯಂನಲ್ಲಿ ಅಫಘಾನಿಸ್ತಾನದ ತಾಲಿಬಾನ್‌ ಆಡಳಿತ ಶಿಕ್ಷಿಸಿದೆ. ಇದರಲ್ಲಿ ನಾಲ್ಕು ಮಂದಿಯ ಕೈಗಳನ್ನು ಕತ್ತರಿಸಿ ಹಾಕಲಾಗಿದೆ.

ಕಂದಹಾರ್‌ನ ಅಹ್ಮದ್‌ ಶಾಹಿ ಸ್ಟೇಡಿಯಂನಲ್ಲಿ ಶಿಕ್ಷೆ ಜಾರಿ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿಕೆ ತಿಳಿಸಿದೆ. ನಾಲ್ಕು ಮಂದಿಯ ಕೈ ಕತ್ತರಿಸಲಾಗಿದ್ದು, ಉಳಿದವರನ್ನು ಮೂರ್ಛೆ ಹೋಗುವವರೆಗೂ ಥಳಿಸಲಾಗಿದೆ. ಬಾರುಕೋಲಿನಲ್ಲಿ 35-39 ಏಟು ನೀಡಲಾಗಿದೆ.

ʼʼಆರೋಪಿಗಳನ್ನು ತಾಲಿಬಾನ್‌ ಆಡಳಿತದಡಿಯಲ್ಲಿ ಯಾವುದೇ ವಿಚಾರಣೆಯಿಲ್ಲದೆ ದಂಡಿಸಲಾಗುತ್ತಿದೆ. ಜನರಿಗೆ ಹೊಡೆತ ಸಾಮಾನ್ಯವಾಗಿದ್ದು, ಕೈಕಾಲು ಕತ್ತರಿಸಲಾಗುತ್ತಿದೆ. ಸಾಯಿಸಲಾಗುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆ ವ್ಯಾಪಕವಾಗಿದೆʼʼ ಎಂದು ಅಫಘಾನಿಸ್ತಾನದ ಮಾಜಿ ರಾಜನೀತಿ ಸಲಹೆಗಾರ್ತಿ ಶಬ್ನಮ್‌ ನಸ್ರಿಮಿ ಆರೋಪಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗಿದ್ದರೂ, ಸಾರ್ವಜನಿಕ ಥಳಿಸುವಿಕೆ, ಶಿಕ್ಷೆ ತಾಲಿಬಾನ್‌ ಆಡಳಿತದಲ್ಲಿ ಮುಂದುವರಿದಿದೆ. ವಿಶ್ವಸಂಸ್ಥೆ ಕೂಡ ಇದನ್ನು ಖಂಡಿಸಿದೆ. ʼʼ2022ರ ನವೆಂಬರ್‌ 18ರಿಂದ ಈಚೆಗೆ ಸುಮಾರು 100 ಮಂದಿಯನ್ನು ಸಾರ್ವಜನಿಕವಾಗಿ ಚಾಟಿಯೇಟಿಗೆ ಒಳಪಡಿಸಲಾಗಿದೆ. ಇದರಲ್ಲಿ ಮಹಿಳೆಯರು ಹಾಗೂ ಮಕ್ಕಳೂ ಇದ್ದಾರೆ. ಕಳ್ಳತನ ಸೇರಿದಂತೆ ಹಲವು ಆರೋಪಗಳಡಿ ಇವರಿಗೆ 20ರಿಂದ 100 ಚಾಟಿಯೇಟು ನೀಡಲಾಗಿದೆ. ಅನೈತಿಕ ಸಂಬಂಧ, ಸಾಮಾಜಿಕ ಕಟ್ಟಳೆಗಳ ಉಲ್ಲಂಘನೆ ಹೆಸರಿನಲ್ಲಿ ಹೆಚ್ಚಿನ ಶಿಕ್ಷೆ ನೀಡಲಾಗುತ್ತಿದೆ. ವಿವಾಹದಾಚೆಗಿನ ಸಂಬಂಧ ವ್ಯಾಪಕವಾಗಿದ್ದರೂ, ಶಿಕ್ಷೆ ಮಹಿಳೆಯರಿಗೆ ಮಾತ್ರ ನೀಡಲಾಗುತ್ತಿದೆʼʼ ಎಂದು ವಿಶ್ವಸಂಸ್ಥೆ ಹೇಳಿದೆ.

2022ರ ಡಿಸೆಂಬರ್‌ 7ರಂದು ಫರಾ ನಗರದಲ್ಲಿ ಒಬ್ಬಾತನನ್ನು ಸಾರ್ವಜನಿಕವಾಗಿ ಸಾಯಿಸಲಾಗಿತ್ತು. ಇದು ತಾಲಿಬಾನ್‌ ಆಡಳಿತಕ್ಕೇರಿದ ನಂತರದ ಮೊದಲ ಸಾರ್ವಜನಿಕ ತಲೆದಂಡವಾಗಿದೆ.

ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಇಂಥ ಸಾರ್ವಜನಿಕ ದಂಡನೆಗಳು ಅಮಾನವೀಯ, ಮಾನವ ಘನತೆಗೆ ವಿರೋಧವಾಗಿವೆ. ಇಲ್ಲಿ ನಡೆಯುತ್ತಿರುವ ವಿಚಾರಣೆಗಳ ಪ್ರಾಮಾಣಿಕತೆಯನ್ನು ಪರಿಶೀಲಿಸಬೇಕು ಎಂಬ ಒತ್ತಾಯ ಅಂತಾರಾಷ್ಟ್ರೀಯ ವಲಯದಿಂದ ವ್ಯಕ್ತವಾಗಿದೆ.

Exit mobile version