Site icon Vistara News

Terror attack: ಕಾಬೂಲ್‌ನ ಗುರುದ್ವಾರದ ಮೇಲೆ ಉಗ್ರ ದಾಳಿ, 25ಕ್ಕೂ ಅಧಿಕ ಸಾವು?

ಕಾಬೂಲ್‌: ಅಫಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಗುರುದ್ವಾರ ಕರ್ತೇ ಪವನ್‌ ಮೇಲೆ ಶನಿವಾರ ಮುಂಜಾನೆಯೇ ಉಗ್ರರು ದಾಳಿ ಮಾಡಿದ್ದು, ಭಾರಿ ಪ್ರಮಾಣದ ಸಾವು ನೋವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಐಸಿಸ್‌ ಖರ್ಸಾನ್‌ ಎಂಬ ಉಗ್ರ ಸಂಘಟನೆಗೆ ಸೇರಿದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಈ ದಾಳಿ ನಡೆಸಿದ್ದಾರೆ.

ಮುಂಜಾನೆ ಆರು ಗಂಟೆಯ ಹೊತ್ತಿಗೆ ಗ್ರಂಥಿಯೊಬ್ಬರು ಗುರು ಗ್ರಂಥ ಸಾಹೇಬ್‌ನ ಪಠಣ ಮಾಡುತ್ತಾ ಗುರುದ್ವಾರದ ಒಳಗೆ ಅತ್ತಿತ್ತ ನಡೆದಾಡುತ್ತಿದ್ದಾಗ ದುಷ್ಕರ್ಮಿಗಳು ನುಗ್ಗಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ದುಷ್ಕರ್ಮಿಗಳು ಗುಂಡು ಹಾರಿಸಿದ್ದು ಮಾತ್ರವಲ್ಲದೆ, ಸ್ಫೋಟವನ್ನೂ ನಡೆಸಿದ್ದಾರೆ.

ಗುರುದ್ವಾರದ ಎರಡನೇ ಮಹಡಿಯಲ್ಲಿ ೨೫ಕ್ಕೂ ಅಧಿಕ ಮಂದಿ ಭಕ್ತರು ಇದ್ದರೆಂದು ಹೇಳಲಾಗಿದ್ದು, ಅವರ ಸ್ಥಿತಿಗತಿಯ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಉಗ್ರರು ಇನ್ನೂ ಗುರುದ್ವಾರವನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ. ಗುಂಡಿನ ಸದ್ದು ಒಳಗಿನಿಂದ ಇನ್ನೂ ಕೇಳಿಸುತ್ತಿದೆ, ಕೆಲವು ಕಡೆ ಹೊಗೆಯೂ ಏಳುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗುರುದ್ವಾರದ ಅಧ್ಯಕ್ಷರಾಗಿರುವ ಅಫಘಾನಿಸ್ತಾನ ಮೂಲದ ಗುರ್ನಾಮ್‌ ಸಿಂಗ್‌ ಅವರು ದಿಲ್ಲಿಯ ಸಿಖ್‌ ಮುಖಂಡರಿಗೆ ಕರೆ ಮಾಡಿ ಈ ವಿಷಯ ತಿಳಿಸಿದ್ದಾರೆ. ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಿ ರಕ್ಷಿಸಬೇಕೆಂದು ಕೆಲವರು ಟ್ವಿಟರ್‌ ಮೂಲಕ ಮನವಿ ಮಾಡಿದ್ದಾರೆ.

೨೦೨೦ರಲ್ಲೂ ನಡೆದಿತ್ತು ದಾಳಿ
ಅಫಘಾನಿಸ್ತಾನದಲ್ಲಿ ಸಿಖ್‌ ಸಮುದಾಯದ ಜನರು ಅತ್ಯಲ್ಪ ಪ್ರಮಾಣದಲ್ಲಿದ್ದಾರೆ. ಅದರೆ, ಸತತವಾಗಿ ಅವರ ಮೇಲೆ ದಾಳಿಗಳು ನಡೆಯುತ್ತಿವೆ. ೨೦೨೦ರಲ್ಲಿ ಇಲ್ಲಿನ ಪ್ರಮುಖ ಗುರುದ್ವಾರದ ಒಂದರ ಮೇಲೆ ಐಸಿಸ್‌ ಉಗ್ರರು ನಡೆಸಿದ ದಾಳಿಯಲ್ಲಿ 25 ಮಂದಿ ಮೃತಪಟ್ಟಿದ್ದರು.

ಇದನ್ನೂ ಓದಿ| ವಾರಾಣಸಿ ದೇವಾಲಯದಲ್ಲಿ ಸ್ಫೋಟ ನಡೆದ 16 ವರ್ಷಗಳ ಬಳಿಕ ಉಗ್ರನಿಗೆ ಶಿಕ್ಷೆ

Exit mobile version