Site icon Vistara News

ಶಾಲೆ ಮೇಲೆ ಭಯೋತ್ಪಾದಕರ ದಾಳಿ, ಆಹಾರ ಲೂಟಿ; 25 ಮಂದಿ ದುರ್ಮರಣ

Ugandan school terrists attack

#image_title

ಇಸ್ಲಾಮಿಕ್​ ಸ್ಟೇಟ್ಸ್​​ ಸಂಘಟನೆಯ (Islamic State) ಭಯೋತ್ಪಾದಕರು ಮತ್ತೊಮ್ಮೆ ಕ್ರೌರ್ಯ (Terrorist Attack) ಮೆರೆದಿದ್ದಾರೆ. ಆಫ್ರಿಕನ್​​ ದೇಶ ಉಗಾಂಡಾದ ಪಶ್ಚಿಮ ಭಾಗದ ಸಮೀಪದಲ್ಲಿ, ಡೆಮಾಕ್ರಟಿಕ್​ ರಿಪಬ್ಲಿಕ್ ಆಫ್​ ಕಾಂಗೋದ ಗಡಿಭಾಗದಲ್ಲೇ ಇರುವ ಶಾಲೆಯೊಂದರ ಮೇಲೆ ದಾಳಿ (Uganda School Terror Attack) ನಡೆಸಿದ್ದು, 25 ಮಂದಿಯ ಪ್ರಾಣ ತೆಗೆದಿದ್ದಾರೆ. ಹಲವರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಉಗಾಂಡಾ ಪೊಲೀಸರು ‘ಇಸ್ಲಾಮಿಕ್ ಸ್ಟೇಟ್ಸ್​​ ಭಯೋತ್ಪಾದಕ ಸಂಘಟನೆಯ ಸಹ ಸಂಘಟನೆಯಾದ ಅಲೈಡ್​ ಡೆಮಾಕ್ರಟಿಕ್ ಫೋರ್ಸಸ್​ (ADF) ಉಗ್ರರು, ಎಂಪೊಂಡ್ವೆ ಎಂಬಲ್ಲಿರುವ ಲ್ಹುಬಿರಿರಾ ಸೆಕೆಂಡರಿ ಶಾಲೆಯ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿನ ವಸತಿ ನಿಲಯ ಸುಟ್ಟು ಬೂದಿ ಮಾಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ನಡೆದ ಶಾಲೆಯಲ್ಲಿ ಸದ್ಯ 25 ಶವಗಳು ಸಿಕ್ಕಿವೆ. ಗಾಯಗೊಂಡವರನ್ನು, ಶವಗಳನ್ನು ಎಲ್ಲವನ್ನೂ ಸಮೀಪದ ಬ್ವೇರಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಂಟು ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಮೃತಪಟ್ಟವರಲ್ಲಿ ಎಷ್ಟು ಮಂದಿ ಮಕ್ಕಳು ಇದ್ದಾರೆ ಎಂಬುದನ್ನು ಪೊಲೀಸರು ನಿಖರವಾಗಿ ತಿಳಿಸಿಲ್ಲ . ದಾಳಿಯ ಬಳಿಕ ಭಯೋತ್ಪಾದಕರು ಕಾಂಗೋ ಡೆಮಾಕ್ರಟಿಕ್​ ರಿಪಬ್ಲಿಕ್​​ನ ವಿರುಂಗಾ ರಾಷ್ಟ್ರೀಯ ಉದ್ಯಾನವನದ ಕಡೆಗೆ ಪಲಾಯನ ಮಾಡಿದ್ದರು. ಆ ದಾಳಿಕೋರರನ್ನು ಉಗಾಂಡಾ ಸೈನಿಕರು ಹಿಂಬಾಲಿಸಿದ್ದಾರೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಕೂಡ ಇದೇ ಸಂಘಟನೆಯ ಭಯೋತ್ಪಾದಕರು ಡೆಮಾಕ್ರಟಿಕ್​ ರಿಪಬ್ಲಿಕ್​​ ಆಫ್​ ಕಾಂಗೋದ ಪೂರ್ವ ಭಾಗದಲ್ಲಿ ದಾಳಿ ನಡೆಸಿ, 20 ಜನರನ್ನು ಕೊಂದಿದ್ದರು.

ಇದನ್ನೂ ಓದಿ: NIA Raid: ಮಧ್ಯಪ್ರದೇಶದಲ್ಲಿ ಐಸಿಸ್‌ ಉಗ್ರರ ಜಾಲ ಬಯಲು; ಮಸೀದಿಗಳಲ್ಲೇ ಸಂಚು ರೂಪಿಸುತ್ತಿದ್ದ ಮೂವರ ಬಂಧನ

Exit mobile version