Site icon Vistara News

Narendra Modi: ಉಗ್ರವಾದ ನಿರ್ಮೂಲನೆಗೆ ಒಗ್ಗೂಡೋಣ; ದುಬೈನಲ್ಲಿ ಮೋದಿ ಗುಡುಗು

Narendra Modi

Terrorism Is Challenge For Humanity: Says PM Narendra Modi In World Government Summit

ಅಬುಧಾಬಿ: ಇಸ್ಲಾಮಿಕ್‌ ರಾಷ್ಟ್ರವಾದ ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಯೋತ್ಪಾದನೆ ವಿರುದ್ಧ ಗುಡುಗಿದ್ದಾರೆ. ದುಬೈನಲ್ಲಿ ನಡೆದ ವಿಶ್ವ ಸರ್ಕಾರಿ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ನಿರ್ಮೂಲನೆ, ಅಭಿವೃದ್ಧಿ, ಜಾಗತಿಕ ಸಹಕಾರ, ತಂತ್ರಜ್ಞಾನದ ಅಳವಡಿಕೆ, ದುಬೈ ಅಭಿವೃದ್ಧಿ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಇದೇ ವೇಳೆ ಅವರು, “ಭಯೋತ್ಪಾದನೆ ನಿರ್ಮೂಲನೆಗಾಗಿ ಜಗತ್ತಿನ ಎಲ್ಲ ರಾಷ್ಟ್ರಗಳು ಒಗ್ಗೂಡಬೇಕಾದ ಅನಿವಾರ್ಯತೆ ಇದೆ” ಎಂದು ಹೇಳಿದರು.

“ಭಯೋತ್ಪಾದನೆಗೆ ಯಾವುದೇ ಗಡಿ ಇಲ್ಲ. ಇದು ವಿಶ್ವಕ್ಕೆ, ಅಭಿವೃದ್ಧಿಗೆ, ಮನುಕುಲಕ್ಕೆ ಮಾರಕವಾಗಿದೆ. ಇಂತಹ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಎಲ್ಲ ದೇಶಗಳು ಒಗ್ಗೂಡಬೇಕು. ಆಗ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ. ಜಗತ್ತು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಉಗ್ರವಾದವೂ ಒಂದಾಗಿದೆ. ಇದರ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ” ಎಂದು ತಿಳಿಸಿದರು. “ಭಯೋತ್ಪಾದನೆ ಜತೆಗೆ ಕ್ರಿಪ್ಟೋಕರೆನ್ಸಿ ಅಕ್ರಮ, ಸೈಬರ್‌ ಅಪರಾಧಗಳ ನಿಗ್ರಹ, ಕೃತಕ ಬುದ್ಧಿಮತ್ತೆಯ ಸಮರ್ಪಕ ಬಳಕೆಗೂ ಆದ್ಯತೆ ನೀಡಬೇಕು” ಎಂದರು.

“ಭಾರತವು ಜಗತ್ತನ್ನೇ ಒಂದು ಕುಟುಂಬ ಎಂದು ಭಾವಿಸಿದೆ. ಇದೇ ಉದ್ದೇಶ, ಗುರಿಯೊಂದಿಗೆ ಜಿ-20 ಶೃಂಗಸಭೆಯನ್ನು ಭಾರತದಲ್ಲಿ ಯಶಸ್ವಿಯಾಗಿ ಆಯೋಜಿಸಿದೆವು. ಒಂದು ಭೂಮಿ, ಒಂದು ಕುಟುಂಬ ಹಾಗೂ ಒಂದು ಭವಿಷ್ಯ ಎಂಬ ಕಲ್ಪನೆ ನಮ್ಮದಾಗಿದೆ. ಇದೇ ದಿಸೆಯಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳು ಒಗ್ಗೂಡಿ ಜಾಗತಿಕ ಸವಾಲುಗಳನ್ನು ಮೆಟ್ಟಿ ನಿಲ್ಲೋಣ” ಎಂದು ಕರೆ ನೀಡಿದರು.

“ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಜಗತ್ತಿನಾದ್ಯಂತ ಜನ ಸರ್ಕಾರಗಳ ಮೇಲೆ ನಂಬಿಕೆ ಕಳೆದುಕೊಂಡರು. ಆದರೆ, ಭಾರತದಲ್ಲಿ ಇದಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತವಾಯಿತು. ಸಂಕಷ್ಟದ ಸಂದರ್ಭದಲ್ಲೂ ಜನ ನಮ್ಮ ಸರ್ಕಾರದ ಮೇಲೆ ನಂಬಿಕೆ ಇಟ್ಟರು. ಏಕೆಂದರೆ, ಜನರ ಮನಸ್ಸನ್ನು ಅರಿತು, ಅವರಿಗೆ ಅವಶ್ಯವಿರುವ ಎಲ್ಲ ಸೌಕರ್ಯಗಳನ್ನು ಅವರಿಗೆ ಒದಗಿಸಿದೆವು. ಡಿಜಿಟಲ್‌ ಸಾಕ್ಷರತೆ, ಹೆಣ್ಣುಮಕ್ಕಳ ಶಿಕ್ಷಣ ಸೇರಿ ಹತ್ತಾರು ಕ್ಷೇತ್ರಗಳಲ್ಲಿ ಜನರ ಸಹಭಾಗಿತ್ವ ಜಾಸ್ತಿಯಾದ ಕಾರಣ ಜನ ನಮ್ಮ ಮೇಲೆ ಹೆಚ್ಚು ವಿಶ್ವಾಸ ಇಟ್ಟಿದ್ದಾರೆ” ಎಂದು ತಿಳಿಸಿದರು.

ದುಬೈ ಕುರಿತು ಮೆಚ್ಚುಗೆಯ ಮಾತು

ದುಬೈ ಕುರಿತು ನರೇಂದ್ರ ಮೋದಿ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದರು. “ದುಬೈ ಈಗ ಜಾಗತಿಕ ತಂತ್ರಜ್ಞಾನ, ವಾಣಿಜ್ಯ ಹಾಗೂ ಹಣಕಾಸು ಸ್ಥಿರತೆಗೆ ಕೇಂದ್ರ ಸ್ಥಾನವಾಗಿ ಬದಲಾಗಿದೆ. ಇದು ಜಾಗತಿಕ ಏಳಿಗೆಗೂ ಕಾರಣವಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: UAE Hindu Temple: ಯುಎಇ ಹಿಂದು ದೇಗುಲದ ಮೂರ್ತಿಗಳು ಹೇಗಿವೆ? ಇಲ್ಲಿವೆ ಫೋಟೊಗಳು

ಜನಧನ್‌ ಯೋಜನೆ ಪ್ರಸ್ತಾಪ

“ದೇಶದ 50 ಕೋಟಿ ಜನರನ್ನು ನಾವು ಬ್ಯಾಂಕ್‌ಗೆ ಕರೆದುಕೊಂಡು ಬಂದಿದ್ದೇವೆ. ಬ್ಯಾಂಕ್‌ ಖಾತೆಯೇ ಇಲ್ಲದವರು ಈಗ ಆನ್‌ಲೈನ್‌ ವಹಿವಾಟು ನಡೆಸುತ್ತಿದ್ದಾರೆ. ಫಿನ್‌ಟೆಕ್‌ ಕ್ಷೇತ್ರದಲ್ಲಿ ಭಾರತ ಏಳಿಗೆ ಹೊಂದುತ್ತಿದೆ. ಹೆಣ್ಣುಮಕ್ಕಳಿಗೆ ನಾವು ಸಂಸತ್‌ನಲ್ಲೂ ಮೀಸಲಾತಿ ನೀಡಿದ್ದೇವೆ. ಭಾರತದಲ್ಲಿ ನವೋದ್ಯಮಗಳಿಗೆ ಉತ್ತೇಜನ ನೀಡಿದ ಕಾರಣ ಭಾರತವು ಜಗತ್ತಿನಲ್ಲೇ ಸ್ಟಾರ್ಟಪ್‌ಗಳಲ್ಲಿ ಮೂರನೇ ಸ್ಥಾನ ಪಡೆದಿದ್ದೇವೆ. ಸರ್ಕಾರವು ಭೇದ-ಭಾವ ಹಾಗೂ ಭ್ರಷ್ಟಾಚಾರ ಇಲ್ಲದಂತೆ ಆಡಳಿತ ನೀಡಿದ ಕಾರಣ ಹತ್ತಾರು ಮಹತ್ವದ ಬದಲಾವಣೆಗಳಾಗಿವೆ. ಕಳೆದ 10 ವರ್ಷಗಳಲ್ಲಿ 25 ಕೋಟಿ ಜನ ಬಡತನದಿಂದ ಹೊರಬಂದಿರುವುದೇ ಇದಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version