Site icon Vistara News

ತಾಯಿಗೆ ಆದ ವಂಚನೆಯೇ ಹತ್ಯೆಗೆ ಕಾರಣ, ಆದ್ರೆ ಟಾರ್ಗೆಟ್‌ ಶಿಂಜೊ ಅಬೆ ಆಗಿರಲಿಲ್ಲ: ಹಂತಕ ಬಿಚ್ಚಿಟ್ಟ ಸತ್ಯ!

Tetsuya Yamagami

ಟೋಕಿಯೋ: ಜಪಾನ್‌ ಮಾಜಿ ಪ್ರಧಾನಿ ಶಿಂಜೊ ಅಬೆಯನ್ನು ಕೊಂದ ಯಮಗಾಮಿ ಟೆಟ್ಸುಯಾ ಟಾರ್ಗೆಟ್‌ ವಾಸ್ತವದಲ್ಲಿ ಶಿಂಜೊ ಆಗಿರಲೇ ಇಲ್ಲವಂತೆ. ಈ ವಿಚಾರವನ್ನು ಜಪಾನ್‌ನ ಕ್ಯುಡೊ ನ್ಯೂಸ್‌ ವರದಿ ಮಾಡಿದೆ. ಯಮಗಾಮಿ ಟೆಟ್ಸುಯಾ ಜು.8ರಂದು ಅಬೆಯವರಿಗೆ ಗುಂಡು ಹಾರಿಸಿದ್ದಾನೆ. ಅಷ್ಟಾದ ಮೇಲೆ ಆತ ಓಡಿಹೋಗುವ ಪ್ರಯತ್ನವನ್ನೂ ಮಾಡಲಿಲ್ಲ. ಗನ್‌ ಹಿಡಿದು ಹಾಗೇ ನಿಂತಿದ್ದ. ಪೊಲೀಸರು ಆತನನ್ನು ಎಳೆದುಕೊಂಡು ಹೋಗಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ನನಗೆ ಜಪಾನ್‌ ಮಾಜಿ ಪ್ರಧಾನಮಂತ್ರಿಯನ್ನು ಕೊಲ್ಲುವ ಉದ್ದೇಶ ಮೊದಲು ಇರಲಿಲ್ಲ ಎಂದು ಹೇಳಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಂದಹಾಗೇ, ಈ ಹಂತಕನ ಟಾರ್ಗೆಟ್‌ ಆಗಿದ್ದಿದ್ದು ಧಾರ್ಮಿಕ ಗುಂಪೊಂದರ ನಾಯಕ. ʼಆ ಧಾರ್ಮಿಕ ಮುಖಂಡ ನನ್ನ ಅಮ್ಮನನ್ನು ವಂಚಿಸಿದ್ದ. ಹಾಗಾಗಿ ಅವನನ್ನು ಕೊಲ್ಲುವುದು ನನ್ನ ಪರಮೋದ್ದೇಶವಾಗಿತ್ತು. ಆದರೆ ಅದು ಸಾಧ್ಯವಾಗದೆ ಹತಾಶೆಗೆ ಒಳಗಾಗಿದ್ದೆ. ಅಷ್ಟೇ ಅಲ್ಲ, ಆ ನಾಯಕನ ಧಾರ್ಮಿಕ ಸಂಘಟನೆಯನ್ನು ಶಿಂಜೊ ಅಬೆ ತನ್ನ ಆಡಳಿತದ ಅವಧಿಯಲ್ಲಿ ತೀವ್ರವಾಗಿ ಬೆಂಬಲಿಸಿದ್ದರು. ಧಾರ್ಮಿಕ ಗುಂಪಿಗೆ ಸಿಕ್ಕಾಪಟೆ ಮಹತ್ವ ಕೊಟ್ಟಿದ್ದರು. ಆ ಸಿಟ್ಟು ಅಬೆ ಮೇಲೆ ಇತ್ತು. ಅಷ್ಟಾದರೂ ಅಬೆಯನ್ನು ಕೊಲ್ಲಲೇಬೇಕು ಎಂಬ ಮಹದಾಸೆಯೂ ನನಗೆ ಇರಲಿಲ್ಲ. ಈ ಹಿಂದೆ ಶಿಂಜೊ ಅಬೆ ಭಾಷಣ ಮಾಡಿದ ಒಂದೆರಡು ಜಾಗಕ್ಕೂ ಭೇಟಿ ನೀಡಿದ್ದೆ. ನನಗೆ ಆ ಧಾರ್ಮಿಕ ಮುಖಂಡನ ಮೇಲಿದ್ದ ಸಿಟ್ಟು ಶಿಂಜೊ ಮೇಲೆ ತಿರುಗಿತು. ಹಾಗಾಗಿ ದಾಳಿ ಮಾಡಿದ್ದೆʼ ಎಂದು ಯಮಗಾಮಿ ಪೊಲೀಸರಿಗೆ ಹೇಳಿದ್ದಾಗಿ ವರದಿಯಾಗಿದೆ.

ಶುಕ್ರವಾರ ಬೆಳಗ್ಗೆ ಶಿಂಜೊ ಅಬೆ ನಾರಾ ಎಂಬ ನಗರದಲ್ಲಿ ಚುನಾವಣೆ ಭಾಷಣ ಮಾಡುತ್ತಿದ್ದಾಗ, ಯಮಗಾಮಿ ಗುಂಡಿನ ದಾಳಿ ನಡೆಸಿದ್ದ. ಈತ ಕೂಡ ನಾರಾ ನಿವಾಸಿಯೇ ಆಗಿದ್ದಾನೆ. ಯಮಗಾಮಿಯನ್ನು ಬಂಧಿಸಿದ ಬಳಿಕ ಪೊಲೀಸರು ಆತನ ಮನೆಯಲ್ಲೂ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ಅದನ್ನೂ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶಿಂಜೊ ಅಬೆ ಸಾವು ಸಂಭ್ರಮಿಸಿದ ಚೀನಾ ಪ್ರಜೆಗಳು; ಈಗಿನ ಪ್ರಧಾನಿ ಸರದಿ ಯಾವಾಗ ಎಂಬ ಪ್ರಶ್ನೆ

Exit mobile version