ಟೆಕ್ಸಾಸ್: ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್ ಪ್ರದೇಶದ ಔಟ್‌ಲೆಟ್ ಮಾಲ್‌ನಲ್ಲಿ ಶನಿವಾರ ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ದುಷ್ಕರ್ಮಿಯೂ ಸೇರಿ ಒಂಬತ್ತು ಜನ ಸಾವನ್ನಪ್ಪಿದ್ದಾರೆ.
ಪೊಲೀಸರು ನಡೆಸಿದ ಪ್ರತಿದಾಳಿ ಕಾರ್ಯಾಚರಣೆಯಲ್ಲಿ ಬಂದೂಕುಧಾರಿಯನ್ನೂ ಗುಂಡಿಕ್ಕಿ ಕೊಲ್ಲಲಾಗಿದೆ. ಆತ ಏಕಾಂಗಿಯಾಗಿ ಕೃತ್ಯ ಎಸಗಿದ್ದಾನೆ ಎಂದು ನಂಬಲಾಗಿದೆ. ಅಲೆನ್ ಪ್ರೀಮಿಯಂ ಔಟ್‌ಲೆಟ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಏಳು ಜನ ಸ್ಥಳದಲ್ಲೇ ಮತ್ತು ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಲಿಯಾದವರಲ್ಲಿ ಕೆಲವರು ಮಕ್ಕಳು ಎಂದು ಭಾವಿಸಲಾಗಿದೆ. ಕನಿಷ್ಠ ಏಳು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಮೂವರು ತೀವ್ರ ಅಸ್ವಸ್ಥರಾಗಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಗುಂಡಿನ ದಾಳಿ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿ, ಶಂಕಿತ ದಾಳಿಕೋರನನ್ನು ಗುಂಡಿಕ್ಕಿ ಕೊಂದರು. ಘಟನೆಯ ಸ್ಥಳದಲ್ಲಿ ಹೆಚ್ಚಿನ ಮಾಹಿತಿ ನೀಡಬಹುದಾದ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ದಾಳಿಕೋರನ ಹೆಚ್ಚಿನ ವಿವರ ತಿಳಿದು ಬರಬೇಕಿದೆ.
ಬಂದೂಕು ಹಿಂಸಾಚಾರ (gun violence) ಆರ್ಕೈವ್ ಪ್ರಕಾರ, ಅಮೆರಿಕದಲ್ಲಿ ಈ ವರ್ಷ ಇಲ್ಲಿಯವರೆಗೆ ಕನಿಷ್ಠ 198 ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ. ಈ ಪ್ರಕರಣವೂ ಸೇರಿ 20ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಅನೇಕ ಮಂದಿ ಗಾಯಗೊಂಡಿದ್ದಾರೆ. ಈ ವಾರದ ಆರಂಭದಲ್ಲಿ ಟೆಕ್ಸಾಸ್‌ನಲ್ಲಿ ಪೊಲೀಸರು ಒಂಬತ್ತು ವರ್ಷದ ಬಾಲಕ ಸೇರಿದಂತೆ ಐದು ನೆರೆಹೊರೆಯವರನ್ನು ಗುಂಡಿಕ್ಕಿ ಕೊಂದ ಆರೋಪಿಯನ್ನು ಬಂಧಿಸಿದ್ದರು. ಮುಕ್ತ ಬಂದೂಕು ಲೈಸೆನ್ಸ್ ಹಾಗೂ ಮಾನಸಿಕ ವಿಕಲ್ಪಗಳು ಅಮೆರಿಕದ ಬಂದೂಕು ಹಿಂಸೆಗಳಿಗೆ ಮೂಲವಾಗಿವೆ.
ಇದನ್ನೂ ಓದಿ: ಪಾಕಿಸ್ತಾನದ ಶಾಲೆಯೊಂದರಲ್ಲಿ ಎರಡು ಬಾರಿ ಗುಂಡಿನ ದಾಳಿ; 8 ಶಿಕ್ಷಕರ ಹತ್ಯೆ