Site icon Vistara News

Most Expensive Coin: ಬ್ರಿಟನ್‌ನ ದಿವಂಗತ ರಾಣಿಯ ಗೌರವಾರ್ಥ ಜಗತ್ತಿನ ದುಬಾರಿ ನಾಣ್ಯ ಅನಾವರಣ! ಬೆಲೆ ಎಷ್ಟು?

Sanjiv Mehta With World's most Expensive Coin

ನವದೆಹಲಿ: ಬ್ರಿಟನ್‌ನ (Britain) ದಿವಂಗತ ರಾಣಿ ಎಲಿಜಬೆತ್ (late Queen Elizabeth) ಅವರ ಗೌರವಾರ್ಥವಾಗಿ ಸುಮಾರು 4 ಕೆಜಿ ಚಿನ್ನ ಮತ್ತು 6,426ಕ್ಕೂ ಹೆಚ್ಚು ವಜ್ರಗಳಿಂದ ಮಾಡಿದ ನಾಣ್ಯ(Most Expensive coin)ವನ್ನು ಅನಾವರಣಗೊಳಿಸಲಾಯಿತು. ಈ ನಾಣ್ಯವನ್ನು ಸಾರ್ವಕಾಲಿಕ ಅತ್ಯಮೂಲ್ಯವಾದ ನಾಣ್ಯ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ಸುಮಾರು 18.47 ಮಿಲಿಯನ್ ಪೌಂಡ್ ವೆಚ್ಚ ಮಾಡಲಾಗಿದೆ(ಅಂದಾಜು 1,91,31,00,286 ರೂ.) ಕ್ವಿನ್ ಎಲಿಜಬೆತ್ ಅವರು ಕಳೆದ ವರ್ಷ ಸೆಪ್ಟೆಂಬರ್ 8ರಂದು ನಿಧನರಾಗಿದ್ದರು. ಈ ನಾಣ್ಯಕ್ಕೆ ದಿ ಕ್ರೌನ್ (The Crown) ಎಂದು ನಾಮಕರಣ ಮಾಡಲಾಗಿದೆ.

ಈ ದುಬಾರಿ ನಾಣ್ಯವನ್ನು ಈಸ್ಟ್ ಇಂಡಿಯಾ ಕಂಪನಿ ವಿನ್ಯಾಸ ಮಾಡಿದೆ. ಕಂಪನಿಯು ಈ ನಾಣ್ಯಕ್ಕೆ ‘ದಿ ಕ್ರೌನ್’ ಎಂದು ಕರೆದಿದ್ದು, ಇದಕ್ಕಾಗಿ ಸುಮಾರು 18.47 ಮಿಲಿಯನ್ ಪೌಂಡ್ ಹಣವನ್ನು ವೆಚ್ಚ ಮಾಡಲಾಗಿದೆ. ಈ ದುಬಾರಿ ನಾಣ್ಯವನ್ನು ಕಾಮನ್‌ವೆಲ್ತ್‌ ರಾಷ್ಟ್ರಗಳ ಕುಶಲಕರ್ಮಿಗಳು ಸುಮಾರು 16 ತಿಂಗಳ ಪ್ರೀತಿಯ ಶ್ರಮದ ಮೂಲಕ ತಯಾರಿಸಿದ್ದಾರೆ. ಈ ವಿಶಿಷ್ಟ ನಾಣ್ಯ ಪ್ರಾಜೆಕ್ಟ್ ಪೂರ್ಣಗೊಳ್ಳಲಾರದು ಎಂದು ಹಲವರು ಭಾವಿಸಿದ್ದರು. ಕೊರೋನಾ ಸಾಂಕ್ರಾಮಿಕ ಪರಿಣಾಮ ವಜ್ರಗಳ ಪೂರೈಕೆ ಕೊರತೆಯಾಗಿತ್ತು. ಅಲ್ಲದೇ ಇಷ್ಟೊಂದು ದೊಡ್ಡ ಯೋಜನೆಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವುದು ಕಷ್ಟ ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ಆ ಎಲ್ಲ ಅಡ್ಡ ಮಾತುಗಳನ್ನು ಮೀರಿ ಈಸ್ಟ್ ಇಂಡಿಯಾ ಕಂಪನಿಯು ಬ್ರಿಟನ್‌ನ ದಿವಂಗತ ರಾಣಿ ಎಲಿಜಬೆತ್ ಅವರ ಗೌರವಾರ್ಥ ನಾಣ್ಯವನ್ನು ಅನಾವರಣ ಮಾಡಿದೆ.

ಸದ್ಯ ಅತಿ ದುಬಾರಿ ನಾಣ್ಯ ಎಂಬ ಕೀರ್ತಿ ಡಬಲ್ ಈಗಲ್ ಹೆಸರಿನಲ್ಲಿದೆ. ಈ ನಾಣ್ಯದ ಬೆಲೆ ಅಂದಾಜು 15.17 ಮಿಲಿಯನ್ ಪೌಂಡ್ ಆಗಿದೆ. ಈಗ ಡಬಲ್ ಈಗಲ್ ಖ್ಯಾತಿಯನ್ನು ದಿ ಕ್ರೌನ್ ನಾಣ್ಯವು ಕಸಿದುಕೊಂಡಿದೆ. ಈ ನಾಣ್ಯದ ಬೆಲೆ ಅಂದಾಜು 18.47 ಮಿಲಿಯನ್ ಪೌಂಡ್ ಆಗಿದೆ. ಈ ಮಧ್ಯೆ, ಕ್ರೌನ್ ನಾಣ್ಯ ಮಾರಾಟಕ್ಕೆ ಹೋಗಲಿದೆಯೇ ಅಥವಾ ಇಲ್ಲವೋ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಾಸ್ಕೆಟ್‌ ಬಾಲ್‌ನಷ್ಟು ದೊಡ್ಡ ನಾಣ್ಯ

ದುಬಾರಿ ದಿ ಕ್ರೌನ್ ನಾಣ್ಯವು ಬಾಸೆಕ್ಟ್‌ ಬಾಲ್‌ನಷ್ಟು ದೊಡ್ಡದಾಗಿದೆ. ಕಲಾವಿದರಾದ ಮೇರಿ ಗಿಲಿಕ್, ಅರ್ನಾಲ್ಡ್ ಮಚಿನ್, ರಾಫೆಲ್ ಮಕ್ಲೌಫ್ ಮತ್ತು ಇಯಾನ್ ರ್ಯಾಂಕ್-ಬ್ರಾಡ್ಲಿ ರಚಿಸಿದ ದಿವಂಗತ ರಾಜಾಡಳಿತದ ಹಲವಾರು ಭಾವಚಿತ್ರಗಳನ್ನು ಒಳಗೊಂಡಿದೆ. ಅಲ್ಲದೇ, ಜೋಡಿ ಕ್ಲಾರ್ಕ್ ಅವರ ಭಾವಚಿತ್ರವನ್ನು ಮತ್ತಷ್ಟು ಮಧ್ಯಭಾಗದ ನಾಣ್ಯದ ಹಿಮ್ಮುಖ ಭಾಗದಲ್ಲಿ ಬಳಸಲಾಗಿದೆ.

ಈ ಸುದ್ದಿಯನ್ನೂ ಓದಿ: ಮೆಚ್ಚಿನ ಜನತೆಗೆ ಮುಗಿಲಿನಿಂದ ದರ್ಶನ ನೀಡಿದಳೇ ರಾಣಿ ಎಲಿಜಬೆತ್!

ದಿ ಕ್ರೌನ್ ನಾಣ್ಯವನ್ನು ಕರಕುಶಲಗೊಳಿಸಲಾಗಿದೆ. ವಜ್ರಗಳನ್ನು ನಿಖರವಾಗಿ ಕತ್ತರಿಸಿ ವಿನ್ಯಾಸದೊಳಗೆ ನಿಖರವಾಗಿ ಹೊಂದುವಂತೆ ಮತ್ತು ಪ್ರತ್ಯೇಕವಾಗಿ ಅಳವಡಿಸಲಾಗಿದೆ. ಆದರೆ ಬ್ರಿಟಿಷ್ ಯೂನಿಯನ್ ಧ್ವಜವನ್ನು ಪ್ರತಿಬಿಂಬಿಸಲು ಎರಡು ವಿಭಿನ್ನ ಸೆಟ್ಟಿಂಗ್‌ಗಳನ್ನು ಬಳಸಲಾಗಿದೆ ಎಂದು ಈಸ್ಟ್ ಇಂಡಿಯಾ ಕಂಪನಿ ಹೇಳಿದೆ. ಅಂದ ಹಾಗೆ, 2005ರಲ್ಲಿ ಭಾರತೀಯ ಬಿಸಿನೆಸ್ ಮನ್ ಸಂಜೀವ್ ಮೆಹ್ತಾ ಅವರು ಈಸ್ಟ್ ಇಂಡಿಯಾ ಕಂಪನಿಯನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ. ಇದೇ ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಭಾರತಕ್ಕೆ ಕಾಲಿಟ್ಟು, ಸುಮಾರು 200 ವರ್ಷಗಳ ಕಾಲ ಭಾರತದ ಮೇಲೆ ಆಡಳಿತ ನಡೆಸಿದ್ದ ಬ್ರಿಟಿಷರ್ ಕಂಪನಿಗೆ ಈಗ ಭಾರತೀಯನೇ ಒಡೆಯರಾಗಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version