Site icon Vistara News

ವಿಸ್ತಾರ Explainer | ನೇಪಾಳದಲ್ಲಿ ಪದೇಪದೆ ವಿಮಾನ ದುರಂತ ಸಂಭವಿಸುವುದೇಕೆ? ಇದುವರೆಗಿನ ಭೀಕರ ದುರಂತ ಯಾವವು?

Nepal Plane Crash

ನೇಪಾಳದ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ ವೇ ಬಳಿಯ ಕಣಿವೆಯಲ್ಲಿ ವಿಮಾನ ಪತನವಾಗಿದ್ದು, ಐವರು ಭಾರತೀಯರು ಸೇರಿ ವಿಮಾನದಲ್ಲಿದ್ದ ಎಲ್ಲ 72 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದುವರೆಗೆ 40ಕ್ಕೂ ಅಧಿಕ ಶವಗಳು ಸಿಕ್ಕಿದ್ದು, ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದೊಂದೇ ಅಲ್ಲ, ನೇಪಾಳದಲ್ಲಿ ಆಗಾಗ ವಿಮಾನ ಪತನಗಳು ಸಂಭವಿಸುತ್ತಲೇ ಇರುತ್ತವೆ. ನೂರಾರು ಜನ ದುರಂತಕ್ಕೆ ಬಲಿಯಾಗುತ್ತಲೇ ಇರುತ್ತಾರೆ. ಹಾಗಾದರೆ, ನೇಪಾಳದಲ್ಲಿಯೇ ಏಕೆ ಹೆಚ್ಚಿನ ವಿಮಾನಗಳು ಪತನವಾಗುತ್ತವೆ? ಇದಕ್ಕೆ ಕಾರಣಗಳೇನು? ಇದುವರೆಗೆ ಸಂಭವಿಸಿದ ಪ್ರಮುಖ ವಿಮಾನ ದುರಂತಗಳು ಯಾವವು ಎಂಬುದರ ಸಂಕ್ಷಿಪ್ತ ಮಾಹಿತಿಯೇ ಇಂದಿನ ವಿಸ್ತಾರ Explainer.

ವಿಮಾನ ಪತನಕ್ಕೆ ಕಾರಣಗಳೇನು?
ನೇಪಾಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಮಾನ ದುರಂತ ಸಂಭವಿಸಲು ಹತ್ತಾರು ಕಾರಣಗಳಿವೆ. ನೇಪಾಳವು ಪರ್ವತ ಭೂಪ್ರದೇಶವಾದ ಕಾರಣ ವಿಮಾನಗಳ ಹಾರಾಟ, ಲ್ಯಾಂಡಿಂಗ್‌ಗೆ ಕಷ್ಟವಾಗುತ್ತದೆ. ಶಿಖರಗಳ ಬಳಿಯೇ ವಿಮಾನ ನಿಲ್ದಾಣಗಳು ಇರುವುದರಿಂದ ಟೇಕ್‌ಆಫ್‌ ಹಾಗೂ ಲ್ಯಾಂಡ್‌ ಆಗುವಾಗ ಹೆಚ್ಚಿನ ದುರಂತಗಳು ಸಂಭವಿಸುತ್ತಿವೆ. ಇನ್ನು ನೇಪಾಳ ಸರ್ಕಾರ ಹಾಗೂ ಖಾಸಗಿ ವಿಮಾನಯಾನ ಸಂಸ್ಥೆಗಳು ಹೊಸ ಹೊಸ ವಿಮಾನಗಳ ಮೇಲೆ ಹೂಡಿಕೆ ಮಾಡದಿರುವುದು, ಮೂಲ ಸೌಕರ್ಯಗಳ ಕೊರತೆ ಹಾಗೂ ವಿಮಾನಯಾನ ಕ್ಷೇತ್ರದ ಮೇಲೆ ಸರಿಯಾದ ನಿಯಂತ್ರಣ ಇರದ ಕಾರಣ ಹೆಚ್ಚಿನ ದುರಂತಗಳು ಸಂಭವಿಸುತ್ತಿವೆ ಎಂದು ವರದಿಗಳು ತಿಳಿಸಿವೆ.

2022ರಲ್ಲಿ ಸಂಭವಿಸಿದ ವಿಮಾನ ದುರಂತ.

ನೇಪಾಳ ಏರ್‌ಲೈನ್ಸ್‌ಗೆ ಐರೋಪ್ಯ ಒಕ್ಕೂಟ ನಿಷೇಧ
ನೇಪಾಳ ಮೂಲದ ಏರ್‌ಲೈನ್ಸ್‌ಗಳ ವಿಮಾನಗಳ ಹಾರಾಟವನ್ನೇ ಐರೋಪ್ಯ ಒಕ್ಕೂಟ ನಿಷೇಧಿಸಿದೆ. 2008ರಿಂದ 2012ರ ಅವಧಿಯಲ್ಲಿ ನೇಪಾಳ ವಿಮಾನಗಳ ಪತನ ಹೆಚ್ಚಾದ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಐರೋಪ್ಯ ಒಕ್ಕೂಟವು ನೇಪಾಳ ವಿಮಾನಗಳು ಸದಸ್ಯ ರಾಷ್ಟ್ರಗಳ ವಾಯುಮಾರ್ಗವನ್ನು ಬಳಸುವಂತಿಲ್ಲ ಎಂದು ನಿರ್ಬಂಧ ವಿಧಿಸಿದೆ. 2013ರಿಂದಲೂ ನೇಪಾಳ ವಿಮಾನಗಳ ಹಾರಾಟವನ್ನು ನಿಷೇಧಿಸಿದ್ದು, ಈಗಲೂ ನಿರ್ಬಂಧ ಜಾರಿಯಲ್ಲಿದೆ. ನೇಪಾಳಕ್ಕೆ ಇದು ಹಿನ್ನಡೆಯಾಗಿದ್ದು, ನಿರ್ಬಂಧಿದ ಹೊರಬರಲು ಹಲವು ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ.

30 ವರ್ಷದಲ್ಲಿ 27 ವಿಮಾನ ದುರಂತ
ನೇಪಾಳದಲ್ಲಿ ಕಳೆದ ಮೂರು ದಶಕಗಳಲ್ಲಿ ಭೀಕರ ದುರಂತಗಳು ಸಂಭವಿಸಿವೆ. 30 ವರ್ಷಗಳಲ್ಲಿ 27 ವಿಮಾನಗಳು ಪತನಗೊಂಡಿವೆ. ಅದರಲ್ಲೂ, 2008ರಿಂದ 2012ರ ಅವಧಿಯಲ್ಲಿ ವರ್ಷಕ್ಕೆ ಸರಾಸರಿ ಎರಡು ವಿಮಾನ ದುರಂತಗಳು ಸಂಭವಿಸಿವೆ. ಕಳೆದ 10 ವರ್ಷದಲ್ಲಿಯೂ ಸರಾಸರಿ ವರ್ಷಕ್ಕೆ ಎರಡರಂತೆ 20 ವಿಮಾನಗಳು ಪತನಗೊಂಡಿವೆ. ಹಾಗಾಗಿ, ನೇಪಾಳದ ವಿಮಾನಯಾನ ಸಂಸ್ಥೆಗಳ ವಿಮಾನಗಳು ಎಂದರೆ ಜನರಿಗೆ ಭಯ ಉಂಟಾಗುತ್ತದೆ. ಇದಕ್ಕಾಗಿ ಐರೋಪ್ಯ ಒಕ್ಕೂಟವು ನಿರ್ಬಂಧ ವಿಧಿಸಿದೆ.

ನೇಪಾಳ ಕಂಡ ಭೀಕರ ದುರಂತಗಳು
2022, ಮೇ 29, 22 ಜನ ಸಾವು:
ನೇಪಾಳದ ತಾರಾ ಏರ್‌ ಸಂಸ್ಥೆಯ ವಿಮಾನ ಮುಸ್ತಾಂಗ್‌ ಜಿಲ್ಲೆಯಲ್ಲಿ ಪತನಗೊಂಡು 22 ಜನ ಮೃತಪಟ್ಟಿದ್ದರು. ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಪತನಗೊಂಡಿತ್ತು.

2018, ಮಾರ್ಚ್‌ 12, 51 ಮಂದಿ ಬಲಿ: ಕಾಠ್ಮಂಡು ವಿಮಾನ ನಿಲ್ದಾಣದ ಬಳಿ ಅಮೆರಿಕ-ಬಾಂಗ್ಲಾ ವಿಮಾನಯಾನ ಸಂಸ್ಥೆಯ ವಿಮಾನ ಪತನವಾಗಿ 51 ಜನ ಮೃತಪಟ್ಟಿದ್ದರು.

2012ರಲ್ಲಿ ಪತನಗೊಂಡಿದ್ದ ಸೀತಾ ಏರ್‌ಲೈನ್ಸ್‌ ವಿಮಾನ.

2016, ಫೆಬ್ರವರಿ 24, 2016, 23 ಜನರ ಮರಣ: ತಾರಾ ಏರ್‌ಲೈನ್ಸ್‌ ವಿಮಾನವು ಇದೇ ಪೋಖರಾ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿದ ಎಂಟೇ ನಿಮಿಷಕ್ಕೆ ಪತನಗೊಂಡು 23 ನಾಗರಿಕರು ಮರಣ ಹೊಂದಿದ್ದರು.

1992, ಸೆಪ್ಟೆಂಬರ್‌ 28, 167 ಜನ ಸಾವು: ನೇಪಾಳ ಇತಿಹಾಸದಲ್ಲಿಯೇ ಕಾಠ್ಮಂಡು ಏರ್‌ಪೋರ್ಟ್‌ ಬಳಿ ಸಂಭವಿಸಿದ ದುರಂತವು ಭೀಕರ ದುರಂತ ಎನಿಸಿದೆ. ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನ ವಿಮಾನವು ಶಿಖರವೊಂದಕ್ಕೆ ಡಿಕ್ಕಿಯಾಗಿ ವಿಮಾನದಲ್ಲಿದ್ದ ಎಲ್ಲ 167 ಜನ ಬಲಿಯಾಗಿದ್ದರು.

ಇದನ್ನೂ ಓದಿ | Nepal Plane Crash | ನೇಪಾಳದಲ್ಲಿ 72 ಜನರಿದ್ದ ವಿಮಾನ ಪತನ; ಹಲವರು ಮೃತಪಟ್ಟಿರುವ ಶಂಕೆ

Exit mobile version