ವ್ಯಾಟಿಕನ್ ಸಿಟಿ: ಬುಧವಾರ ಬಿಡುಗಡೆಯಾದ ಸಾಕ್ಷ್ಯಚಿತ್ರದಲ್ಲಿ ಪೋಪ್ ಫ್ರಾನ್ಸಿಸ್ (Pope Francis) ಅವರು ಲೈಂಗಿಕತೆಯ ಸದ್ಗುಣಗಳನ್ನು ಶ್ಲಾಘಿಸಿದ್ದರು. ಸೆಕ್ಸ್(ಲೈಂಗಿಕ ಕ್ರಿಯೆ) ಎನ್ನುವುದು ದೇವರು ಮಾನವರಿಗೆ ನೀಡಿದ ಸುಂದರವಾದ ವಸ್ತುಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದ್ದಾರೆ. 86 ವರ್ಷ ವಯಸ್ಸಿನ ಪೋಪ್, ಡಿಸ್ನಿ ನಿರ್ಮಾಣದ “ದಿ ಪೋಪ್ ಆನ್ಸರ್ಸ್” (The Pope Answers) ಸಾಕ್ಷ್ಯಚಿತ್ರದಲ್ಲಿ ಸೆಕ್ಸ್ ಬಗ್ಗೆ ಗುಣಗಾನ ಮಾಡಿದ್ದಾರೆ. ಈ ಸಾಕ್ಷ್ಯ ಚಿತ್ರವವನ್ನು ಕಳೆದ ವರ್ಷ ರೋಮ್‌ನಲ್ಲಿನಲ್ಲಿ ಚಿತ್ರಿಕರಿಸಲಾಗಿದ್ದು, ತಮ್ಮ 20ರ ಹರೆಯದಲ್ಲಿರುವ 10 ಜನರೊಂದಿಗೆ ನಡೆಸಿದ ಸಂವಾದವನ್ನು ಇದು ಒಳಗೊಂಡಿದೆ.
ಎಲ್‌ಜಿಬಿಟಿ ಹಕ್ಕುಗಳು, ಗರ್ಭಪಾತ, ಪೋರ್ನ್ ಇಂಡಸ್ಟ್ರೀ, ಸೆಕ್ಸ್, ನಂಬಿಕೆ, ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ಸೇರಿದಂತೆ ಅನೇಕ ವಿಷಯಗಳು ಕುರಿತು ಯುವಕರು ಪೋಪ್ ಫ್ರಾನ್ಸಿಸ್ ಅವರಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಅವರ ಎಲ್ಲ ಪ್ರಶ್ನೆಗಳಿಗೆ ಪೋಪ್ ಉತ್ತರಿಸಿದ್ದಾರೆ.
ಸೆಕ್ಸ್ ಸಂಬಂಧ ಪ್ರಶ್ನೆಗೆ ಉತ್ತರಿಸಿದ ಪೋಪ್, ಸೆಕ್ಸ್(ಲೈಂಗಿಕ ಕ್ರಿಯೆ) ಎನ್ನುವುದು ಅತ್ಯಂತ ಸುಂದರವಾದ ಸಂಗತಿ. ಮಾನವರಿಗೆ ದೇವರು ನೀಡಿದ ಕಾಣಿಕೆ ಎಂದು ಹೇಳಿದ್ದಾರೆ. ಇದೇ ವೇಳೆ, ಹಸ್ತಮೈಥುನದ ಬಗ್ಗೆ ಮಾತನಾಡಿ, ಲೈಂಗಿಕವಾಗಿ ನಿಮ್ಮನ್ನು ನೀವು ಅಭಿವ್ಯಕ್ತಿಗೊಳಿಸುವುದು ಹೆಚ್ಚು ಉಲ್ಲಾಸದಾಯಕವಾಗಿರುತ್ತದೆ. ಆದ್ದರಿಂದ ನಿಜವಾದ ಲೈಂಗಿಕ ಅಭಿವ್ಯಕ್ತಿಯಿಂದ ದೂರವಾದರೆ ಅದು ನಿಮ್ಮನ್ನು ಕುಂಠಿತಗೊಳಿಸುತ್ತದೆ. ಲೈಂಗಿಕತ ಅಭಿವ್ಯಕ್ತಿಯ ಉಲ್ಲಾಸ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Pope Francis: ಸಲಿಂಗ ಅಪರಾಧವಲ್ಲ, ನಾವೆಲ್ಲರೂ ದೇವರ ಮಕ್ಕಳು: ಪೋಪ್ ಫ್ರಾನ್ಸಿಸ್
ಎಲ್‌ಜಿಬಿಟಿ ಜನರ ಬಗ್ಗೆ ಮಾತನಾಡಿರುವ ಪೋಪ್, ಎಲ್ಲರೂ ದೇವರ ಮಕ್ಕಳೇ. ದೇವರು ಯಾರನ್ನೂ ತಿರಸ್ಕರಿಸುವುದಿಲ್ಲ. ದೇವರು ತಂದೆ. ಹಾಗಾಗಿ, ಚರ್ಚ್‌ನಿಂದ ಯಾರನ್ನೂ ಬಹಿಷ್ಕರಿಸುವ ಹಕ್ಕು ನನಗಿಲ್ಲ ಎಂದು ತಿಳಿಸಿದ್ದಾರೆ. ವ್ಯಾಟಿಕನ್ ಸಿಟಿಯ L’Osservatore Romano ಸುದ್ದಿ ಪತ್ರಿಕೆಯಲ್ಲಿ ಪೋಪ್ ಅವರ ಎಲ್ಲ ಹೇಳಿಕೆಗಳನ್ನು ಪ್ರಕಟಿಸಲಾಗಿದೆ. ತರುಣರ ಜತೆಗಿನ ಪೋಪ್ ಅವರ ಮಾತುಕತೆಯು ಮುಕ್ತ ಹಾಗೂ ಪ್ರಾಮಾಣಿಕ ಸಂವಾದವಾಗಿದೆ ಎಂದು ವ್ಯಾಟಿಕನ್ ಸಿಟಿಯ ಅಧಿಕೃತ ನ್ಯೂಸ್ ಪೇಪರ್ ವರ್ಣಿಸಿದೆ.