Site icon Vistara News

Taliban: ತುಂಬಿದ ಸ್ಟೇಡಿಯಂನಲ್ಲಿ ಇಬ್ಬರನ್ನು ಗುಂಡಿಕ್ಕಿ ಸಾಯಿಸಿದ ತಾಲಿಬಾನಿಗಳು; ಯಾಕೆ?

Talibans

Thousands Watch As Taliban Executes Convicted Murderers In Football Stadium

ಕಾಬೂಲ್‌: ಅಫಘಾನಿಸ್ತಾನದಲ್ಲಿ ಅಮೆರಿಕ ಮಿಲಿಟರಿ ನಿರ್ಗಮಿಸಿದ ಬಳಿಕ ಇಡೀ ದೇಶವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿರುವ ತಾಲಿಬಾನ್‌ ಉಗ್ರರ (Taliban) ಅಟ್ಟಹಾಸ ಮುಂದುವರಿದಿದೆ. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಅವರ ಹಕ್ಕುಗಳ ದಮನ, ಮನೆಯಿಂದ ಹೊರಬರದಂತೆ ನಿರ್ಬಂಧ, ತಾಲಿಬಾನಿಗಳನ್ನು ಪ್ರಶ್ನಿಸಿದವರ ಹತ್ಯೆ ಸೇರಿ ಹಲವು ರೀತಿಯ ಅನಾಚಾರದಲ್ಲಿ ತೊಡಗಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಅಫಘಾನಿಸ್ತಾನದಲ್ಲಿರುವ (Afghanistan) ಫುಟ್ಬಾಲ್‌ ಸ್ಟೇಡಿಯಂನಲ್ಲಿ (Football Stadium) ಸಾವಿರಾರು ಜನರ ಮಧ್ಯೆ ಇಬ್ಬರು ವ್ಯಕ್ತಿಗಳನ್ನು ತಾಲಿಬಾನಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಇಬ್ಬರೂ ವ್ಯಕ್ತಿಗಳು ಮತ್ತಿಬ್ಬರಿಗೆ ಚಾಕು ಇರಿದು ಕೊಲೆ ಮಾಡಿದ ಪ್ರಕರಣದಲ್ಲಿ ಸಿಲುಕಿದ್ದರು. ಇಬ್ಬರೂ ಪ್ರತ್ಯೇಕ ಪ್ರಕರಣಗಳಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದರು. ಕೊಲೆ ಪ್ರಕರಣದಲ್ಲಿ ಅಫಘಾನಿಸ್ತಾನದ ಸುಪ್ರೀಂ ಕೋರ್ಟ್‌ ಡೆತ್‌ ವಾರೆಂಟ್‌ ಹೊರಡಿಸಿತ್ತು. ಇಬ್ಬರನ್ನೂ ಗುಂಡಿಕ್ಕಿ ಸಾಯಿಸಿ ಎಂದು ಆದೇಶಿಸಿತ್ತು. ಅದರಂತೆ, ತಾಲಿಬಾನ್‌ ಉಗ್ರರು ಘಜ್ನಿ ನಗರದಲ್ಲಿರುವ ಫುಟ್ಬಾಲ್‌ ಸ್ಟೇಡಿಯಂನಲ್ಲಿ ಇಬ್ಬರನ್ನೂ ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಸಾವಿರಾರು ಜನರ ಎದುರೇ ಗುಂಡಿನ ದಾಳಿ ಮೂಲಕ ಹತ್ಯೆ ಮಾಡಿದ್ದಾರೆ.

ಇಬ್ಬರನ್ನೂ ಸಾರ್ವಜನಿಕವಾಗಿ ಹತ್ಯೆಗೈಯುವ ಕುರಿತು ತಾಲಿಬಾನ್‌ ಸುಪ್ರೀಂ ಲೀಡರ್‌ ಹಿಬಾತುಲ್ಲಾಹ್‌ ಅಖುಂಡ್‌ಜಾದಾ ಎಂಬಾತನು ಆದೇಶ ಹೊರಡಿಸಿದ್ದ. ಇದೇ ಆದೇಶವನ್ನು ಸುಪ್ರೀಂ ಕೋರ್ಟ್‌ ಅನುಮೋದಿಸಿತ್ತು. ಅದರಂತೆ ಉಗ್ರರು ಇಬ್ಬರು ವ್ಯಕ್ತಿಗಳನ್ನು ದಾರುಣವಾಗಿ ಹತ್ಯೆಗೈದಿದ್ದಾರೆ. ಇಬ್ಬರೂ ವ್ಯಕ್ತಿಗಳ ಕುಟುಂಬಸ್ಥರು ಕೂಡ ಸ್ಟೇಡಿಯಂಗೆ ಆಗಮಿಸಿದ್ದರು. ಕೊನೆಯ ಕ್ಷಣದವರೆಗೂ, ಇಬ್ಬರನ್ನೂ ಬಿಟ್ಟು ಬಿಡಿ, ಅವರನ್ನು ಕ್ಷಮಿಸಿ ಎಂದು ಗೋಗರೆದರು. ಆದರೆ, ತಾಲಿಬಾನಿಗಳು ಇದಾವುದಕ್ಕೂ ಕಿವಿಗೊಡದೆ ಹತ್ಯೆ ಮಾಡಿದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Viral News: ʻತಾಲಿಬಾನ್‌ ಜೋಕ್‌ʼ ಮಾಡಿದ ಬ್ರಿಟಿಷ್-‌ ಭಾರತೀಯ ವಿದ್ಯಾರ್ಥಿಯ ವಿಚಾರಣೆ, ಭಾರಿ ದಂಡ

ಸಣ್ಣ ಪುಟ್ಟ ಪ್ರಕರಣಗಳಲ್ಲೂ ಜನರನ್ನು ಸಾರ್ವಜನಿಕವಾಗಿ ಹತ್ಯೆ ಮಾಡುವುದು, ಕ್ರೂರವಾಗಿ ದಂಡಿಸುವುದು ತಾಲಿಬಾನ್‌ ಆಡಳಿತದ ಭಾಗವೇ ಆಗಿದೆ. 2021ರ ಆಗಸ್ಟ್‌ನಲ್ಲೂ ಸಾವಿರಾರು ಜನರ ಎದುರೇ ನಾಲ್ವರನ್ನು ತಾಲಿಬಾನಿಗಳು ಕೊಂದಿದ್ದರು. ಅಲ್ಲದೆ, ಮಹಿಳೆಯರು ಸೇರಿ 350 ಜನರನ್ನು ಭೀಕರವಾಗಿ ದಂಡಿಸಿದ್ದರು. 2021ರಿಂದಲೂ ಅಫಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ಆಡಳಿತವಿದ್ದು, ಮಹಿಳೆಯರ ಹಕ್ಕುಗಳನ್ನು ಸಂಪೂರ್ಣವಾಗಿ ದಮನ ಮಾಡಿದ್ದಾರೆ. ಅವರು ಕಾಲೇಜಿಗೆ ಹೋಗುವುದನ್ನು ತಡೆದಿದ್ದಾರೆ. ಯುವಕರ ಜತೆ ತಿರುಗಾಡಿದರೂ ಹಿಂಸಿಸುತ್ತಿದ್ದಾರೆ. ಇದನ್ನು ವಿಶ್ವಸಂಸ್ಥೆ ಖಂಡಿಸಿದೆ. ಆದರೂ, ತಾಲಿಬಾನಿಗಳು ಅಂತಾರಾಷ್ಟ್ರೀಯ ಕಾನೂನುಗಳಿಗೆ ಗೌರವ ಕೊಡುತ್ತಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version