ಕಲಿಯುಗದಲ್ಲೂ ಕೆಲವೊಮ್ಮೆ ಪವಾಡವೇ ನಡೆಯುತ್ತದೆ. ಅಂಥ ಘಟನೆಯ ಬಗ್ಗೆ ಕೇಳಿದಾಗೆಲ್ಲ ನಾವು ಹುಬ್ಬೇರಿಸಿದ್ದಿದೆ. ಈಗ ಅಂಥದ್ದೇ ಒಂದು ಪವಾಡ ಸದೃಶ ಘಟನೆ ಕೆನಡಾದ ನೈಋತ್ಯ ಒಂಟಾರಿಯೊದಲ್ಲಿರುವ ಪೆಟ್ರೋಲಿಯಾದಿಂದ ವರದಿಯಾಗಿದೆ. 20 ತಿಂಗಳ ಮಗುವೊಂದರ ಹೃದಯ ಬಡಿತ ಮೂರು ತಾಸು ನಿಂತೇ ಹೋಗಿತ್ತು, ಇನ್ನೇನು ಆ ಮಗು ಕೈತಪ್ಪಿತು ಎಂದುಕೊಂಡು ಪಾಲಕರು, ಕುಟುಂಬವೆಲ್ಲ ನೋವಲ್ಲಿ ಒದ್ದಾಡುತ್ತಿರುವಾಗಲೇ ಆ ಪುಟ್ಟ ಜೀವ ಮತ್ತೆ ಕಣ್ಣುಬಿಟ್ಟಿದೆ. ಇದು ವೈದ್ಯರ ತಂಡವೇ ಮಾಡಿದ ಪವಾಡ !
ವೇಲಾನ್ ಸೌಂಡರ್ಸ್ ಎಂಬ 20 ತಿಂಗಳ ಹುಡುಗ ಡೇ ಕೇರ್ನ ಸ್ವಿಮ್ಮಿಂಗ್ ಪೂಲ್ಗೆ ಬಿದ್ದಿದ್ದ. ಹೀಗೆ ಬಿದ್ದವನು ಸುಮಾರು 5 ನಿಮಿಷಗಳ ಕಾಲ ಅಲ್ಲಿಯೇ ಇದ್ದ. ಅತಿಯಾದ ಚಳಿಯಿಂದ ಅವನು ಎಚ್ಚರ ತಪ್ಪಿದ್ದ. ಮೈಯೊಳಗೆ ನೀರು ಸೇರಿಹೋಗಿತ್ತು. ಬಳಿಕ ಮಗುವನ್ನು ಅಲ್ಲಿಂದ ತೆಗೆದು, ಷಾರ್ಲೆಟ್ ಎಲೀನರ್ ಎಂಗಲ್ಹಾರ್ಟ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಗುವಿನ ಸ್ಥಿತಿ ಗಂಭೀರವಾಗಿತ್ತು. ಹೃದಯ ಬಡಿತ ನಿಂತು ಹೋಗಿತ್ತು. ಪೆಟ್ರಾಲಿಯಾದಲ್ಲಿರುವ ಈ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು ಯಾರೂ ಇರಲಿಲ್ಲ. ಹಾಗೇ, ಚಿಕಿತ್ಸೆಗೆ ಅಗತ್ಯವಿರುವ ಕೆಲವು ಸಾಮಗ್ರಿಗಳ ಕೊರತೆಯೂ ಇತ್ತು. ಮುದ್ದಾದ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡುತ್ತಿದ್ದಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ದಾದಿಯರು, ಲ್ಯಾಬ್ ಸಿಬ್ಬಂದಿ ಎಲ್ಲರೂ ತಮ್ಮತಮ್ಮ ಕೆಲಸ ನಿಲ್ಲಿಸಿ ಮಗುವಿನ ಚಿಕಿತ್ಸೆಯಲ್ಲಿ ತೊಡಗಿಕೊಂಡರು. ಪುಟ್ಟ ಮಗುವಿಗೆ ಉಸಿರು ಕೊಡುವ ಕಾಯಕದಲ್ಲಿ ಸಹಕರಿಸಲು ಪ್ರಾರಂಭಿಸಿದರು. ಸುಮಾರು 3 ತಾಸು ಪರ್ಯಾಯವಾಗಿ ಮಗುವಿಗೆ ಸಿಪಿಆರ್ (cardiopulmonary resuscitation) ಚಿಕಿತ್ಸೆ ನೀಡಿದರು. ಪರಿಣಾಮವಾಗಿ ಮಗುವಿನ ಹೃದಯ ಮತ್ತೆ ಬಡಿಯಲು ಶುರುವಾಯಿತು. ಮತ್ತೊಂದು ಮುಖ್ಯವಿಷಯವೆಂದರೆ, ಲಂಡನ್ನ ವೈದ್ಯರ ತಂಡವೊಂದು ಫೋನ್ನಲ್ಲಿ ಇವರಿಗೆ ಚಿಕಿತ್ಸೆ ಕುರಿತು ಮಾರ್ಗದರ್ಶನ ನೀಡುತ್ತಿತ್ತು.
ಇದನ್ನೂ ಓದಿ: 3 ವರ್ಷದಿಂದ ಮನೆಯೊಳಗೇ ಲಾಕ್ ಆಗಿದ್ದ ಮಹಿಳೆ ಮತ್ತು ಅವಳ ಮಗ; ಪತಿಯ ಗೋಳು ನೋಡಲಾಗದೆ ಬಾಗಿಲು ಒಡೆದ ಪೊಲೀಸ್
ವೇಲಾನ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾನೆ. ಆತನ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಪಾಲಕರು ತಾವೂ ಮನೆಯಲ್ಲೇ ಇದ್ದು ವೇಲಾನ್ ಜತೆ ಕಾಲಕಳೆಯುತ್ತಿದ್ದಾರೆ. ವೇಲಾನ್ ಮತ್ತೆ ಬದುಕಿದ್ದು ಪವಾಡದಂತೆ ಭಾಸವಾಗುತ್ತಿದೆ ಎಂದು ಚಿಕಿತ್ಸೆ ಕೊಟ್ಟ ವೈದ್ಯ ಡಾ. ಟಿಜ್ಸೆನ್ ಕೂಡ ಹೇಳಿದ್ದಾರೆ. ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದೆವು. ಅದ್ಭುತ ಪ್ರಯತ್ನಕ್ಕೆ, ಅಷ್ಟೇ ಅದ್ಭುತ ಫಲಿತಾಂಶ ಸಿಕ್ಕಿತು ಎಂದು ಹೇಳಿದ್ದಾರೆ.