ಜೆರುಸಲೇಂ: ಅಕ್ಟೋಬರ್ 7ರಂದು ಹಮಾಸ್ ಉಗ್ರರು ದಾಳಿ ಮಾಡಿದ ಬಳಿಕ ಯುದ್ಧ (Israel Palestine War) ಘೋಷಿಸಿದ ಇಸ್ರೇಲ್ ಇದುವರೆಗೆ ಹಿಂದಡಿ ಇಟ್ಟಿಲ್ಲ. ಪ್ಯಾಲೆಸ್ತೀನ್‌ನ ಗಾಜಾ ನಗರದಲ್ಲಿ ಬೀಡು ಬಿಟ್ಟಿರುವ ಹಮಾಸ್ ಉಗ್ರರು (Hamas Terrorists) ಮನವಿ ಮಾಡುವಷ್ಟರಮಟ್ಟಿಗೆ ಇಸ್ರೇಲ್ ನಿರಂತರವಾಗಿ ದಾಳಿ ಮಾಡಿದೆ. ಕೆಲ ದಿನಗಳ ಕದನ ವಿರಾಮ, ಒತ್ತೆಯಾಳುಗಳ ಬಿಡುಗಡೆ ಬಳಿಕ ಈಗ ಮತ್ತೆ ಗಾಜಾ ನಗರದ ಮೇಲೆ ಇಸ್ರೇಲ್ ಬಾಂಬ್ ದಾಳಿ ಮಾಡಿ 175 ಜನರನ್ನು ಕೊಂದಿದೆ. ಇದರ ಬೆನ್ನಲ್ಲೇ, ಹಮಾಸ್ ಉಗ್ರರನ್ನು ನಿರ್ನಾಮ ಮಾಡಲು ಇಸ್ರೇಲ್ ಹೊಸ ಯೋಜನೆ ರೂಪಿಸಿದೆ.
ಹೌದು, ಗಾಜಾ ನಗರದ ಮೇಲೆ ನಡೆಯುತ್ತಿರುವ ದಾಳಿ ಮುಗಿದ ಬಳಿಕ, ಯುದ್ಧ ನಿಲ್ಲಿಸಿದ ನಂತರ ಜಗತ್ತಿನ ಯಾವ ಮೂಲೆಯಲ್ಲಿ ಇದ್ದರೂ ಹಮಾಸ್ ಉಗ್ರರನ್ನು ಸದೆಬಡಿಯಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಹಮಾಸ್ ಉಗ್ರರ ಜತೆಗಿನ ಕಾಳಗ ಮುಗಿಯುತ್ತಲೇ ಇಸ್ರೇಲ್ ಮತ್ತೊಂದು ಕಾರ್ಯಾಚರಣೆ ಆರಂಭಿಸುವುದು ನಿಶ್ಚಿತ ಎಂಬ ಮಾತುಗಳು ಕೇಳಿಬರುತ್ತಿವೆ.
“ಹಮಾಸ್ ಉಗ್ರರ ಜತೆಗಿನ ಯುದ್ಧ ಮುಗಿದ ಬಳಿಕ ಹಮಾಸ್ ಮುಖಂಡರನ್ನು, ಉಗ್ರರನ್ನು ಹತ್ಯೆಗೈಯಲು ಗುಪ್ತಚರ ಸಂಸ್ಥೆಯಾದ ಮೊಸಾದ್ ಯೋಜನೆ ರೂಪಿಸಬೇಕು. ಇದಕ್ಕೂ ಮೊದಲು ಶತ್ರುಗಳ ದಮನಕ್ಕೆ ಇಸ್ರೇಲ್ ಕೈಗೊಂಡಿದ್ದ ಆಪರೇಷನ್ ವ್ರ್ಯಾತ್ ಆಫ್ ಗಾಡ್‌ನಂತಹ (Operation Wrath of God) ಕಾರ್ಯಾಚರಣೆ ಕೈಗೊಳ್ಳಬೇಕು. ಉಗ್ರರನ್ನು ಹುಡುಕಬೇಕು, ಕೊಲೆ ಮಾಡಬೇಕು ಎಂಬುದಷ್ಟೇ ಕಾರ್ಯಾಚರಣೆಯ ಗುರಿಯಾಗಿರಬೇಕು” ಎಂಬುದಾಗಿ ಮೊಸಾದ್ ಅಧಿಕಾರಿಗಳಿಗೆ ಬೆಂಜಮಿನ್ ನೆತನ್ಯಾಹು ಆದೇಶಿಸಿದ್ದಾರೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.
ಹಿಟ್ ಲಿಸ್ಟ್‌ನಲ್ಲಿ ಯಾರಿದ್ದಾರೆ?
ಜಗತ್ತಿನ ಯಾವ ಮೂಲೆಯಲ್ಲಿಯೇ ಹಮಾಸ್ ಹಿರಿಯ ಉಗ್ರರು ಇರಲಿ, ಅವರನ್ನು ಹತ್ಯೆಗೈಯಬೇಕು ಎಂಬುದು ನೆತನ್ಯಾಹು ಆದೇಶವಾಗಿದೆ ಎಂದು ಮೊಸಾದ್ ಮಾಜಿ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಗಾಗಿ ಒಂದು ಹಿಟ್ ಲಿಸ್ಟ್‌ಅನ್ನೂ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ. ಪ್ಯಾಲೆಸ್ತೀನ್ ಮಾಜಿ ಪ್ರಧಾನಿ, ಈಗ ಹಮಾಸ್ ರಾಜಕೀಯ ಮುಖಸ್ಥನಾಗಿರುವ ಇಸ್ಮಾಯಿಲ್ ಹನಿಯೇಹ್, ಹಮಾಸ್ ಮಿಲಿಟರಿ ವಿಭಾಗದ ಮುಖ್ಯಸ್ಥ ಮೊಹಮ್ಮದ್ ಡೈಫ್, ಗಾಜಾ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಸೇರಿ ಹಲವು ಪ್ರಮುಖರನ್ನು ಹಿಟ್‌ಲಿಸ್ಟ್‌ನಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Israel Palestine War: 5 ಒತ್ತೆಯಾಳುಗಳ ಸಾವು; ಕದನ ವಿರಾಮ ಅಂತ್ಯ, ಮತ್ತೆ ಹಮಾಸ್ ಮೇಲೆ ಇಸ್ರೇಲ್ ಬಾಂಬ್ ಮಳೆ
ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ. ಅದರಲ್ಲೂ, ಹಮಾಸ್ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 11 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಹಮಾಸ್ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ