Site icon Vistara News

ಸಹಾಯಕ್ಕಾಗಿ ಮೊರೆ ಇಡುತ್ತಿದ್ದವರ ಬಳಿ ತೆರಳಲು ಪರದಾಡಿದೆವು; ನೇಪಾಳ ಬಸ್‌ ದುರಂತದ ಪ್ರತ್ಯಕ್ಷದರ್ಶಿಯ ಭಯಾನಕ ಅನುಭವ

Tragic Bus Crash

ಕಠ್ಮಂಡು: ನೇಪಾಳದಲ್ಲಿ ಶುಕ್ರವಾರ ಭಾರತದ ಪ್ರಯಾಣಿಕರನ್ನೊಳಗೊಂಡ ಬಸ್‌ ನದಿಗೆ ಉರುಳಿ ಬಿದ್ದಿದ್ದು, ಈ ಅವಘಡದಲ್ಲಿ ಮೃತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಬಸ್‌ನಲ್ಲಿದ್ದ 43 ಪ್ರಯಾಣಿಕರ ಪೈಕಿ ಬಹುತೇಕರು ಭಾರತದವರು. ನೇಪಾಳದ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಬಸ್‌ ಉರುಳಿ ಈ ದುರಂತ ಸಂಭವಿಸಿದೆ. ಇದೀಗ ಪ್ರತ್ಯಕ್ಷದರ್ಶಿಯೊಬ್ಬರು ಈ ಮೈ ನಡುಗಿಸುವ ಅನುಭವವನ್ನು ವಿವರಿಸಿದ್ದಾರೆ (Tragic Bus Crash).

“ಘಟನೆ ನಡೆದ 5ರಿಂದ 7 ನಿಮಿಷಗಳಲ್ಲಿ ನಾವು ಅಲ್ಲಿಗೆ ತಲುಪಿದೆವು. ಅಲ್ಲಿನ ದೃಶ್ಯ ನಿಜಕ್ಕೂ ಭಯಾನಕವಾಗಿತ್ತು” ಎಂದು ಪ್ರತ್ಯಕ್ಷದರ್ಶಿ, ಉದ್ಯಮಿ ಅರ್ಜುನ್ ಖನಾಲ್ ಕಠ್ಮಂಡು ಪೋಸ್ಟ್‌ಗೆ ತಿಳಿಸಿದ್ದಾರೆ. “ಬಸ್ ರಸ್ತೆಯಿಂದ ಸುಮಾರು 150 ಮೀಟರ್ ಕೆಳಗಡೆ ಹರಿಯುತ್ತಿರುವ ನದಿಗೆ ಬಿದ್ದಿತ್ತು. ಪ್ರಯಾಣಿಕರು ಸಹಾಯಕ್ಕಾಗಿ ಮೊರೆ ಇಡುತ್ತಿದ್ದರು. ಗಾಯಗೊಂಡ ಮೂವರು ಬಸ್ ಕಿಟಕಿಗಳ ಮೂಲಕ ಹೊರಗೆ ಹಾರಲು ಯತ್ನಿಸುತ್ತಿದ್ದರು. ಸಹಾಯಕ್ಕಾಗಿ ಮೊರೆ ಇಡುತ್ತಿರುವ ಜನರ ಬಳಿಗೆ ತೆರಳುವುದು ತುಂಬ ಕಷ್ಟವಾಗಿತ್ತುʼʼ ಎಂದು ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ನರೇಂದ್ರ ಮೋದಿ ಸಂತಾಪ

ಘಟನೆಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ವಿದೇಶ ಪ್ರವಾಸದಲ್ಲಿರುವ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ”ನೇಪಾಳದ ತನಾಹುನ್ ಜಿಲ್ಲೆಯಲ್ಲಿ ನಡೆದ ಬಸ್‌ ದುರಂತದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಭಾರತೀಯ ರಾಯಭಾರ ಕಚೇರಿ ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡಲು ಬದ್ಧವಾಗಿದೆʼʼ ಎಂದು ತಿಳಿಸಿದ್ದಾರೆ.

ನೇಪಾಳದ ಪ್ರಧಾನಿ ಕೆ.ಪಿ.ಶರ್ಮ ಒಲಿ (KP Sharma Oli) ಅವರೂ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. “ತನಾಹುನ್‌ನ ಅಬು ಖೈರೇನಿಯಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಪೋಖರಾದಿಂದ ಕಠ್ಮಂಡುವಿಗೆ ಪ್ರಯಾಣಿಸುತ್ತಿದ್ದ ಭಾರತೀಯ ನಾಗರಿಕರು ಮೃತಪಟ್ಟಿದ್ದಾರೆ. ಅವರಿಗೆ ಸಂತಾಪ ಸಲ್ಲಿಸುತ್ತಿದ್ದೇನೆ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಉತ್ತರ ಪ್ರದೇಶದ ನಂಬರ್‌ ಪ್ಲೇಟ್‌ ಹೊಂದಿರುವ ಈ ಬಸ್‌ನ ಅಪಘಾತಕ್ಕೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.

ವರದಿಯೊಂದರ ಪ್ರಕಾರ ಈ ಬಸ್‌ನಲ್ಲಿದ್ದ ಬಹುತೇಕ ಭಾರತೀಯರು ಮಹಾರಾಷ್ಟ್ರ ಮೂಲದವರು. ಸುಮಾರು 104 ಮಂದಿಯನ್ನು ಒಳಗೊಂಡ ಪ್ರಯಾಣಿಕರು 3 ಬಸ್‌ಗಳಲ್ಲಿ ನೇಪಾಳ ಪ್ರವಾಸ ಕೈಗೊಂಡಿದ್ದರು. ಮೃತರು ಮುಂಬೈನಿಂದ 470 ಕಿ.ಮೀ. ದೂರದಲ್ಲಿರುವ ಜಲ್ಗಾಂವ್ ಜಿಲ್ಲೆಯ ವರಗಾಂವ್, ದರಿಯಾಪುರ್, ತಲ್ವೇಲ್ ಮತ್ತು ಭೂಸಾವಲ್ ಮೂಲದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ನೇಪಾಳ: ನದಿಗೆ ಉರುಳಿದ ಭಾರತೀಯರು ಸೇರಿ 40 ಮಂದಿ ಪ್ರಯಾಣಿಸುತ್ತಿದ್ದ ಬಸ್‌; 14 ಮಂದಿ ಸಾವು?

ಮಹಾರಾಷ್ಟ್ರ ಸಚಿವರು ಹೇಳಿದ್ದೇನು?

ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಶುಕ್ರವಾರ ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ. ʼʼನೇಪಾಳದಲ್ಲಿ ನದಿಗೆ ಬಸ್‌ ಬಿದ್ದು 41 ಜನರು ಮೃತಪಟ್ಟಿದ್ದಾರೆ. ನಾವು ದೆಹಲಿಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇವೆ. 12 ಜನರನ್ನು ನೇಪಾಳ ಸೇನೆಯು ಆಸ್ಪತ್ರೆಗೆ ಸ್ಥಳಾಂತರಿಸಿದೆʼʼ ಎಂದು ತಿಳಿಸಿದ್ದಾರೆ. ಬಸ್ ನೇಪಾಳದ ಪೋಖಾರಾದಿಂದ ಕಠ್ಮಂಡುವಿಗೆ ಹೋಗುತ್ತಿದ್ದ ವೇಳೆ ಅವಘಡ ಸಂಭವಿಸಿತ್ತು.

Exit mobile version