ಯುನೈಟೆಡ್ ನೇಶನ್ಸ್ನ ಆಗ್ನೇಯ ರಾಜ್ಯ ವರ್ಜೀನಿಯಾದಲ್ಲಿನ ಡೊಮಿನಿಯನ್ ಎನರ್ಜಿ ವಿದ್ಯುತ್ ಉತ್ಪಾದನಾ ಕಂಪನಿಯ 1 ಲಕ್ಷ ಗ್ರಾಹಕರು ಬುಧವಾರ ಬೆಳಗ್ಗೆ ವಿದ್ಯುತ್ ಇಲ್ಲದೆ ಪರದಾಡಿದ್ದಾರೆ. ಅಲ್ಲಿನ ಕಾಲಮಾನದ ಪ್ರಕಾರ ಬುಧವಾರ ಬೆಳಗ್ಗೆ 8.45ರ ಹೊತ್ತಿಗೆ ಎರಡು ಶಾಲೆ ಸೇರಿ ಲಕ್ಷಗಟ್ಟಲೆ ಮನೆ/ಕಚೇರಿಗಳು ಮತ್ತಿತರ ಕಟ್ಟಡಗಳಲ್ಲಿ ವಿದ್ಯುತ್ ಇಲ್ಲದಂತಾಗಿತ್ತು. ಆದರೆ ಹೀಗಾಗಲು ಕಾರಣ ಒಂದು ‘ಅಳಿಲು’ !
ಅಳಿಲೊಂದು ಮಾಡಿದ ಕಿತಾಪತಿಯಿಂದ ಊರಿಗೆ ಊರೇ ಕತ್ತಲಲ್ಲಿ ಇರುವಂತಾಗಿತ್ತು. ಟ್ರಾನ್ಸ್ಫಾರ್ಮರ್ ಬಳಿಯೇ ಅತ್ತಿತ್ತ ಹಾರುತ್ತಿದ್ದ ಅಳಿಲೊಂದು ಸರ್ಕ್ಯೂಟ್ ಬ್ರೇಕರ್ ಮತ್ತು ಟ್ರಾನ್ಸ್ಫಾರ್ಮರ್ ನಡುವೆ ಸಿಲುಕಿಕೊಂಡಿತ್ತು. ಹೀಗಾಗಿ ಒಮ್ಮೆಲೇ ಹೈವೋಲ್ಟೇಜ್ನಲ್ಲಿ ವಿದ್ಯುತ್ ಪ್ರವಹಿಸಿ ಟ್ರಾನ್ಸ್ಫಾರ್ಮರ್ ಹಾಳಾಗಿದೆ. ಇದೇ ಕಾರಣಕ್ಕೆ ಅಲ್ಲಿಂದ ಸಂಪರ್ಕ ಹೊಂದಿದ್ದ ಮನೆ/ಶಾಲೆ/ಕಚೇರಿಗಳಿಗೆಲ್ಲ ವಿದ್ಯುತ್ ಇಲ್ಲದಂತಾಗಿತ್ತು. ಈ ಬಗ್ಗೆ ನಂತರ ಡೊಮಿನಿಯನ್ ಎನರ್ಜಿ ಕಂಪನಿಯ ವಕ್ತಾರೆ ಬೊನಿಟಾ ಬಿಲ್ಲಿಂಗ್ಸ್ಲೆ ಹ್ಯಾರಿಸ್ ಮಾಹಿತಿ ನೀಡಿದ್ದಾರೆ.
ಅಳಿಲಿನಿಂದಾಗಿ ನಮ್ಮ ಕಂಪನಿಯ ಲಕ್ಷಕ್ಕೂ ಹೆಚ್ಚು ಗ್ರಾಹಕರು ಕಷ್ಟಪಡುವಂತಾಯಿತು. ಸಬ್ಸ್ಟೇಷನ್ಗೆ ಪ್ರವೇಶಿಸಿದ ಅಳಿಲಿನಿಂದ ಆದ ಎಡವಟ್ಟನ್ನು ಸರಿಪಡಿಸಿ, ವಿದ್ಯುತ್ ಪೂರೈಕೆ ಮಾಡಲು ಒಂದೂವರೆ ತಾಸು ಬೇಕಾಯಿತು. ಆದರೆ ಅಲ್ಲಿಯವರೆಗೆ ನಮ್ಮ ಗ್ರಾಹಕರಿಗೆ ಕರೆಂಟ್ ಇಲ್ಲದಂತೆ ಮಾಡಿಲ್ಲ. ಪರ್ಯಾಯ ಸರ್ಕ್ಯೂಟ್ ಮೂಲಕ ವಿದ್ಯುತ್ ಪೂರೈಸಲಾಗಿದೆ ಎಂದೂ ಹ್ಯಾರಿಸ್ ತಿಳಿಸಿದ್ದಾರೆ. ‘ನಮ್ಮ ಕಂಪನಿಯ ಬಹುತೇಕ ಎಲ್ಲ ಸಬ್ಸ್ಟೇಶನ್ಗಳಲ್ಲೂ ಗಾರ್ಡ್ಗಳನ್ನು ಅಳವಡಿಸಲಾಗಿದೆ. ಇವು ಪ್ರಾಣಿಗಳನ್ನೂ ವಿದ್ಯುತ್ ಶಾಕ್ನಿಂದ ತಡೆಯುತ್ತವೆ ಮತ್ತು ಸಬ್ಸ್ಟೇಶನ್ಗಳನ್ನೂ ಕಾಪಾಡುತ್ತವೆ’ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: ಎಸ್‌ಸಿ, ಎಸ್‌ಟಿ ಕುಟುಂಬಗಳ ಉಚಿತ ವಿದ್ಯುತ್ ಯೋಜನೆ ಹಿಂಪಡೆದಿಲ್ಲ: ಇಂಧನ ಇಲಾಖೆ ಸ್ಪಷ್ಟನೆ