Site icon Vistara News

Singapore Airlines: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ: ಇಲ್ಲಿದೆ ನೋಡಿ ಭೀಕರತೆಯನ್ನು ಸಾರುವ ಫೋಟೊಗಳು

Turbulence

Turbulence

ಲಂಡನ್‌: ಬ್ರಿಟನ್‌ ರಾಜಧಾನಿ ಲಂಡನ್‌ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಕ್ಷುಬ್ಧತೆ (Turbulence) ಉಂಟಾಗಿ ಒಬ್ಬರು ಮೃತಪಟ್ಟು 30 ಜನ ಗಾಯಗೊಂಡಿರುವ ಘಟನೆ ಮಂಗಳವಾರ (ಮೇ 21) ನಡೆದಿದೆ. ಬಳಿಕ ಈ ಸಿಂಗಾಪುರ ಏರ್‌ಲೈನ್ಸ್‌ (Singapore Airlines) ವಿಮಾನವನ್ನು ಬ್ಯಾಂಕಾಕ್‌ನ ಸುವರ್ಣಭೂಮಿ ಏರ್‌ಪೋರ್ಟ್‌ನಲ್ಲಿ ತುರ್ತು ಲ್ಯಾಂಡ್‌ ಮಾಡಲಾಯಿತು. ಕೂಡಲೇ ವೈದ್ಯರು ಧಾವಿಸಿ ಪ್ರಯಾಣಿಕರಿಗೆ ಅಗತ್ಯ ನೆರವು ನೀಡಿದ್ದಾರೆ. ಸದ್ಯ ವಿಮಾನದೊಳಗಿನ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಘಟನೆಯ ಭೀಕರತೆಗೆ ಸಾಕ್ಷಿಯಾಗಿವೆ.

ವಿಮಾನವು ಹಾರಾಟ ನಡೆಸುವಾಗ ಹವಾಮಾನ ವೈಪರೀತ್ಯದಿಂದಾಗಿ ಗಾಳಿಯ ಒತ್ತಡದಲ್ಲಿ ದಿಢೀರನೆ ಏರುಪೇರಾಗುತ್ತದೆ. ಇದರ ತೀವ್ರತೆಗೆ ವಿಮಾನವು ಹಾರಾಟ ನಡೆಸುವಾಗಲೇ ಏಕಾಏಕಿ ಅಲುಗಾಡುತ್ತದೆ. ಹೀಗೆ ದಿಢೀರನೆ ಅಲುಗಾಡುವುದನ್ನೇ ಟರ್ಬುಲೆನ್ಸ್‌ ಅಥವಾ ಪ್ರಕ್ಷುಬ್ಧತೆ ಎಂದು ಕರೆಯುತ್ತಾರೆ. ಸಣ್ಣಪುಟ್ಟ ಪ್ರಕ್ಷುಬ್ಧತೆ ಉಂಟಾದರೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ತೀವ್ರ ಪ್ರಮಾಣದಲ್ಲಿ ಉಂಟಾದರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಲಗೇಜ್‌ಗಳು ಪ್ರಯಾಣಿಕರ ಮೈಮೇಲೆ ಬೀಳುತ್ತವೆ. ಮಂಗಳವಾರ ತೀವ್ರತರವಾದ ಟರ್ಬುಲೆನ್ಸ್‌ಗೆ ಒಳಗಾದ ಸಿಂಗಾಪುರ ಏರ್‌ಲೈನ್ಸ್‌ನಲ್ಲಿನ ಪರಿಸ್ಥಿತಿ ಭೀಕರವಾಗಿತ್ತು.

ಇಲ್ಲಿದೆ ಆ ಭೀಕರ ಫೋಟೊಗಳು

ಗಾಳಿಯಲ್ಲಿ ನೇತಾಡುತ್ತಿರುವ ಬಾಕ್ಸ್‌: ಹೌದು, ವಿಮಾನ ಏಕಾಏಕಿ ಅಲುಗಾಡಿದ ಕಾರಣ ಮೇಲೆ ಪೇರಿಸಿಟ್ಟಿದ್ದ ಬಾಕ್ಸ್‌ಗಳ ಪೈಕಿ ಕೆಲವು ಉರುಳಿ ಬಿದ್ದರೆ ಇನ್ನು ಕೆಲವು ನೇತಾಡುತ್ತಿದ್ದವು.

ಬಿರುಕುಬಿಟ್ಟ ಓವರ್‌ಹೆಡ್‌ ಬಿನ್‌: ಇನ್ನು ಓವರ್‌ಹೆಡ್‌ ಬಿನ್‌ನಲ್ಲಿ ಬಿರುಕು ಬಿಟ್ಟು, ತುಂಡಾದ ವೈರ್‌, ಮಾಸ್ಕ್‌ ಇತ್ಯಾದಿ ಪ್ರಯಾಣಿಕರ ತಲೆ ಮೇಲೆ ಜೋತು ಬಿದ್ದಿದ್ದವು.

ಚೆಲ್ಲಾಪಿಲ್ಲಿಯಾಗಿ ಬಿದ್ದ ಸಾಮಾಗ್ರಿಗಳು: ನೀರಿನ ಬಾಟಲಿ, ಕಾಫಿ ಮಗ್‌, ಮದ್ಯದ ಗ್ಲಾಸ್‌ ಸೇರಿದಂತೆ ಆಹಾರ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯ ಘಟನೆಯ ಗಂಭೀರತೆಯನ್ನು ಸಾರಿ ಹೇಳುವಂತಿತ್ತು.

ಛಾವಣಿ ತುಂಡು: ಅಲುಗಾಟದ ತೀವ್ರತೆಗೆ ವಿಮಾನದ ಛಾವಣಿಯ ಭಾಗ ತುಂಡಾಗಿ ಬಿದ್ದು, ಒಳಗಿನ ಪಾರ್ಟ್‌ಗಳೆಲ್ಲ ಕಾಣಿಸಿಕೊಂಡಿದ್ದವು.

ಗಾಯಗೊಂಡ ಪ್ರಯಾಣಿಕರು: ಮುಖ, ಕೈಗಳಿಗೆ ಗಾಯಗಳಾಗಿ, ಭಯಭೀತರಾಗಿ ಕುಳಿತಿರುವ ಪ್ರಯಾಣಿಕರ ಫೋಟೊ ಕೂಡ ವೈರಲ್‌ ಅಗಿದೆ.

ಇದನ್ನೂ ಓದಿ: Emirates Flight: ವಿಮಾನ ಡಿಕ್ಕಿ ಹೊಡೆದು 36 ಫ್ಲೆಮಿಂಗೊ ಪಕ್ಷಿಗಳಿಗೆ ದಾರುಣ ಅಂತ್ಯ

ಅನುಭವ ಹಂಚಿಕೊಂಡ ಪ್ರಯಾಣಿಕರು

ಇನ್ನು ಈ ವಿಮಾನದಲ್ಲಿದ್ದ ಪ್ರಯಾಣಿಕರು ತಮ್ಮ ಅನುಭವವನ್ನು ಸುದ್ದಿ ಸಂಸ್ಥೆ ರಾಯಿಟರ್ಸ್‌ ಜತೆ ಹಂಚಿಕೊಂಡಿದ್ದಾರೆ. ʼʼಇದ್ದಕ್ಕಿದ್ದಂತೆ ನಾವಿದ್ದ ವಿಮಾನ ಅಲುಗಾಡಲು ಆರಂಭಿಸಿತು. ಯಾರಿಗೆ ಏನಾಗುತ್ತದೆ ಎನ್ನುವುದೇ ತೋಚದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸೀಟ್ ಬೆಲ್ಟ್ ಧರಿಸದವರು ಬಿದ್ದು ಬಿಟ್ಟರು. ಕೆಲವರ ತಲೆ ಬ್ಯಾಗೇಜ್ ಕ್ಯಾಬಿನ್ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಹಲವರು ಗಾಯಗೊಂಡರುʼʼ ಎಂದು ತಿಳಿಸಿದ್ದಾರೆ.

ಇನ್ನೊಬ್ಬರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. “ನಾನು ಸಾಧ್ಯವಾದಷ್ಟು ಇತರರಿಗೆ ಸಹಾಯ ಮಾಡಿದೆ. ನಾನು ಸೇರಿದಂತೆ ಗಾಯಗೊಂಡಿಲ್ಲದವರು ಬ್ಯಾಂಕಾಕ್ ವಿಮಾನ ನಿಲ್ದಾಣದ ಹೋಲ್ಡಿಂಗ್ ಪ್ರದೇಶದಲ್ಲಿದ್ದೇವೆ. ಇದೊಂದು ಮರೆಯಲಾರದ ಭಯಾನಕ ಅನುಭವ. ಬ್ಯಾಂಕಾಕ್‌ನ ತುರ್ತು ಸೇವೆ ತ್ವರಿತವಾಗಿ ಸ್ಪಂದಿಸಿ ಅಗತ್ಯ ನೆರವು ನೀಡಿದೆʼʼ ಎಂದು ಅವರು ಹೇಳಿದ್ದಾರೆ.

Exit mobile version