ಅಂಕಾರ: ಎರಡು ಪ್ರಬಲ ಭೂಕಂಪಗಳ ಪರಿಣಾಮ ದಕ್ಷಿಣ ಟರ್ಕಿ ಮತ್ತು ನೆರೆಯ ಸಿರಿಯಾ ದೇಶಗಳಲ್ಲಿ ವಿನಾಶ ತಾಂಡವವಾಡಿದೆ. ದುರಂತದ ಪ್ರಮಾಣ ಈಗಷ್ಟೇ ಸ್ಪಷ್ಟವಾಗುತ್ತಿದ್ದು, ಸಾವಿನ ಸಂಖ್ಯೆ 7,200ನ್ನೂ ಮೀರಿಸಿದೆ. ಅವಶೇಷಗಳ ನಡುವಿನಿಂದ ಬದುಕುಳಿದಿರಬಹುದಾದವರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಹೆಣಗಾಡುತ್ತಿದ್ದಾರೆ.
ಅತಿ ಶೀತದ ಪ್ರತಿಕೂಲ ಹವಾಮಾನದ ನಡುವೆ, ಕುಸಿದ ಕಟ್ಟಡಗಳ ಅವಶೇಷಗಳಡಿ ಸಿಲುಕಿದವರನ್ನು ಹೊರತೆಗೆಯಲು ಕಷ್ಟವಾಗುತ್ತಿದೆ. 7.8 ತೀವ್ರತೆಯ ಭೂಕಂಪದ ನಂತರ 7,200ಕ್ಕೂ ಹೆಚ್ಚು ಜನರು ಸಾವನ್ನಪ್ಪಿ ಸಾವಿರಾರು ಜನರು ಗಾಯಗೊಂಡಿದ್ದಾರೆ. ಆಸ್ಪತ್ರೆಗಳು, ಶಾಲೆಗಳು ಮತ್ತು ಅಪಾರ್ಟ್ಮೆಂಟ್ ಬ್ಲಾಕ್‌ಗಳು ಕುಸಿದಿವೆ. ಮನೆ ಕಳೆದುಕೊಂಡವರು ತೀವ್ರ ಚಳಿಯಿಂದಾಗಿ ಭಯಾನಕ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೆಲವು ಪ್ರದೇಶಗಳಲ್ಲಿ ವಿದ್ಯುಚ್ಛಕ್ತಿ, ನೀರು ಸೌಲಭ್ಯ ಕತ್ತರಿಸಿಹೋಗಿದೆ. ಬದುಕುಳಿದವರು ತಮ್ಮ ಬಂಧುಗಳಿಗಾಗಿ ಅವಶೇಷಗಳ ನಡುವೆ ಹುಡುಕಾಡುತ್ತಿರುವ ಕರುಳು ಹಿಂಡುವ ದೃಶ್ಯವನ್ನು ಹೆಚ್ಚಿನ ಕಡೆ ಕಾಣಬಹುದಾಗಿದೆ.
ಈಗಾಗಲೇ ಮಾನವ ಹಕ್ಕುಗಳ ಉಲ್ಲಂಘನೆಯನ್ನು ವ್ಯಾಪಕವಾಗಿ ಕಂಡಿರುವ ಸಿರಿಯಾದಲ್ಲಿ ಪರಿಸ್ಥಿತಿ ಇನ್ನಷ್ಟು ದಾರುಣವಾಗಿದೆ. ಅಲ್ಲಿನ ನಿರಾಶ್ರಿತರನ್ನು ಕೇಳುವವರೇ ಇಲ್ಲದಂತಾಗಿದೆ. ಗ್ರೀಸ್, ಜರ್ಮನಿ, ಬ್ರಿಟನ್, ಜಪಾನ್ ಮುಂತಾದ ದೇಶಗಳು ಎರಡೂ ದೇಶಗಳ ರಕ್ಷಣಾ ಕಾರ್ಯಾಚರಣೆಗಳಿಗೆ ನೆರವಾಗಿವೆ. ಎರಡೂ ದೇಶಗಳಲ್ಲಿ ಸಾವಿರಾರು ಮಕ್ಕಳು ಈ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಟರ್ಕಿಯ ಅಧ್ಯಕ್ಷ ಎರ್ದೋಗನ್ ಅವರು ಮೂರು ತಿಂಗಳ ಕಾಲದ ಎಮರ್ಜೆನ್ಸಿಯನ್ನು ಘೋಷಿಸಿದ್ದಾರೆ. ಮೂರು ತಿಂಗಳಲ್ಲಿ ಅವರು ರಾಷ್ಟ್ರೀಯ ಚುನಾವಣೆಯನ್ನು ಎದುರಿಸಬೇಕಾಗಿತ್ತು.
ಇದನ್ನೂ ಓದಿ: ವಿಸ್ತಾರ Explainer: Turkey Earthquake: ಯಾಕಿಷ್ಟು ಭಯಾನಕ? ನಮ್ಮಲ್ಲೂ ಇಂಥ ಭೂಕಂಪ ಆಗಬಹುದೇ?