Site icon Vistara News

Turkey Earthquake: 4000 ತಲುಪಿದ ಸಾವಿನ ಸಂಖ್ಯೆ, ಭಾರತದಿಂದ ನೆರವು ತಂಡ

Turkey Earthquake

ಅಂಕಾರ: ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭಯಾನಕ ಭೂಕಂಪದಲ್ಲಿ (Turkey Earthquake) ಮೃತಪಟ್ಟವರ ಸಂಖ್ಯೆ ಇದುವರೆಗೆ 4000ವನ್ನೂ ಮೀರಿದೆ.

ಟರ್ಕಿ ಮತ್ತು ನೆರೆದೇಶ ವಾಯುವ್ಯ ಸಿರಿಯಾದಲ್ಲಿ ಸಾವಿನ ಸಂಖ್ಯೆ 4,000ಕ್ಕಿಂತ ಹೆಚ್ಚಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಸೋಮವಾರದ ಮುಂಜಾನೆ 7.8 ತೀವ್ರತೆಯ ಭೂಕಂಪ ಎರಡೂ ದೇಶಗಳಲ್ಲಿ ಸಂಭವಿಸಿತ್ತು. ಭೂಕಂಪದ ತೀವ್ರತೆಗೆ ನೂರಾರು ಅಪಾರ್‌ಮೆಂಟ್‌ಗಳು ಉರುಳಿವೆ. ಆಸ್ಪತ್ರೆಗಳನ್ನು ಧ್ವಂಸಗೊಂಡಿವೆ. ಸಾವಿರಾರು ಜನ ಗಾಯಗೊಂಡಿದ್ದಾರೆ ಹಾಗೂ ನಿರಾಶ್ರಿತರಾಗಿದ್ದಾರೆ.

ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಆದರೆ ತೀವ್ರ ಚಳಿಗಾಲದ ಹವಾಮಾನ ರಾತ್ರಿಯ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ರಾತ್ರಿ ಶೂನ್ಯ ತಾಪಮಾನ ಇದ್ದುದರಿಂದ ಅವಶೇಷಗಳಡಿಯಲ್ಲಿ ಸಿಲುಕಿರುವ ಅಥವಾ ನಿರಾಶ್ರಿತರಾದ ಜನರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

2021ರ ಆಗಸ್ಟ್‌ನಲ್ಲಿ ದೂರದ ದಕ್ಷಿಣ ಅಟ್ಲಾಂಟಿಕ್‌ನಲ್ಲಿ ನಡೆದ ಭೂಕಂಪನದ ನಂತರ ವಿಶ್ವದಾದ್ಯಂತ ದಾಖಲಾಗಿರುವ ಭೂಕಂಪಗಳಲ್ಲೆಲ್ಲ ಇದು ದಾರುಣವಾಗಿದೆ.

ಭಾರತದ ನೆರವು

ವಿಶ್ವಸಂಸ್ಥೆ ಹಾಗೂ ಹಲವು ದೇಶಗಳ ರಕ್ಷಣಾ ಹಾಗೂ ಪರಿಹಾರ ನೆರವು ಟರ್ಕಿ ಹಾಗೂ ಸಿರಿಯಾದತ್ತ ಧಾವಿಸುತ್ತಿದ್ದು, ಭಾರತದ ಮೊದಲ ರಕ್ಷಣಾ ತಂಡ ಅಲ್ಲಿಗೆ ಹೊರಟಿದೆ. ಎನ್‌ಡಿಆರ್‌ಎಫ್ ಶೋಧ ಮತ್ತು ಸುರಕ್ಷತಾ ದಳಗಳು, ವಿಶೇಷ ತರಬೇತಿ ಪಡೆದ ಶ್ವಾನದಳಗಳು, ವೈದ್ಯಕೀಯ ಸಾಮಗ್ರಿಗಳು, ಡ್ರಿಲ್ಲಿಂಗ್ ಮಷಿನ್‌ಗಳು ಮತ್ತು ಇತರ ಅಗತ್ಯ ಉಪಕರಣಗಳನ್ನು ಒಳಗೊಂಡ ಭಾರತದ ಮೊದಲ ಬ್ಯಾಚ್ ಮಂಗಳವಾರ ಮುಂಜಾನೆ ಟರ್ಕಿಗೆ ಹೊರಟಿದೆ.

ಇದನ್ನೂ ಓದಿ: Turkey Earthquake: ಟರ್ಕಿಯಲ್ಲಿ 24 ಗಂಟೆಯೊಳಗೆ 3ನೇ ಪ್ರಬಲ ಭೂಕಂಪ, 2,400 ದಾಟಿದ ಸಾವಿನ ಸಂಖ್ಯೆ

Exit mobile version