ಟರ್ಕಿ ಮತ್ತು ನೆರೆರಾಷ್ಟ್ರ ಸಿರಿಯಾದ ವಾಯುವ್ಯ ಭಾಗದಲ್ಲಿ ಭೂಮಿ ಭಯಾನಕವಾಗಿ ಕಂಪಿಸಿದ ಪರಿಣಾಮ 4000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸೋಮವಾರ ಮುಂಜಾನೆ, ಸಂಜೆ ಮತ್ತು ರಾತ್ರಿ ಮೂರು ಬಾರಿಯೂ ಪ್ರಬಲ ಭೂಕಂಪವೇ ಆಗಿದೆ. ಟರ್ಕಿ-ಸಿರಿಯಾಗಳಲ್ಲಿ ಮನೆ/ಬಹುಮಹಡಿ ಕಟ್ಟಡಗಳೆಲ್ಲ ಹಾಗಾಗೇ ಕುಸಿದು ಬೀಳುತ್ತಿವೆ. ನೋಡನೋಡುತ್ತಿದ್ದಂತೆ ಮರಗಳು/ವಿದ್ಯುತ್ ಕಂಬಗಳು ಧರೆಗೆ ಉರುಳುತ್ತಿವೆ. ಹೀಗೆ ಕುಸಿದು ಬೀಳುವ ಬಹುಮಹಡಿ ಕಟ್ಟಡಗಳು, ಅಂಗಡಿಗಳು, ಮನೆಗಳಡಿ ಸಿಲುಕಿ ಮಾನವರು ನಲುಗಿ ಜೀವ ಬಿಡುತ್ತಿದ್ದಾರೆ. ಕಂಪಿಸಿ ಬಾಯ್ಬಿಟ್ಟ ಭೂಮಿ ಅಕ್ಷರಶಃ ಟರ್ಕಿ/ಸಿರಿಯಾದ ಹಲವು ಭಾಗಗಳನ್ನು ನುಂಗಿ ಹಾಕಿದೆ. ಈ ದಾರುಣ ಭೂಕಂಪದ ಹಲವು ಭಯಾನಕ ವಿಡಿಯೊಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
ಸ್ಯಾನ್ಲಿಯುರ್ಫಾ ನಗರದಲ್ಲಿ ಅಪಾರ್ಟ್ಮೆಂಟ್ವೊಂದು ನೋಡನೋಡುತ್ತಿದ್ದಂತೆ ಸಂಪೂರ್ಣವಾಗಿ ಕುಸಿದು, ಕ್ಷಣ ಮಾತ್ರದಲ್ಲಿ ಧ್ವಂಸಗೊಂಡಿದೆ. ಕಟ್ಟಡ ಬಿದ್ದ ಪರಿಣಾಮ ಆ ಪ್ರದೇಶವೆಲ್ಲ ಧೂಳುಮಯವಾಗಿತ್ತು. ಒಂದಷ್ಟು ಜನರು ಕೂಗುವುದನ್ನು ವಿಡಿಯೊದಲ್ಲಿ ಕೇಳಬಹುದು. ಟರ್ಕಿಯ ಕಹ್ರಮನ್ಮಾರಾಸ್ನಲ್ಲಿ ಕೂಡ ಹಲವು ಕಟ್ಟಡಗಳು ಕುಸಿದು ಬಿದ್ದ ದೃಶ್ಯವನ್ನು ನೋಡಬಹುದು. ಗಾಜಿಯಾಂಟೆಪ್ ನಗರದ ಸಮೀಪದ ಅಂಗಡಿಯೊಂದರ ಬಳಿ ಹಾಕಿದ್ದ ಸಿಸಿಟಿವಿಯಲ್ಲಿ ಕೂಡ ಪ್ರಬಲ ಭೂಕಂಪದ ಪರಿಣಾಮದ ದೃಶ್ಯ ಸೆರೆಯಾಗಿದೆ. ಇಲ್ಲಿವೆ ನೋಡಿ ಕೆಲವು ದೃಶ್ಯಾವಳಿಗಳು..