ಟರ್ಕಿ-ಸಿರಿಯಾ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 24 ಸಾವಿರಕ್ಕೆ ಏರಿಕೆಯಾಗಿದೆ. ಸೋಮವಾರ (ಫೆ.6) ಟರ್ಕಿ ಮತ್ತು ಸಿರಿಯಾದಲ್ಲಿ 24ಗಂಟೆಯಲ್ಲಿ ಮೂರು ಬಾರಿ ಭೂಮಿ ಕಂಪಿಸಿತ್ತು (Turkey Earthquake). ದೊಡ್ಡದೊಡ್ಡ ಅಪಾರ್ಟ್ಮೆಂಟ್ಗಳು ಕುಸಿದಿವೆ. ಭೂಮಿ ಬಾಯ್ಬಿಟ್ಟಿದೆ. ಕುಸಿದ ಮನೆಗಳ ಅವಶೇಷಗಳಡಿ ಸಿಲುಕಿದ ಜನರು ಅಲ್ಲಲ್ಲೇ ಪ್ರಾಣಬಿಡುತ್ತಿದ್ದಾರೆ. ಇಷ್ಟರ ಮಧ್ಯೆ ಕೆಲವರು ಜೀವ ಹಿಡಿದುಕೊಂಡು ಅಲ್ಲೇ ಮಲಗಿದ್ದಾರೆ. ಅಂಥವರನ್ನು ರಕ್ಷಿಸುವ ಕಾರ್ಯಾಚರಣೆಯೂ ಭರದಿಂದ ಸಾಗುತ್ತಿದೆ. ಟರ್ಕಿ-ಸಿರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಭಾರತದಿಂದಲೂ ರಕ್ಷಣಾ ತಂಡಗಳು ತೆರಳಿವೆ. ಈಗೀಗ ಟರ್ಕಿ-ಸಿರಿಯಾದ ಭೂಕಂಪದ ಭೀಕರತೆ ಮತ್ತಷ್ಟು ಗೋಚರವಾಗುತ್ತಿದೆ. ಎಲ್ಲಿ ನೋಡಿದರೂ ಶವ ಕೊಳೆತ ವಾಸನೆ. ಕಲ್ಲುಮಣ್ಣುಗಳಡಿ ಸಿಕ್ಕಿ, ಅಲ್ಲಿಯೇ ಉಸಿರು ಚೆಲ್ಲಿರುವವರ ಮೃತದೇಹಗಳು ಕೊಳೆಯಲು ಪ್ರಾರಂಭಿಸಿದೆ.
ಟರ್ಕಿ-ಸಿರಿಯಾ ಭೂಕಂಪದ ಕರಾಳತೆ ತೋರಿಸುವ ಹಲವು ಫೋಟೋ-ವಿಡಿಯೊಗಳು, ಸುದ್ದಿಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಕಳೆದ ನಾಲ್ಕು ದಿನಗಳಿಂದ ಅವಶೇಷಗಳಡಿಯಲ್ಲೇ ಸಿಲುಕಿದ್ದ 17 ವರ್ಷದ ಹುಡುಗನೊಬ್ಬನನ್ನು ಈಗ ಹೊರತೆಗೆದು ರಕ್ಷಿಸಲಾಗಿದೆ. ಈ ಹುಡುಗ ನಾಲ್ಕು ದಿನ ಹೇಗಿದ್ದ ಎಂಬುದನ್ನು ಕೇಳಿದರೆ, ನಿಜಕ್ಕೂ ಮನಸಿಗೆ ಖೇದ ಅನ್ನಿಸುತ್ತದೆ. ಹೊರಗೆ ಬಂದ ಬಳಿಕ ಮಾತನಾಡಿದ ಅವನು ‘ನಾನು ಈ ನಾಲ್ಕೂ ದಿನ ಜೀವ ಹಿಡಿದಿಟ್ಟುಕೊಳ್ಳುವ ಸಲುವಾಗಿ, ನನ್ನ ಮೂತ್ರವನ್ನೇ ನಾನು ಕುಡಿಯುತ್ತಿದ್ದೆ’ ಎಂದು ತಿಳಿಸಿದ್ದಾನೆ.
ಈ ಯುವಕನ ಹೆಸರು ಅದ್ನಾನ್ ಮುಹಮ್ಮಟ್ ಕೋರ್ಕುಟ್. ಸೋಮವಾರ ರಾತ್ರಿ ತನ್ನ ಮನೆಯಲ್ಲಿ ಮಲಗಿದ್ದ. ಭೂಮಿ ನಡುಗಿ, ಮನೆಯೆಲ್ಲ ಕುಸಿದು ಬಿದ್ದಾಗ ಅವನಿಗೆ ಎಚ್ಚರವಾಯಿತು. ಆದರೆ ಅವನು ಸಿಮೆಂಟ್-ಕಲ್ಲು, ಮಣ್ಣುಗಳಡಿ ಸಿಲುಕಿದ್ದ. ಥೇಟ್ ಗರ್ಭದಲ್ಲಿ ಮಗು ಯಾವ ಸ್ಥಿತಿಯಲ್ಲಿ ಮಲಗಿರುತ್ತದೆಯೋ, ಅದೆ ಸ್ಥಿತಿಯಲ್ಲೇ ಮಲಗಿದ್ದ. ಅದೃಷ್ಟಕ್ಕೆ ಅವನ ಮೊಬೈಲ್ಗೆ ಹಾನಿಯಾಗಿರಲಿಲ್ಲ. ಎರಡು ದಿನಗಳ ಕಾಲ ಅದರಲ್ಲಿ ಅವನು ಪ್ರತಿ 25ನಿಮಿಷಕ್ಕೆ ಒಮ್ಮೆ ಅಲಾರಾಂ ಬೆಲ್ ಆಗುವಂತೆ ಮಾಡಿಕೊಂಡಿದ್ದ. ತಾನು ಸಂಪೂರ್ಣ ನಿದ್ದೆಗೆ ಜಾರಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿದ್ದ. ಆದರೆ ಮೂರನೇ ದಿನಕ್ಕೆ ಮೊಬೈಲ್ ಬ್ಯಾಟರಿ ಖಾಲಿ ಆಗಿ ಅದೂ ಕೂಡ ಆಫ್ ಆಯಿತು. 94 ತಾಸು ಹೀಗೆ ಇದ್ದವನನ್ನು ಈಗ ರಕ್ಷಣಾ ಪಡೆಗಳು ಹೊರಗೆ ಕರೆತಂದಿವೆ. ಸದ್ಯ ಅವನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.