ಫೆಬ್ರವರಿ 6ರಂದು ಟರ್ಕಿ ಮತ್ತು ಸಿರಿಯಾದಲ್ಲಿ ಫೆ.6ರಂದು ಕಂಪಿಸಿದ ಭೂಮಿ, ದೊಡ್ಡ ಅವಘಡವನ್ನೇ ಸೃಷ್ಟಿಸಿದೆ. ಎಲ್ಲೆಲ್ಲಿ ನೋಡಿದರೂ ಚೂರುಚೂರಾಗಿ ಬಿದ್ದ ಕಟ್ಟಡಗಳು, ಅದರಡಿ ಸಿಲುಕಿ ಒದ್ದಾಡುತ್ತಿರುವ ಮಾನವರು..ಅಲ್ಲೇ ಜೀವ ಬಿಟ್ಟ ಮತ್ತೊಂದಷ್ಟು ಜನರು. ಸದ್ಯ ಟರ್ಕಿ-ಸಿರಿಯಾ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 21 ಸಾವಿರಕ್ಕೆ ತಲುಪಿದೆ. ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ಅಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಭಾರತದಿಂದಲೂ ರಕ್ಷಣಾ ಪಡೆಗಳ ಸಿಬ್ಬಂದಿ ಧಾವಿಸಿದ್ದಾರೆ. ಟರ್ಕಿ-ಸಿರಿಯಾದಲ್ಲಿ ಭಾರತದ ಸೇನಾ ಸಿಬ್ಬಂದಿ ನಡೆಸುತ್ತಿರುವ ರಕ್ಷಣಾ ಕಾರ್ಯಕ್ಕೆ ‘ಆಪರೇಶನ್ ದೋಸ್ತ್’ ಎಂದು ಹೆಸರಿಡಲಾಗಿದೆ.
ಸಿರಿಯಾ-ಟರ್ಕಿಗೆ ಎನ್‌ಡಿಆರ್‌ಎಫ್ ಶೋಧ ಮತ್ತು ಸುರಕ್ಷತಾ ದಳಗಳು, ವಿಶೇಷ ತರಬೇತಿ ಪಡೆದ ಶ್ವಾನದಳಗಳು ಹೋಗಿವೆ. ವೈದ್ಯಕೀಯ ಸಾಮಗ್ರಿಗಳು, ಡ್ರಿಲ್ಲಿಂಗ್ ಮಷಿನ್‌ಗಳು ಮತ್ತು ಇತರ ಅಗತ್ಯ ಉಪಕರಣಗಳನ್ನು ಕೂಡ ಕಳಿಸಲಾಗಿದೆ. ಮಹಿಳೆಯರನ್ನೂ ಒಳಗೊಂಡ ತಂಡ ಅಲ್ಲಿಗೆ ಹೋಗಿದೆ. ಟರ್ಕಿ-ಸಿರಿಯಾದಲ್ಲಿ ಭಾರತದ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಕೂಡ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಮಧ್ಯೆ ಭಾರತೀಯ ಸೇನೆ ಟ್ವಿಟರ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ. ಅದೆಷ್ಟು ಭಾವನಾತ್ಮಕವಾಗಿ, ಮುದ್ದಾಗಿದೆ ಫೋಟೋ ಎಂಬುದನ್ನು ನೀವೇ ನೋಡಬೇಕು. ರಕ್ಷಣಾ ಕಾರ್ಯಾಚರಣೆಗೆ ಟರ್ಕಿಗೆ ತೆರಳಿ, ಅಲ್ಲಿ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರನ್ನು ಹೊರಗೆತ್ತಿ ರಕ್ಷಿಸುತ್ತಿರುವ ಭಾರತೀಯ ರಕ್ಷಣಾ ತಂಡದ ಮಹಿಳಾ ಅಧಿಕಾರಿಯೊಬ್ಬರಿಗೆ ಟರ್ಕಿಶ್ ಮಹಿಳೆಯೊಬ್ಬರು ಕೆನ್ನೆಗೆ ಮುತ್ತಿಡುತ್ತಿರುವ ಫೋಟೋ ಇದು. ಈ ಪಟ ಶೇರ್ ಮಾಡಿಕೊಂಡಿರುವ ಇಂಡಿಯನ್ ಆರ್ಮಿ ‘We Care (ನಾವು ಕಾಳಜಿ ಮಾಡುತ್ತೇವೆ)’ ಎಂದು ಕ್ಯಾಪ್ಷನ್ ಬರೆದಿದೆ. ಟರ್ಕಿ-ಸಿರಿಯಾದ ಪ್ರಾಕೃತಿಕ ವಿಕೋಪ ಮನುಷ್ಯ ಸಂಬಂಧಗಳ ಬೆಲೆಯನ್ನು ತೋರಿಸುತ್ತಿದೆ.