Site icon Vistara News

Marburg virus: ಮಾರಕ ಸೋಂಕು ಘಾನಾದಲ್ಲಿ ಪತ್ತೆ, ಇಬ್ಬರ ಮರಣ, ಎಬೊಲಾ ಥರದ ಮಾರಿ ಎಂದ WHO

Resurgence of Marburg virus, 9 deaths in West Africa

ತೀವ್ರ ಸಾಂಕ್ರಾಮಿಕ ರೋಗವಾದ ಮಾರ್‌ಬರ್ಗ್‌ ವೈರಸ್‌ನ ಎರಡು ಪ್ರಕರಣಗಳು ಆಫ್ರಿಕ ಖಂಡದ ಘಾನಾ ದೇಶದಲ್ಲಿ ಪತ್ತೆಯಾಗಿವೆ. ಇದು ಎಬೊಲಾದಂಥ ಸಾಂಕ್ರಾಮಿಕವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಖಚಿತಪಡಿಸಿದೆ. ʻʻಇದು ಎಬೊಲಾದಂತೆಯೇ ತೀವ್ರ ಸಾಂಕ್ರಾಮಿಕʼʼ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

26 ವರ್ಷದ ಯುವಕನಿಗೆ ಮೊದಲ ಮಾರ್‌ಬರ್ಗ್‌ ವೈರಸ್‌ ಆಕ್ರಮಿಸಿದ್ದು, ಜೂನ್‌ 26ರಂದು ಆಸ್ಪತ್ರೆಗೆ ದಾಖಲಾಗಿದ್ದ ಈತ ಒಂದು ದಿನದ ಬಳಿಕ ಮೃತಪಟ್ಟಿದ್ದ. ಎರಡನೇ ಪ್ರಕರಣ 51 ವರ್ಷದ ಗಂಡಸು, ಹಾಗೂ ಈತನೂ ದಾಖಲಾದ ದಿನವೇ ಮೃತಪಟ್ಟಿದ್ದಾನೆ.

ಪಶ್ಚಿಮ ಆಪ್ರಿಕದಲ್ಲಿ ಈ ಸೋಂಕುರೋಗ ಇದೇ ಎರಡನೇ ಬಾರಿಗೆ ಪತ್ತೆಯಾಗುತ್ತಿದೆ. ಇದನ್ನು ಮಾರ್‌ಬರ್ಗ್‌ ಮೆದುಳುಜ್ವರ ಎಂದೂ ಕರೆಯಲಾಗುತ್ತದೆ. ವಿಶ್ವಸಂಸ್ಥೆಯ ಪ್ರಕಾರ ಇದು ಮಾರಕ ಸೋಂಕು. ಎಬೊಲಾದಂತೆಯೇ ಇದರ ಲಕ್ಷಣಗಳಿದ್ದು, ಪತ್ತೆ ಹಚ್ಚುವ ರೀತಿ ಹಾಗೂ ಚಿಕಿತ್ಸೆಯೂ ಬಹುತೇಕ ಒಂದೇ ಬಗೆಯಲ್ಲಿವೆ.

ರೌಸೆಟ್ಟಸ್‌ (Rousettus) ಹಣ್ಣಿನ ಬಾವಲಿಯಲ್ಲಿ ಈ ವೈರಸ್‌ಗಳು ಇರುತ್ತವೆ. ಉಗಾಂಡದಿಂದ ತರಲಾದ ಆಫ್ರಿಕನ್‌ ಗ್ರೀನ್‌ ಮಂಗಗಳು ಮೊದಲ ಬಾರಿಗೆ ಈ ವೈರಸ್ಸನ್ನು ಮನುಷ್ಯನಿಗೆ ದಾಟಿಸಿದ್ದವು. ಮೊದಲ ಬಾರಿಗೆ ಇದು 1967ರಲ್ಲಿ ಪತ್ತೆಯಾಗಿತ್ತು. ಇದೇ ಸಮಯದಲ್ಲಿ ಈ ವೈರಸ್‌ ಜರ್ಮನಿ, ಸೆರ್ಬಿಯಾದಲ್ಲೂ ಕಂಡುಬಂದಿತ್ತು. ಈ ಸೋಂಕಿನ ಮರಣ ದರ 50% ಆಗಿದೆ.

ಲಕ್ಷಣಗಳೇನು?

ತೀವ್ರ ಜ್ವರ, ಸ್ನಾಯು ನೋವು, ತೀವ್ರ ತಲೆನೋವು, ಉಲ್ಬಣಿಸಿದ ಹಂತದಲ್ಲಿ ಹೊಟ್ಟೆ ನೋವು, ವಾಂತಿ, ತೀವ್ರ ಭೇದಿ, ಇತ್ಯಾದಿ ಕಾಣಿಸಿಕೊಳ್ಳುತ್ತವೆ. ಉಲ್ಬಣಿಸಿದ ಹಂತದಲ್ಲಿ ರೋಗಿಯು ಆಳಕ್ಕಿಳಿದ ಕಂಗಳು, ನಿರ್ಭಾವ ಮುಖ, ಸುಸ್ತು ಮುಂತಾದವುಗಳ ಮೂಲಕ ʼಅಸ್ಥಿಪಂಜರದಂತೆ ಕಾಣಿಸಿಕೊಳ್ಳುತ್ತಾನೆʼ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಸೋಂಕಿನ 5-7 ದಿನಗಳಲ್ಲಿ ಮೂಗಿನಿಂದ ರಕ್ತಸ್ರಾವ, ವಾಂತಿ- ಮಲದಲ್ಲಿ ರಕ್ತ, ತೀವ್ರ ರಕ್ತಸ್ರಾವ ಕಾಣಿಸಿಕೊಳ್ಳಬಹುದು. ಚಿಕಿತ್ಸೆ ಸಿಗದಿದ್ದರೆ 8-9 ದಿನಗಳಲ್ಲಿ ಮರಣ ಸಂಭವಿಸುತ್ತದೆ.‌

ಇದನ್ನೂ ಓದಿ: Monkeypox: ಕೇರಳದಲ್ಲಿ ಪತ್ತೆಯಾಯ್ತು ಮತ್ತೊಂದು ಮಂಕಿಪಾಕ್ಸ್‌ ಪ್ರಕರಣ; ದೇಶದಲ್ಲಿದು 2ನೇ ಕೇಸ್‌

ಮಲೇರಿಯಾ, ಟೈಫಾಯಿಡ್‌, ಇತರ ಮೆದುಳುಜ್ವರಗಳಿಂದ ಇದನ್ನು ಪ್ರತ್ಯೇಕಿಸುವುದು ಕಷ್ಟಸಾಧ್ಯವಾದರೂ, ಲ್ಯಾಬ್‌ ಪರೀಕ್ಷೆಯ ಮೂಲಕ ಇದನ್ನು ಖಚಿತಪಡಿಸಿ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕೆ ಇದುವರೆಗೂ ಯಾವುದೇ ಪ್ರತ್ಯೇಕ ಅಂಗೀಕೃತ ಚಿಕಿತ್ಸೆಯಾಗಲೀ, ವ್ಯಾಕ್ಸೀನ್‌ ಆಗಲೀ ಇಲ್ಲ. ಚೆನ್ನಾಗಿ ನೀರು ಕುಡಿಯುವುದು, ನಿರ್ದಿಷ್ಟ ರೋಗಲಕ್ಷಣಗಳ ಶೀಘ್ರ ಚಿಕಿತ್ಸೆಯ ಮೂಲಕ ಇದನ್ನು ತಡೆಗಟ್ಟಬೇಕು.

ತಡೆಗಟ್ಟುವುದು ಹೇಗೆ?

ಎಬೊಲಾದಂತೆಯೇ ರೋಗಿಯ ನಿಕಟ ಸಂಪರ್ಕದಿಂದ ಈ ಸೋಂಕು ಹರಡುತ್ತದೆ. ಕೊರೊನಾ ತಡೆಗಟ್ಟಲು ಅನುಸರಿಸಿದ ಕ್ರಮಗಳನ್ನೇ ಇದಕ್ಕೂ ಅನುಸರಿಸಬೇಕು. ರೋಗಿಯಿಂದ ಅಂತರ ಕಾಪಾಡಿಕೊಳ್ಳುವುದು, ಕೈಗಳ ಸ್ವಚ್ಛತೆ, ಸ್ಯಾನಿಟೈಸರ್‌ ಬಳಕೆ ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: ದಶಕದ ನಂತರ ದೇಶದಲ್ಲಿ ಪೋಲಿಯೋ ವೈರಸ್‌ ಪತ್ತೆ : ಕೋಲ್ಕತ್ತಾದಲ್ಲಿ ಹೈ ಅಲರ್ಟ್

Exit mobile version