ಲಂಡನ್: ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ(UK Election) ರಂಗೇರಿದ್ದು, ಬಹುತೇಕ ಫಲಿತಾಂಶ ಸ್ಪಷ್ಟವಾಗಿದೆ. ಈ ಬಾರಿ ಕನ್ಸರ್ವೇಟಿವ್ ಪಕ್ಷದ ರಿಷಿ ಸುನಕ್(Rishi Sunak)ಗೆ ಭಾರೀ ಹಿನ್ನಡೆ ಅನುಭವಿಸಿದ್ದು, ಕೀರ್ ಸ್ಟಾರ್ಮರ್(Keir Starmer) ಅವರ ಲೇಬರ್ ಪಕ್ಷ(Labour Party) ಭರ್ಜರಿ ಗೆಲುವು ಸಾಧಿಸುವುದು ಖಚಿತವಾಗಿದೆ. ಕೀರ್ ಸ್ಟಾರ್ಮರ್ ಇಂಗ್ಲೆಂಡ್‌ನ ಪ್ರಧಾನಿಯಾಗುವುದು ಬಹುತೇಕ ಸ್ಪಷ್ಟವಾಗಿದೆ. ಹಾಗಿದ್ದರೆ ಯಾರು ಈ ಕೀರ್ ಸ್ಟಾರ್ಮರ್? ಭಾರತದ ಬಗೆಗೆ ಅವರಿಗಿರುವ ನಿಲುವೇನು ಎಂಬ ಬಗ್ಗೆ ಇಲ್ಲಿ ಮಾಹಿತಿ.
ಯಾರು ಈ ಕೀರ್ ಸ್ಟಾರ್ಮರ್?
1963 ರಲ್ಲಿ ಸರ್ರೆಯಲ್ಲಿ ಕಾರ್ಮಿಕ-ವರ್ಗದ ಕುಟುಂಬದಲ್ಲಿ ಜನಿಸಿದ ಸ್ಟಾರ್ಮರ್ ಬಾಲ್ಯದಿಂದಲೇ ಕಷ್ಟವನ್ನು ಕಂಡವರು. ತಂದೆಯ ಜೊತೆ ಹೆಚ್ಚು ಒಡನಾಟ ಹೊಂದಿರದ ಸ್ಟಾರ್ಮರ್, ತಾಯಿ ಮೇಲೆ ಅತೀವ ಪ್ರೀತಿ ಹೊಂದಿದ್ದರು. ನರ್ಸ್ ಆಗಿದ್ದ ಅವರ ತಾಯಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಸ್ಟಾರ್ಮರ್ ಅವರ ಫಸ್ಟ್ ನೇಮ್ ʼಕೀರ್ʼ ಎಂಬುದು ಲೇಬರ್ ಪಕ್ಷದ ಸಂಸ್ಥಾಪಕ ಕೀರ್ ಹಾರ್ಡಿ ಅವರದ್ದು. ಅವರ ಮೇಲಿನ ಅತೀವ ಗೌರವದಿಂದ ಸ್ಟಾರ್ಮರ್ ತಮ್ಮ ಹೆಸರಿನ ಮುಂದೆ ಕೀರ್ ಎಂದು ಬಳಸಲು ಶುರು ಮಾಡಿದ್ದರು.
ಹಿರಿಯ ಎಡಪಂಥೀಯ ವ್ಯಕ್ತಿ ಜೆರೆಮಿ ಕಾರ್ಬಿನ್ ನೇತೃತ್ವದಲ್ಲಿ 2019 ರಲ್ಲಿ 84 ವರ್ಷಗಳಲ್ಲಿ ಅದರ ಚುನಾವಣಾ ಸೋಲಿನ ನಂತರ ಕೀರ್ ಸ್ಟಾರ್ಮರ್ 2020 ರಲ್ಲಿ ಲೇಬರ್ ಪಕ್ಷದ ಉಸ್ತುವಾರಿ ವಹಿಸಿಕೊಂಡರು. ನಂತರ ಅವರು ಲೇಬರ್ ಪಾರ್ಟಿಯನ್ನು ಪ್ರಾಥಮಿಕವಾಗಿ ಸಿದ್ಧಾಂತದಿಂದ ಪ್ರೇರೇಪಿಸುವುದಕ್ಕಿಂತ ಹೆಚ್ಚಾಗಿ ಸಾಮರ್ಥ್ಯ ಮತ್ತು ವಾಸ್ತವಿಕತೆಗೆ ಹೆಸರುವಾಸಿಯಾದ ಪಕ್ಷವಾಗಿ ರೂಪಿಸಲು ಗಮನಹರಿಸಿದರು. ಮಾಜಿ ಮಾನವ ಹಕ್ಕುಗಳ ಹೋರಾಟಗಾರ, ಬ್ರಿಟನ್‌ನ ಉನ್ನತ ಪ್ರಾಸಿಕ್ಯೂಟರ್ ಆಗಿದ್ದ ಸ್ಟಾರ್ಮರ್ 2015 ರಲ್ಲಿ ಸಂಸತ್ತಿಗೆ ಪ್ರವೇಶಿಸಿದ್ದು, ಬ್ರೆಕ್ಸಿಟ್‌ನಲ್ಲಿ ಕಾರ್ಬಿನ್ ಅವರ ವಕ್ತಾರರಾಗಿ ಸೇವೆ ಸಲ್ಲಿಸಿದ್ದಾರೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ನೀರಸ ಪ್ರದರ್ಶನದ ನಂತರ ಲೇಬರ್ ಪಾರ್ಟಿಯ ಅದೃಷ್ಟವನ್ನು ಹಿಮ್ಮೆಟ್ಟಿಸಿದ ಕೀರ್ತಿ ಕೀರ್ ಸ್ಟಾರ್ಮರ್ ಅವರಿಗೆ ಸಲ್ಲುತ್ತದೆ.
ಭಾರತದ ಬಗ್ಗೆ ಸ್ಟಾರ್ಮರ್ ನಿಲುವೇನು?
ಜಾಗತಿಕ ಭದ್ರತೆ, ಹವಾಮಾನ ಭದ್ರತೆ ಮತ್ತು ಆರ್ಥಿಕ ಭದ್ರತೆಗೆ ಸಂಬಂಧಿಸಿದಂತೆ ಭಾರತದೊಂದಿಗೆ ಉತ್ತಮ ಬಾಂದವ್ಯ ಹೊಂದುವ ಬಗ್ಗೆ ಸ್ಟಾರ್ಮರ್ ತಮ್ಮ ಭಾಷಣದಲ್ಲಿ ಆಗಾಗ ಪ್ರಸ್ತಾಪಿಸುತ್ತಿರುತ್ತಾರೆ. ಚುನಾವಣಾ ಭಾಷಣದಲ್ಲಿ ಮಾತನಾಡುತ್ತಾ ಅವರು, ನಮ್ಮ ಲೇಬರ್ ಪಕ್ಷ ಅಧಿಕಾರಕ್ಕೆ ಬಂದರೆ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ. ಅಲ್ಲದೇ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ಬಯಸುತ್ತದೆ. ಜಾಗತಿಕ ಭದ್ರತೆ, ಹವಾಮಾನ ಭದ್ರತೆ, ಆರ್ಥಿಕ ಭದ್ರತೆಗಾಗಿ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಸಹ ಹಂಚಿಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: Hathras Stampede: ಹತ್ರಾಸ್‌ನಲ್ಲಿ ಕಾಲ್ತುಳಿತ; 6 ಜನರನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು