Site icon Vistara News

ಸಿನಿಮಾ ಸ್ಟೈಲಲ್ಲಿ ಪಂಚ್‌ ಕೊಟ್ಟು ವಿಮಾನದ ಸಿಬ್ಬಂದಿಯ ಮೂಗು ಮುರಿದ ಪ್ರಯಾಣಿಕ; Video ಇದೆ

Flight Incident

UK passenger Punches air steward in the face after smashing up plane toilet On Flight

ಬ್ಯಾಂಕಾಕ್:‌ ಹಾರುತ್ತಿರುವ ವಿಮಾನದಲ್ಲಿಯೇ ಸಿಬ್ಬಂದಿ ಹಾಗೂ ಪ್ರಯಾಣಿಕರ ಜತೆ ಅನುಚಿತ ವರ್ತನೆ ತೋರುವುದು, ಸಹ ಪ್ರಯಾಣಿಕರಿಗೆ ತೊಂದರೆ ಕೊಡುವ ಕೃತ್ಯಗಳು ಇತ್ತೀಚೆಗೆ ಜಾಸ್ತಿಯಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ವಿಮಾನದಲ್ಲಿ (Flight) ಪ್ರಯಾಣಿಕನು (Passenger) ಸಿಬ್ಬಂದಿಯ ಮುಖಕ್ಕೆ ಪಂಚ್‌ ಮಾಡಿದ್ದಾನೆ. ಸಿನಿಮಾ ರೀತಿಯಲ್ಲೇ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಇದಕ್ಕೂ ಮೊದಲು ಆತ ವಿಮಾನದ ಶೌಚಾಲಯವನ್ನು ಮುರಿದು ಹಾಕಿದ್ದಾನೆ ಎಂದು ತಿಳಿದುಬಂದಿದೆ. ಸಿಬ್ಬಂದಿ ಮೇಲೆ ಹಲ್ಲೆ ಮಾಡುವ ವಿಡಿಯೊ (Viral Video) ಈಗ ವೈರಲ್‌ ಆಗಿದೆ.

ಬ್ಯಾಂಕಾಂಕ್‌ನಿಂದ ಹೀಥ್ರೂಗೆ ತೆರಳುತ್ತಿದ್ದ ಥಾಯ್‌ ಏರ್‌ವೇಸ್‌ ವಿಮಾನದಲ್ಲಿ 35 ವರ್ಷದ ಬ್ರಿಟನ್‌ ಪ್ರಯಾಣಿಕನು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಫೆಬ್ರವರಿ 7ರಂದು ಘಟನೆ ನಡೆದಿದ್ದು, ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ವಿಮಾನ ಹಾರುವಾಗ ಟಾಯ್ಲೆಟ್‌ಗೆ ಹೋದ ಪ್ರಯಾಣಿಕನು ಒಳಗಡೆ ಕೂಗಾಡಲು ಶುರು ಮಾಡಿದ್ದಾನೆ. ಕೂಗಿ, ಅತ್ತು, ಟಾಯ್ಲೆಟ್‌ನ ಬಾಗಿಲು ಮುರಿಯಲು ಯತ್ನಿಸಿದ್ದಾನೆ. ಟಾಯ್ಲೆಟ್‌ಅನ್ನು ಕೂಡ ಧ್ವಂಸಗೊಳಿಸಿದ್ದಾನೆ ಎಂದು ತಿಳಿದುಬಂದಿದೆ.

ವಿಮಾನದ ಶೌಚಾಲಯದಿಂದ ಆತ ಹೊರಗೆ ಬಂದ ಕೂಡಲೇ ವಿಮಾನದ ಸಿಬ್ಬಂದಿಯು ಆತನನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಇದೇ ವೇಳೆ ಪ್ರಯಾಣಿಕನು ಸಿಬ್ಬಂದಿಯ ಮೂಗಿಗೆ ಪಂಚ್‌ ಮಾಡಿದ್ದು, ಮೂಗು ಮುರಿದಿದೆ ಎಂದು ತಿಳಿದುಬಂದಿದೆ. ಗಗನಸಖಿಯೊಬ್ಬರು ಮಾಡಿದ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ. ಇನ್ನು ಪ್ರಯಾಣಿಕನ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿಮಾನಯಾನ ಸಂಸ್ಥೆ ಮುಂದಾಗಿದೆ. ಪ್ರಯಾಣಿಕನು ಟಾಯ್ಲೆಟ್‌ಗೆ ಹೋಗಿ ಕಿರುಚಾಡಲು, ಗಲಾಟೆ ಮಾಡಲು ಏನು ಕಾರಣ ಎಂಬುದು ಗೊತ್ತಾಗಿಲ್ಲ.

ಇದನ್ನೂ ಓದಿ: Mumbai Airport: ವ್ಹೀಲ್‌ಚೇರ್‌ ದೊರೆಯದೆ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಮೃತಪಟ್ಟ ವೃದ್ಧ

ವಿಮಾನದಲ್ಲಿ ಸಿಬ್ಬಂದಿ ಜತೆ ಪ್ರಯಾಣಿಕರು ಅನುಚಿತವಾಗಿ ವರ್ತಿಸುವ, ಜಗಳವಾಡುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಕೆಲ ತಿಂಗಳ ಹಿಂದಷ್ಟೇ, ಲಂಡನ್‌ನಿಂದ ಮುಂಬೈ ಏರ್ ಇಂಡಿಯಾ ವಿಮಾನದ ಪ್ರಯಾಣಿಕರೊಬ್ಬರು ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದರು. ಅವರ ಈ ಅಶಿಸ್ತಿನ ವರ್ತನೆಗಾಗಿ ಪ್ರಕರಣ ದಾಖಲಾಗಿತ್ತು. ಇನ್ನು 2022ರ ನವೆಂಬರ್‌ನಲ್ಲಿ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಪ್ರಕರಣದಲ್ಲಿ ನಿಯಮಗಳನ್ನು ಅನುಸರಿಸಲು ವಿಫಲವಾದ ಕಾರಣ ಏರ್ ಇಂಡಿಯಾಗೆ ಸಂಸ್ಥೆಗೆ 30 ಲಕ್ಷ ರೂ. ದಂಡ ವಿಧಿಸಲಾಯಿತು. ನವೆಂಬರ್ 26 ರಂದು ನ್ಯೂಯಾರ್ಕ್-ದಿಲ್ಲಿ ವಿಮಾನದಲ್ಲಿ ಶಂಕರ್ ಮಿಶ್ರಾ ಎಂಬ ಪ್ರಯಾಣಿಕರು ಕುಡಿದ ಅಮಲಿನಲ್ಲಿ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ಈ ಪ್ರಕರಣ ಭಾರೀ ಸುದ್ದಿ ಮಾಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version