ಲಂಡನ್: ಇತ್ತೀಚೆಗಷ್ಟೇ ಬ್ರಿಟನ್ ಪ್ರಧಾನಿ(Britain PM)ಯಾಗಿರುವ ಲಿಜ್ ಟ್ರುಸ್ ಅವರನ್ನು ಪದಚ್ಯುತಗೊಳಿಸಿ, ಆ ಜಾಗಕ್ಕೆ ಭಾರತೀಯ ಮೂಲದ ರಿಷಿ ಸುನಕ್ ಅವರನ್ನು ಕರೆ ತರುವ ಪ್ರಯತ್ನ ನಡೆದಿದೆಯಾ? ಹೌದು, ಇಂಥೊಂದು ತಂತ್ರವನ್ನು ಕನ್ಸರ್ವೇಟಿವ್ ಪಕ್ಷದ ಕಾರ್ಯಕರ್ತರು ನಡೆಸುತ್ತಿದ್ದಾರೆಂಬ ವರದಿಗಳಿವೆ. ಯಾಕೆಂದರೆ, ಆ ಪಕ್ಷದ ಅರ್ಧದಷ್ಟು ಕಾರ್ಯಕರ್ತರಿಗೆ ತಪ್ಪಾದ ವ್ಯಕ್ತಿಯನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಪಶ್ಚಾತ್ತಾಪ ಪಡುತ್ತಿದ್ದಾರಂತೆ!
ಈ ತರಹದ ಚಿಂತನೆಯೊಂದು ಕನ್ಸರ್ವೇಟಿವ್ ಪಕ್ಷದೊಳಗೆ ಮೊಳೆಯಲು ಸಮೀಕ್ಷೆಯೊಂದು ಕಾರಣವಾಗಿದೆ. ದಿ ಟೈಮ್ಸ್ ನಡೆಸುವ YouGov ಸಮೀಕ್ಷೆಯಲ್ಲಿ ಕನ್ಸರ್ವೇಟಿವ್ ಪಕ್ಷದ ಅರ್ಧದಷ್ಟು ಬೆಂಬಲಿಗರು ತಪ್ಪಾದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರಂತೆ. ಕಳೆದ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷಕ್ಕೆ ಮತ ಹಾಕಿದ ಬೆಂಬಲಿಗರ ಪೈಕಿ ಶೇ. 62ರಷ್ಟು ಜನರು, ಪ್ರಧಾನಿ ಹುದ್ದೆಗೆ ಲಿಜ್ ಟ್ರುಸ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಪಕ್ಷ ತಪ್ಪು ಹೆಜ್ಜೆ ಇಟ್ಟಿದೆ ಎಂದು ಹೇಳಿದ್ದಾರಂತೆ. ಅವರ ಪ್ರಕಾರ, ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗುವುದು ಸರಿಯಾದ ಆಯ್ಕೆಯಾಗಿತ್ತಂತೆ.
ಸಂಸದೀಯ ಪಕ್ಷದೊಳಗೆ ಹೆಚ್ಚು ಮತಗಳನ್ನು ಗಳಿಸಿದ ಅಭ್ಯರ್ಥಿಗಳಲ್ಲಿ ಪರ್ಯಾಯವನ್ನು ಪರಿಗಣಿಸಲು, ಪಕ್ಷದ ಬೆಂಬಲಿಗರ ಅಭಿಮತವು ಕಾರಣವಾಗಿದೆ. ಹಾಗಾಗಿ, ರಿಷಿ ಸುನಕ್ ಜತೆಗೆ ಈಗ ಮೂರನೇ ಸ್ಥಾನದಲ್ಲಿದ್ದ ಲೀಡರ್ ಆಫ್ ದಿ ಕಾಮನ್ಸ್ ನಾಯಕ ಪೆನ್ನಿ ಮೊಡ್ರಾಂಟ್ ಅವರು ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ, ಈ ಪರ್ಯಾಯ ನಾಯಕತ್ವಕ್ಕೆ ಮನ್ನಣೆ ಹಾಕುವುದು ಅಷ್ಟು ಸರಳ ಕೂಡ ಇಲ್ಲ.
ನಾಯಕತ್ವಕ್ಕೆ ಸಂಬಂಧಿಸಿದಂತೆ ಮುಂದಿನ 12 ತಿಂಗಳವರೆಗೆ ಲಿಜ್ ಟ್ರುಸ್ ಅವರು ಯಾವುದೇ ಸವಾಲು ಎದುರಿಸಲಾರರು. ಆದರೆ, ಪ್ರಭಾವಶಾಲಿಯಾಗಿರುವ ಎನಿಸಿರುವ ಹಿಂದಿನ ಬೆಂಚ್ ಎಂಪಿಗಳನ್ನು ಹೊಂದಿರುವ 1922 ಕಮಿಟಿ ಏನಾದರೂ ತಮ್ಮ ನಿಯಮಗಳನ್ನು ಬದಲಿಸಿ, ಪರ್ಯಾಯ ನಾಯಕತ್ವಕ್ಕೆ ಮನಸ್ಸು ಮಾಡಿದರೆ ಬದಲಾವಣೆಯನ್ನು ನಿರೀಕ್ಷಿಸಬಹುದು ಎನ್ನಲಾಗುತ್ತಿದೆ. 1922 ಕಮಿಟಿ ಎಂಬುದು, ಸಂಸತ್ತಿನಲ್ಲಿ ಹಿಂಬದಿ ಬೆಂಚ್‌ನಲ್ಲಿ ಕುಳಿತುಕೊಳ್ಳುವ ಕನ್ಸರ್ವೇಟಿವ್ ಪಕ್ಷದ ಸಂಸದರ ಕೂಟ. ಇವರು ತಮ್ಮ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುತ್ತಾರೆ.
ಇದನ್ನೂ ಓದಿ | Rishi sunak | ನಾನು ಗೆದ್ದರೆ ಚೀನಾ ವಿರುದ್ಧ ಜಾಗತಿಕ ಕಾರ್ಯಪಡೆ ಎಂದ ರಿಷಿ