Site icon Vistara News

UK Politics: ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ರಾಜೀನಾಮೆ, ಸುನಕ್‌ ಮುಂದಿನ ಪಿಎಂ?

Boris Johnson

ಲಂಡನ್‌: ಬ್ರಿಟಿಷ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸಚಿವರ ಸರಣಿ ರಾಜೀನಾಮೆ, ಹಿಂದೆಂದೂ ಕಂಡರಿಯದಷ್ಟು ನಾಯಕರ ವಲಸೆ ಮತ್ತು ಪದತ್ಯಾಗಕ್ಕೆ ಕೇಳಿಬಂದ ತೀವ್ರ ಒತ್ತಡಕ್ಕೆ ಮಣಿದ ಹಿರಿಯ ನಾಯಕ ಇದೀಗ ಹುದ್ದೆ ತೊರೆಯಲು ನಿರ್ಧರಿಸಿದ್ದಾರೆ. ಗುರುವಾರ ಅವರು ಪದತ್ಯಾಗ ಮಾಡಿದ್ದು, ಹಂಗಾಮಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.

ಸಚಿವರೊಬ್ಬರ ಅಕ್ರಮ ಸಂಬಂಧದ ಬಗ್ಗೆ ಅರಿವಿದ್ದರೂ ಸುಳ್ಳು ಹೇಳಿದ್ದಾರೆಂಬ ನೈತಿಕತೆ ಪ್ರಶ್ನೆ ಮತ್ತು ವಿಶ್ವಾಸಾರ್ಹತೆ ಕುಸಿದ ಹಿನ್ನೆಲೆಯಲ್ಲಿ ಸಚಿವರೇ ಬೋರಿಸ್‌ ಜಾನ್ಸನ್‌ ಅವರ ವಿರುದ್ಧ ಬಂಡಾಯ ಸಾರಿದ್ದರು. ಹಣಕಾಸು ಸಚಿವ ರಿಷಿ ಸುನಕ್‌ ಹಾಗೂ ಆರೋಗ್ಯ ಕಾರ್ಯದರ್ಶಿ ಸಾಜಿದ್‌ ಜಾವಿದ್‌ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು.

ಬೋರಿಸ್‌ ಜಾನ್ಸನ್‌ ಅವರು ಕಳೆದ ವರ್ಷದ ಆರಂಭದಿಂದಲೂ ಬ್ರಿಟನ್‌ ಜನತೆಯ ಮುಂದೆ ವಿಶ್ವಾಸದ ಕೊರತೆಯನ್ನು ಎದುರಿಸುತ್ತಿದ್ದಾರೆ. ಕೋವಿಡ್‌ ಸನ್ನಿವೇಶವನ್ನು ಅವರು ಸಾಕಷ್ಟು ಸಮರ್ಪಕವಾಗಿ ಎದುರಿಸಿರಲಿಲ್ಲ ಎಂಬ ಆಕ್ಷೇಪ ಅವರ ಮೇಲೆ ಇದೆ. ಬ್ರಿಟನ್‌ ಕೊರೊನಾ ಸಾಂಕ್ರಾಮಿಕವನ್ನು ಎದುರಿಸುತ್ತಿದ್ದಾಗ ಪ್ರಧಾನಿ ಬೋರಿಸ್‌ ಹಾಗೂ ಅವರ ಗೆಳೆಯರು ಡೌನಿಂಗ್‌ ಸ್ಟ್ರೀಟ್‌ನಲ್ಲಿರುವ ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಆಲ್ಕೋಹಾಲ್‌ ಪಾರ್ಟಿ ನಡೆಸಿದ್ದರು. ಇದು ವಿವಾದದ ಕಿಡಿ ಹೊತ್ತಿಸಿತ್ತು.

ಇದರಿಂದ ಅವರು ತಮ್ಮ ಪಕ್ಷವಾದ ಕನ್ಸರ್ವೇಟಿವ್‌ ಪಾರ್ಟಿಯಲ್ಲೇ ಸಾಕಷ್ಟು ಶಾಸಕರ ವಿರೋಧ, ಭಿನ್ನಮತ ಎದುರಿಸಬೇಕಾಗಿ ಬಂದಿತ್ತು. ಬೋರಿಸ್‌ ರಾಜೀನಾಮೆ ನೀಡಬೇಕು ಎಂದು ದೊಡ್ಡದೊಂದು ಬಣ ಒತ್ತಾಯಿಸಿತ್ತು. ಬೋರಿಸ್‌ ನಾಯಕತ್ವದಲ್ಲಿ ಮುಂದುವರಿಯುವುದನ್ನು ಆಕ್ಷೇಪಿಸಿ ಸರಕಾರದ ಹಲವು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಜೂನ್‌ 6ರಂದು ಬೋರಿಸ್‌ ನಾಯಕತ್ವದ ಬಗೆಗೆ ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ, 211: 148 ಮತಗಳಲ್ಲಿ ಬೋರಿಸ್‌ ಗೆದ್ದಿದ್ದರು. ಇದರ ನಂತರ ನಡೆದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ಕನ್ಸರ್ವೇಟಿವ್‌ ಪಕ್ಷವನ್ನು ಕೈಬಿಟ್ಟಿದ್ದರು. ಹೀಗೆ ಹಂತ ಹಂತವಾಗಿ ವಿಶ್ವಾಸ ಕಳೆದುಕೊಳ್ಳುತ್ತಿರವ ಬೋರಿಸ್‌ ಜಾನ್ಸನ್‌ ಅವರು ಈಗ ಹುದ್ದೆಯಿಂದ ನಿರ್ಗಮಿಸಿದ್ದಾರೆ.

ಇನ್ಫೋಸಿಸ್‌ ಸ್ಥಾಪಕರಾದ ನಾರಾಯಣಮೂರ್ತಿ, ಸುಧಾ ಮೂರ್ತಿ ದಂಪತಿಯ ಅಳಿಯ ಋಷಿ ಸುನಕ್‌ ಅವರು ಮುಂದಿನ ಪ್ರಧಾನಿಯಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ.

Exit mobile version