ಖಾರ್ಕಿವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಉಕ್ರೇನ್ನಲ್ಲಿ ರಷ್ಯಾ ಯುದ್ಧ ನಡೆಸುತ್ತಿದೆ. ಝೆಲೆನ್ಸ್ಕಿ ಪ್ರತಿದಿನ ನಗರ ಸುತ್ತಿ, ಯುದ್ಧದ ಸ್ಥಿತಿಗತಿಗಳನ್ನು ಪರಿಶೀಲಿಸುತ್ತಿದ್ದಾರೆ. ಎಂದಿನಂತೆ ಇಂದೂ ಮುಂಜಾನೆ ಕಾರಿನಲ್ಲಿ ಹೋಗಿ ಯುದ್ಧನೆಲೆಗಳಿಗೆ ಭೇಟಿ ಕೊಟ್ಟಿದ್ದರು. ಪ್ರಾರಂಭದಿಂದಲೂ ಸಮರ ತೀವ್ರತೆ ಇರುವ ಕಾರ್ಖೀವ್ನಿಂದ ಕೀವ್ಗೆ ವಾಪಸ್ ಬರುತ್ತಿದ್ದಾಗ ಝೆಲೆನ್ಸ್ಕಿ ಕಾರಿಗೆ ಇನ್ನೊಂದು ವಾಹನ ಬಂದು ಗುದ್ದಿದೆ. ಝೆಲೆನ್ಸ್ಕಿ ಅವರಿಗೆ ದೊಡ್ಡ ಗಾಯವೇನೂ ಆಗಿಲ್ಲ ಎಂದು ಅಧ್ಯಕ್ಷರ ಕಚೇರಿ ವಕ್ತಾರ ಸೆರ್ಗಿ ನಿಕಿಫೊರೊವ್ ತಿಳಿಸಿದ್ದಾರೆ.
ಖಾರ್ಕಿವ್ ನಗರದ ಇಜಿಯಮ್ ಎಂಬ ನಗರವನ್ನು ರಷ್ಯಾ ಸೈನಿಕರು ಅತಿಕ್ರಮಿಸಿಕೊಂಡಿದ್ದಾರೆ. ಅಲ್ಲಿದ್ದ ಉಕ್ರೇನ್ ಸೈನಿಕರನ್ನೂ ಸೆರೆ ಹಿಡಿದಿಟ್ಟುಕೊಂಡಿದ್ದಾರೆ. ಇಂದು ಬೆಳಗ್ಗೆ ಝೆಲೆನ್ಸ್ಕಿ ಆ ಇಜಿಯಮ್ ನಗರಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿನ ಸೈನಿಕರೊಂದಿಗೆ ಮಾತುಕತೆ ನಡೆಸಿ, ಅವರಲ್ಲಿ ಆತ್ಮಸ್ಥೈರ್ಯ ತುಂಬಿ ವಾಪಸ್ ಬರುತ್ತಿದ್ದಾಗ, ಪ್ರಯಾಣಿಕರ ವಾಹನವೊಂದು ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಸೆರ್ಗಿ ವಿವರಿಸಿದ್ದಾರೆ.
ಅಧ್ಯಕ್ಷ ಝೆಲೆನ್ಸ್ಕಿಗೆ ಗಂಭೀರ ಗಾಯಗಳಾಗಿಲ್ಲ. ಆದರೆ ಅವರನ್ನೂ ವೈದ್ಯರು ತಪಾಸಣೆ ಮಾಡಿದ್ದಾರೆ ಎಂದಷ್ಟೇ ವಕ್ತಾರ ಸೆರ್ಗಿ ಹೇಳಿದ್ದಾರೆ ಹೊರತು, ಝೆಲೆನ್ಸ್ಕಿಗೆ ಉಂಟಾದ ಗಾಯದ ಪ್ರಮಾಣವನ್ನು ತಿಳಿಸಿಲ್ಲ. ಆದರೆ ಅಧ್ಯಕ್ಷರ ಕಾರಿಗೆ ಡಿಕ್ಕಿ ಹೊಡೆದ ವಾಹನದ ಚಾಲಕನೇ ತುಸು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಝೆಲೆನ್ಸ್ಕಿ ಜತೆ ಇದ್ದ ವೈದ್ಯಕೀಯ ತಂಡವೇ ಪ್ರಾಥಮಿಕ ಚಿಕಿತ್ಸೆ ನೀಡಿ, ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದೆ ಎಂದು ವಕ್ತಾರ ವಿವರಿಸಿದ್ದಾರೆ. ಹಾಗೇ, ಅಪಘಾತದ ತನಿಖೆಯನ್ನು ಪೊಲೀಸರು ಪ್ರಾರಂಭಿಸಿದ್ದಾಗಿಯೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಟ್ರೆಂಡ್ ಆಗ್ತಿದೆ ‘One Word Tweet’; ಎಲ್ಲಕ್ಕಿಂತ ಗಮನ ಸೆಳೆದಿದ್ದು ಉಕ್ರೇನ್ ಅಧ್ಯಕ್ಷ ಟ್ವೀಟ್ ಮಾಡಿದ ಒಂದು ಶಬ್ದ