Site icon Vistara News

Russia-Ukrain War | ತನ್ನದೇ ಭೂಭಾಗದ ಮೇಲೆ ರಾಕೆಟ್​ ದಾಳಿ ನಡೆಸಿ, ರಷ್ಯಾದ 63 ಯೋಧರನ್ನು ಕೊಂದ ಉಕ್ರೇನ್​!

Ukraine rocket strikes on Russia Killed 63

ಕೀವ್​: ಕಳೆದ 10-11 ತಿಂಗಳುಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದಲ್ಲೀಗ ಉಕ್ರೇನ್​ ತನ್ನ ಬಲ ಹೆಚ್ಚಿಸುತ್ತಿರುವಂತೆ ಗೋಚರಿಸುತ್ತಿದೆ. ರಷ್ಯಾದ ಬ್ರಿಯಾನ್ಸ್ಕ್​ ಪ್ರದೇಶದ ಮೇಲೆ ಉಕ್ರೇನ್​ ಡ್ರೋನ್​ ದಾಳಿ ನಡೆಸಿದ ಬಗ್ಗೆ ನಿನ್ನೆಯಷ್ಟೇ ವರದಿಯಾಗಿತ್ತು. ಅದರ ಬೆನ್ನಲ್ಲೇ ಮಾಸ್ಕೋ ಆಕ್ರಮಿತ ಡೊನೆಟ್ಸ್ಕ್ ಪ್ರದೇಶದ ಮೇಲೆ ಉಕ್ರೇನ್​ ರಾಕೆಟ್​ ದಾಳಿ ನಡೆಸಿದ್ದಾಗಿ ರಷ್ಯಾ ಹೇಳಿಕೊಂಡಿದೆ.

ಡೊನೆಟ್ಸ್ಕ್ ಉಕ್ರೇನ್​​ನ ಭಾಗವೇ ಆಗಿತ್ತು. ಆದರೆ ಯುದ್ಧ ಸಾರಿದ್ದ ರಷ್ಯಾ, ಈ ಪ್ರದೇಶವನ್ನು ವಶಕ್ಕೆ ಪಡೆದಿತ್ತು. ಅಲ್ಲೆಲ್ಲ ರಷ್ಯಾ ಸೈನಿಕರೇ ಕಾವಲಿದ್ದರು. ಈಗ ಉಕ್ರೇನ್​ ಅದೇ ಪ್ರದೇಶದ ಮೇಲೆ 6 ರಾಕೆಟ್​​ ದಾಳಿ ನಡೆಸಿದೆ. ಇದರಲ್ಲಿ ರಷ್ಯಾದ 63 ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ‘ಡೊನೆಟ್ಸ್ಕ್​ ಪ್ರದೇಶದಲ್ಲಿರುವ ಮಕಿವ್ಕಾ ಎಂಬ ನಗರದ ಮೇಲೆ ಉಕ್ರೇನ್​​ ಒಟ್ಟು ಆರು ರಾಕೆಟ್​​ಗಳನ್ನು ಹಾರಿಸಿತ್ತು. ಅದರಲ್ಲಿ ಎರಡನ್ನು ಹೊಡೆದುರುಳಿಸಿದ್ದೇವೆ. ಇವೆಲ್ಲ ಉಕ್ರೇನ್​​ಗೆ ಯುಎಸ್​​ನಿಂದ ಪೂರೈಕೆಯಾದ ರಾಕೆಟ್​ಗಳು’ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ. ಆದರೆ ಈ ರಾಕೆಟ್​ ದಾಳಿ ಯಾವಾಗ ಆಯಿತು ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ಪ್ರಾರಂಭದಲ್ಲಿ ರಷ್ಯಾ ಪ್ರಾಬಲ್ಯ ಮೆರೆದಿತ್ತು. ಉಕ್ರೇನ್​ನ ರಾಜಧಾನಿ ಕೀವ್​, ಖಾರ್ಕಿವ್​​ನಂಥ ಪ್ರಮುಖ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಇತ್ತೀಚೆಗೆ ಉಕ್ರೇನ್​ ತೀಕ್ಷ್ಣವಾದ ಪ್ರತಿರೋಧ ಒಡ್ಡುತ್ತಿದೆ. ಉಕ್ರೇನ್​​ಗೆ ಯುಎಸ್​​ನಿಂದ ಶಸ್ತ್ರಾಸ್ತ್ರ ಸರಬರಾಜು ಆಗುತ್ತಿದ್ದು, ಅದನ್ನೆಲ್ಲ ಆ ಪುಟ್ಟ ದೇಶ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ.
ಉಕ್ರೇನ್​ ದಾಳಿಯ ಬಗ್ಗೆ ಮಾಹಿತಿ ನೀಡಿದ ರಷ್ಯಾದ ಸಮಾರಾ ಪ್ರದೇಶದ ಗವರ್ನರ್​ ಡಿಮಿಟ್ರಿ ಅಜರೋವ್, ‘ಮಕಿವ್ಕಾ ಮೇಲೆ ಉಕ್ರೇನ್​ ಮಾಡಿದ ರಾಕೆಟ್​ ದಾಳಿಯಲ್ಲಿ ರಷ್ಯಾ ಸೈನಿಕರಷ್ಟೇ ಅಲ್ಲದೆ, ಸ್ಥಳೀಯ ನಿವಾಸಿಗಳೂ ಮೃತಪಟ್ಟಿದ್ದಾರೆ. ಅವರ ಗುರುತು ಇನ್ನೂ ಸಿಕ್ಕಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Russia-Ukraine war | ಹೊಸ ವರ್ಷ ಉಕ್ರೇನ್‌ ವಿರುದ್ಧ ಸಂಘರ್ಷ ತೀವ್ರಗೊಳಿಸುವ ಸಂಕಲ್ಪ ಮಾಡಿದ ಪುಟಿನ್

Exit mobile version