Site icon Vistara News

Viral News | ಹಣ ಉಳಿಸಲು ಆ ಕಾಲೇಜು ವಿದ್ಯಾರ್ಥಿ ತಿಂದಿದ್ದು ಡಾಗ್‌ಫುಡ್‌!

dog food

ನ್ಯೂಯಾರ್ಕ್‌: ಓದುವ ದಿನಗಳಲ್ಲಿ ನಮ್ಮಲ್ಲಿ ಬಹುತೇಕರು ಪೋಷಕರಿಗೆ ಹೊರೆಯಾಗಬಾರದೆಂದು, ಹಣ ಉಳಿಸಲು ಏನೇನೋ ಸರ್ಕಸ್‌ ಮಾಡಿರುತ್ತೇವೆ. ಒಂದು ಹೊತ್ತು ಊಟ ಬಿಡುವುದು, ಮನೆಪಾಠ ಹೇಳುವುದು, ಅರ್ಧ ದಿನ ಕೆಲಸ ಮಾಡುವುದು, ಅನಗತ್ಯ ವೆಚ್ಚವನ್ನೆಲ್ಲಾ ಕಡಿಮೆ ಮಾಡುವುದು… ಇತ್ಯಾದಿ. ಆದರೆ ಅಮೆರಿಕದ ವಿವಿಯೊಂದರ ವಿದ್ಯಾರ್ಥಿಯೋರ್ವ ನಾಯಿಗಳಿಗೆ ಹಾಕುವ ಆಹಾರವನ್ನು ಸೇವಿಸಿ ಸುದ್ದಿಯಾಗಿದ್ದಾನೆ.

ಎಂದೋ ಒಂದು ದಿನ ಆತನಿಗೆ ನಾಯೂಟವನ್ನು, ಅಂದರೆ ಶ್ವಾನಗಳಿಗಾಗಿ ಹಾಕುವ ಫುಡ್‌ ಅನ್ನು ಸೇವಿಸುವಂತೆ ಗೆಳೆಯರೆಲ್ಲಾ ಮೋಜಿಗಾಗಿ ಸವಾಲೊಡ್ಡಿದ್ದರಂತೆ. ಅಂದು ಮೊದಲ ಬಾರಿಗೆ ನಾಯಿಗೆ ಹಾಕುವ ಫುಡ್‌ನ ರುಚಿ ನೋಡಿದ ಆತ, ತಾನೇಕೆ ಇದನ್ನೇ ತಿನ್ನಬಾರದು ಎಂಬ ಘನಘೋರವಾದ ಯೋಚನೆ ಮಾಡಿದನಂತೆ. ತಡ ಮಾಡದೇ, ಒಂದಿಷ್ಟು ಪ್ಯಾಕ್‌ ಡಾಗ್‌ ಫುಡ್‌ ತರಿಸಿಕೊಂಡು ಅದನ್ನೇ ಸೇವಿಸಲಾರಂಭಿಸಿದನಂತೆ. ಅಮೆರಿಕದಲ್ಲಿ ಉಚಿತವಾಗಿಯೂ ಈ ಫುಡ್‌ ಅನ್ನು ವಿತರಿಸಲಾಗುತ್ತದೆ. ಇದರಿಂದ ಫುಡ್‌ಗಾಗಿ ತಾನು ಮಾಡುತ್ತಿದ್ದ ಖರ್ಚು ಕಡಿಮೆಯಾಗುತ್ತದೆ ಎಂಬುದು ಆತನ ಲೆಕ್ಕಾಚಾರವಾಗಿತ್ತು.

ಒಮ್ಮೆ ಆನತ ಭೇಟಿಗೆಂದು ಬಂದ ಮಿತ್ರರು ಅವನ ಕೋಣೆಯಲ್ಲಿ ಬಹಳಷ್ಟು ಪೊಟ್ಟಣ ಡಾಗ್‌ ಫುಡ್‌ ಇರುವುದನ್ನು ನೋಡಿ ಆಶ್ಚರ್ಯ ಪಟ್ಟರು. ಆತನೇನು ನಾಯಿ ಸಾಕಿರಲಿಲ್ಲ, ಹೀಗಾಗಿ ಕುತೂಹಲದಿಂದ ಈ ಫುಡ್‌ ಏಕೆ ಎಂದು ಕೇಳಿದರು. ಆಗ ಆತ ಪ್ರಾಮಾಣಿಕವಾಗಿ, “ಇದೆಲ್ಲಾ ನಾಯಿಗಲ್ಲ, ತನಗೇʼʼ ಎಂದು ಹೇಳಿದನಂತೆ. ಮಾತ್ರವಲ್ಲ, ಅಮೆರಿಕದ ಪ್ರಸಿದ್ಧ ಸಾಮಾಜಿಕ ಸುದ್ದಿ ತಾಣ “ರೆಡಿಟ್‌ʼʼನಲ್ಲಿ ಈ ಬಗ್ಗೆ ವಿವರವಾಗಿ ಬರೆದೂಕೊಂಡ. ಈ ನಾಯೂಟವನ್ನು ತಾನು ಆರಂಭಿಸಿದ್ದು ಹೇಗೆ ಎಂಬುದರಿಂದ ಶುರುಮಾಡಿ, ಈಗ ಮೂರೂ ಹೊತ್ತು ಅದನ್ನೇ ತಿಂದು ಬದುಕಿರುವುದಾಗಿ ಹೇಳಿದ್ದಾನೆ. ಇದಕ್ಕೆ ಹಲವಾರು ಮಂದಿ ಪ್ರತಿಕ್ರಿಯಿಸಿದ್ದು, ಇದರಿಂದ ಆರೋಗ್ಯ ಸಮಸ್ಯೆ ಎದುರಿಸಬೇಕಾಗಬಹುದು ಎಂದು ಆತನನ್ನು ಎಚ್ಚರಿಸಿದ್ದಾರೆ.

ಡಾಗ್‌ಫುಡ್‌ ಮನುಷ್ಯರು ತಿನ್ನಬಹುದೇ?: ನಾಯಿಗಳಿಗಾಗಿ ಸಿದ್ಧಪಡಿಸಿದ ರೆಡಿಮೇಡ್‌ ಆಹಾರವನ್ನು ಮನುಷ್ಯರು ತಿನ್ನಬಹುದೇ ಎಂಬ ಚರ್ಚೆಯನ್ನು ಈ ವಿದ್ಯಾರ್ಥಿ ಹುಟ್ಟುಹಾಕಿದ್ದಾನೆ. ತಜ್ಞರ ಪ್ರಕಾರ ಅಲ್ಪ ಪ್ರಮಾಣದಲ್ಲಿ ಒಮ್ಮೊಮ್ಮೆ ತಿಂದರೆ ನಮಗೇನೂ ಆಗುವುದಿಲ್ಲವಂತೆ.

ಡಾಗ್‌ ಫುಡ್‌ನಲ್ಲಿ ಪ್ರಾಣಿಗಳ ಮಾಂಸ ಮಾತ್ರವಲ್ಲದೆ, ಅವುಗಳ ಕೊಕ್ಕು, ಪುಕ್ಕ, ಮೂಳೆಯಂಥ ತುಣುಕುಗಳನ್ನೂ ಸೇರಿಸಿರುತ್ತಾರೆ. ಇವೆಲ್ಲಾ ಜೀರ್ಣಿಸಿಕೊಳ್ಳಲು ಮಾನವ ಜಠರಕ್ಕೆ ಕಷ್ಟ. ಇದರ ತಯಾರಿಕೆಯ ಸಂದರ್ಭದಲ್ಲೂ, ಮಾನವರ ಆಹಾರ ತಯಾರಿಕೆಯಲ್ಲಿರುವ ವಿಶೇಷ ಮಾನದಂಡಗಳನ್ನು ಇಟ್ಟುಕೊಂಡಿರುವುದಿಲ್ಲ. ಇದರಿಂದ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಪ್ರಾಣಿಗಳಿಗಾಗಿ ತಯಾರಾದ ಆಹಾರ ಪೊಟ್ಟಣಗಳು ಮಾನವರ ಸೇವನೆಗೆ ಯೋಗ್ಯವಾಗಿರುವುದಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು.

ಇದನ್ನೂ ಓದಿ | ಪ್ರಾಚೀನ ಭಾರತದ ಈ 5 ಆಹಾರಗಳನ್ನು ಜನರು ಈಗಲೂ ಸೇವಿಸುತ್ತಾರೆ

Exit mobile version