Site icon Vistara News

US Air Strikes: ಯೋಧರ ಹತ್ಯೆಗೆ ಅಮೆರಿಕ ಪ್ರತೀಕಾರ; ಸಿರಿಯಾ, ಇರಾಕ್‌ನಲ್ಲಿ 85ಕ್ಕೂ ಹೆಚ್ಚು ಕಡೆ ವಾಯುದಾಳಿ

us air strikes

ವಾಷಿಂಗ್ಟನ್: ಇರಾನ್‌ ಬೆಂಬಲಿತ ಭಯೋತ್ಪಾದಕರ (Iran militia) 85ಕ್ಕೂ ಹೆಚ್ಚು ನೆಲೆಗಳ ಮೇಲೆ ಅಮೆರಿಕ ಶುಕ್ರವಾರ ರಾತ್ರಿ ವಾಯುದಾಳಿ (US Air Strikes) ನಡೆಸಿದೆ. ಜೋರ್ಡಾನ್‌ನಲ್ಲಿ ಮೂವರು ಅಮೆರಿಕನ್ ಸೈನಿಕರನ್ನು ಕೊಂದುಹಾಕಿದ ಭಯೋತ್ಪಾದಕರ (terrorist attacks) ಡ್ರೋನ್ ದಾಳಿಗೆ (drone strike) ಪ್ರತೀಕಾರವಾಗಿ ಈ ದಾಳಿಗಳು ನಡೆದಿವೆ.

ಇರಾಕ್ ಮತ್ತು ಸಿರಿಯಾ ಎರಡೂ ಕಡೆ ಇರಾನ್ ಪಡೆಗಳು ಮತ್ತು ಟೆಹ್ರಾನ್ ಬೆಂಬಲಿತ ಉಗ್ರರ ಗುಂಪುಗಳ ನೆಲೆಗಳ ಮೇಲೆ ಯುಎಸ್ ಮಿಲಿಟರಿ ಪ್ರತೀಕಾರದ ವೈಮಾನಿಕ ದಾಳಿಯನ್ನು ಶುಕ್ರವಾರ ಪ್ರಾರಂಭಿಸಿತು. ಡ್ರೋನ್‌ ದಾಳಿಯನ್ನು ಇರಾನ್ ಬೆಂಬಲಿತ ಉಗ್ರ ಪಡೆಗಳು ನಡೆಸಿವೆ ಎಂದು ಅಮೆರಿಕದ ದೂಷಿಸಿದ್ದರೂ, ಇರಾನ್‌ ಭೂಪ್ರದೇಶದ ಮೇಲೆ ಪ್ರತಿದಾಳಿ ಮಾಡಿಲ್ಲ. ಸಂಭಾವ್ಯ ಪೂರ್ಣ ಯುದ್ಧ ಪರಿಸ್ಥಿತಯನ್ನು ತಡೆಗಟ್ಟುವ ದೃಷ್ಟಿಯಿಂದ ಆ ದಾಳಿಯನ್ನು ತಡೆಯಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

“ಜೋರ್ಡಾನ್‌ ದಾಳಿಗೆ ನಮ್ಮ ಪ್ರತಿದಾಳಿ ಇಂದು ಪ್ರಾರಂಭವಾಯಿತು. ದಾಳಿ ನಮ್ಮ ಆಯ್ಕೆಯ ಸಮಯ ಮತ್ತು ಸ್ಥಳಗಳಲ್ಲಿ ಮುಂದುವರಿಯುತ್ತದೆ” ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಮಧ್ಯಪ್ರಾಚ್ಯದಲ್ಲಿ ಅಥವಾ ಪ್ರಪಂಚದ ಬೇರೆಲ್ಲಿಯೂ ಸಂಘರ್ಷವನ್ನು ಅಮೆರಿಕ ಬಯಸುವುದಿಲ್ಲ. ಆದರೆ ನಮಗೆ ಹಾನಿ ಮಾಡಲು ಬಯಸುವ ಎಲ್ಲರಿಗೂ ಇದನ್ನು ತಿಳಿದಿರಲಿ: ನೀವು ಅಮೆರಿಕನ್ನರಿಗೆ ಹಾನಿ ಮಾಡಿದರೆ, ನಾವು ಪ್ರತಿಕ್ರಿಯಿಸುತ್ತೇವೆ” ಎಂದು ಅವರು ಹೇಳಿದರು.

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕ್ಯುಡ್ಸ್ ಫೋರ್ಸ್ ಮತ್ತು ಸಂಯೋಜಿತ ಭಯೋತ್ಪಾದಕ ಗುಂಪುಗಳನ್ನು ಪ್ರಸ್ತುತ ದಾಳಿಗಳು ಗುರಿಯಾಗಿಸಿಕೊಂಡಿವೆ. ಅಮೇರಿಕನ್ ಪಡೆಗಳು 85ಕ್ಕೂ ಹೆಚ್ಚು ಗುರಿಗಳನ್ನು ಘಾತಿಸಿದವು. ಅಮೆರಿಕದಿಂದಲೇ ಹಾರಿಸಲಾದ ದೀರ್ಘ-ಶ್ರೇಣಿಯ ಬಾಂಬರ್‌ ವಿಮಾನಗಳು ಈ ಕಾರ್ಯಾಚರಣೆ ನಡೆಸಿವೆ.

ವೈಮಾನಿಕ ದಾಳಿಗಳು 125ಕ್ಕೂ ಹೆಚ್ಚು ನಿಖರವಾದ ಯುದ್ಧಸಾಮಗ್ರಿಗಳನ್ನು ಬಳಸಿಕೊಂಡಿವೆ. ಇರಾನಿ ಮಿಲಿಟರಿ ಹಾಗೂ ಉಗ್ರರ ಗುಂಪುಗಳ ಕಮಾಂಡ್ ಮತ್ತು ಕಂಟ್ರೋಲ್, ಗುಪ್ತಚರ ಕೇಂದ್ರಗಳು, ರಾಕೆಟ್, ಕ್ಷಿಪಣಿ ಮತ್ತು ಡ್ರೋನ್ ಶೇಖರಣಾ ಸೌಲಭ್ಯಗಳು ಈ ದಾಳಿಗಳಿಗೆ ಗುರಿಯಾಗಿವೆ. ಅಮೆರಿಕದಿಂದ ಹಾರಿದ B-1 ಬಾಂಬರ್‌ಗಳು ಸುಮಾರು 30 ನಿಮಿಷಗಳ ಕಾಲ ಗುರಿಗಳನ್ನು ಘಾತಿಸಿದವು. ರಕ್ಷಣಾ ಇಲಾಖೆಯು ಇನ್ನೂ ದಾಳಿಗಳಿಂದಾದ ಹಾನಿಯನ್ನು ಅಂದಾಜಿಸುಸುತ್ತಿದೆ. ಏಳು ಪ್ರತ್ಯೇಕ ಕಡೆಗಳಲ್ಲಿ ಡಜನ್‌ಗಟ್ಟಲೆ ಗುರಿಗಳನ್ನು ನಾಶ ಮಾಡಿದೆ.

ಬಾಗ್ದಾದ್‌ನಲ್ಲಿ ಹಿಂದಿನ ಅಮೆರಿಕ ದಾಳಿಯ ನಂತರ ಅಂತಾರಾಷ್ಟ್ರೀಯ ಪಡೆಗಳ ನಿರ್ಗಮನಕ್ಕೆ ಇರಾಕ್ ಕರೆ ನೀಡಿತ್ತು. ಈಗಿನ ಮಿಲಿಟರಿ ಕ್ರಮವನ್ನು, ʼಇದು ತನ್ನ ಸಾರ್ವಭೌಮತ್ವದ ಉಲ್ಲಂಘನೆʼ ಎಂದು ಖಂಡಿಸಿದೆ. ಆದರೆ ದಾಳಿಯ ಕುರಿತು ಇರಾಕ್‌ಗೆ ಈ ಮೊದಲೇ ತಿಳಿಸಲಾಗಿದೆ ಎಂದು ಅಮೆರಿಕದ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಭಾನುವಾರ ಜೋರ್ಡಾನ್‌ನಲ್ಲಿ ಡ್ರೋನ್‌ ದಾಳಿಯಲ್ಲಿ ಮೂವರು ಅಮೆರಿಕನ್‌ ಸೈನಿಕರು ಕೊಲ್ಲಲ್ಪಟ್ಟಿದ್ದರು. ಇದು ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ಹಮಾಸ್ ದಾಳಿಯ ನಂತರ ಮಧ್ಯಪ್ರಾಚ್ಯದಲ್ಲಿ ನಡೆದ ಮೊದಲ ಯುಎಸ್ ಮಿಲಿಟರಿ ಸಾವುಗಳು. ಅಕ್ಟೋಬರ್ ತಿಂಗಳಿನಿಂದ ಈಚೆಗೆ ಇರಾಕ್, ಸಿರಿಯಾ ಮತ್ತು ಜೋರ್ಡಾನ್‌ನಲ್ಲಿ US ಮತ್ತು ಸಮ್ಮಿಶ್ರ ಪಡೆಗಳ ಮೇಲೆ 165ಕ್ಕೂ ಹೆಚ್ಚು ಬಾರಿ ಡ್ರೋನ್‌ಗಳು, ರಾಕೆಟ್‌ಗಳು ಮತ್ತು ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ಉಗ್ರರು ದಾಳಿ ನಡೆಸಿದ್ದಾರೆ.

ಹಿಂದಿನ ದಾಳಿಗಳಲ್ಲಿ ಡಜನ್‌ಗಟ್ಟಲೆ ಅಮೆರಿಕದ ಸಿಬ್ಬಂದಿ ಗಾಯಗೊಂಡಿದ್ದರು. ಈ ದಾಳಿಗಳನ್ನು ನಡೆಸಿದ ಹೌತಿ ಮುಂತಾದ ಉಗ್ರರು, ಪ್ಯಾಲೆಸ್ತೀನ್‌ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲ್‌ಗೆ ಅಮೆರಿಕದ ಬೆಂಬಲವನ್ನು ಖಂಡಿಸಿ ಈ ಕೃತ್ಯಗಳನ್ನು ಎಸಗಿದ್ದಾರೆ. ಯೆಮೆನ್‌ನ ಇರಾನ್ ಬೆಂಬಲಿತ ಹುತಿ ಬಂಡುಕೋರರು ನವೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಹಡಗು ಸಾಗಣೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: Armed Drones: ಅಮೆರಿಕದಿಂದ ಭಾರತಕ್ಕೆ 31 ಎಂಕ್ಯೂ-9ಬಿ ಸಶಸ್ತ್ರ ಡ್ರೋನ್‌; ಇದು 4 ಶತಕೋಟಿ ಡಾಲರ್ ಡೀಲ್!

Exit mobile version