ಕೊಲರಾಡೊ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಮುಂದಿನ ವರ್ಷದ ಅಧ್ಯಕ್ಷೀಯ ಚುನಾವಣೆಯ (US presidential election) ಪ್ರಾಥಮಿಕ ಮತದಾನದಿಂದ ಕೊಲರಾಡೋ ಸುಪ್ರೀಂ ಕೋರ್ಟ್ ಅನರ್ಹಗೊಳಿಸಿದೆ.
2021ರ ಜನವರಿ 6ರಂದು ಅಮೆರಿಕದ ಕ್ಯಾಪಿಟಲ್ ಹಿಲ್ ಮೇಲೆ ಅವರ ಬೆಂಬಲಿಗರು ನಡೆಸಿದ ದಾಳಿಯಲ್ಲಿ ಟ್ರಂಪ್ ಕುಮ್ಮಕ್ಕಿನ ಹಿನ್ನೆಲೆಯಲ್ಲಿ ಈ ಅನರ್ಹತೆ ಜಾರಿಯಾಗಿದೆ. “ದಂಗೆ ಅಥವಾ ಬಂಡಾಯ”ದಲ್ಲಿ ತೊಡಗಿರುವ ಅಧಿಕಾರಿಗಳ ಅಧಿಕಾರವನ್ನು ನಿರ್ಬಂಧಿಸುವ ಯುಎಸ್ ಸಂವಿಧಾನದ ಅಪರೂಪದ ಒಂದು ನಿಬಂಧನೆಯ ಅಡಿಯಲ್ಲಿ, ಈ ಅನರ್ಹತೆ ಜಾರಿ ಮಾಡಲಾಗಿದೆ. ಅಧ್ಯಕ್ಷರಾಗಿದ್ದೂ ಮತದಾನಕ್ಕೆ ಅನರ್ಹರೆಂದು ಪರಿಗಣಿಸಲಾದ ಮೊದಲ ಅಧ್ಯಕ್ಷೀಯ ಅಭ್ಯರ್ಥಿ ಎಂಬ ಇತಿಹಾಸವನ್ನು ಟ್ರಂಪ್ ಸೃಷ್ಟಿಸಿದ್ದಾರೆ.
2024ರಲ್ಲಿ ರಿಪಬ್ಲಿಕನ್ ಪಕ್ಷದ ನಾಮನಿರ್ದೇಶನಕ್ಕೆ ಟ್ರಂಪ್ ಮುಂಚೂಣಿಯಲ್ಲಿದ್ದಾರೆ. ಆದರೆ US ಸರ್ಕಾರದ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸಿದ ಅವರ ಪಾತ್ರದಿಂದಾಗಿ ಮತದಾನದಲ್ಲಿ ಕಾಣಿಸಿಕೊಳ್ಳುವುದನ್ನು US ಸಂವಿಧಾನ ನಿರ್ಬಂಧಿಸುತ್ತದೆ ಎಂದು ನ್ಯಾಯಾಲಯ ತೀರ್ಮಾನಿಸಿದೆ.
ಈ ತೀರ್ಪು ಮಾರ್ಚ್ 5ರ ರಿಪಬ್ಲಿಕನ್ ಪ್ರಾಥಮಿಕ ಮತದಾನಕ್ಕೆ ಮಾತ್ರ ಅನ್ವಯಿಸುತ್ತದೆ. ಆದರೆ ಈ ತೀರ್ಮಾನ ನವೆಂಬರ್ 5ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಟ್ರಂಪ್ ಅವರ ಸ್ಥಾನಮಾನದ ಮೇಲೆ ಪರಿಣಾಮ ಬೀರಬಹುದು. ಕೊಲರಾಡೋ ಹೆಚ್ಚು ಡೆಮಾಕ್ರಟಿಕ್ ಮತಗಳಿರುವ ಪ್ರದೇಶ. ಅಂದರೆ ಇಲ್ಲಿ ಟ್ರಂಪ್ ಹೊರತುಪಡಿಸಿಯೂ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಹೆಚ್ಚಿನ ಸವಾಲು ಇಲ್ಲ.
ವಾಷಿಂಗ್ಟನ್‌ನಲ್ಲಿನ ಸಿಟಿಜನ್ಸ್ ಫಾರ್ ರೆಸ್ಪಾನ್ಸಿಬಿಲಿಟಿ ಆಂಡ್ ಎಥಿಕ್ಸ್‌ನ ಸಹಾಯದಿಂದ ಕೊಲರಾಡೋ ಮತದಾರರ ಗುಂಪು ಈ ಪ್ರಕರಣವನ್ನು ಸಲ್ಲಿಸಿತ್ತು. 2020ರ ಚುನಾವಣೆಯ ನಂತರ ಬೈಡೆನ್‌ಗೆ ಅಧ್ಯಕ್ಷೀಯ ಅಧಿಕಾರದ ವರ್ಗಾವಣೆಯನ್ನು ತಡೆಯುವ ವಿಫಲ ಪ್ರಯತ್ನದಲ್ಲಿ ಕ್ಯಾಪಿಟಲ್ ಮೇಲೆ ದಾಳಿ ಮಾಡಲು ತನ್ನ ಬೆಂಬಲಿಗರನ್ನು ಪ್ರಚೋದಿಸಿದ್ದಕ್ಕಾಗಿ ಟ್ರಂಪ್ ಅವರನ್ನು ಅನರ್ಹಗೊಳಿಸಬೇಕು ಎಂದು ವಾದವಾಗಿತ್ತು.
“ಕೊಲರಾಡೋ ಸುಪ್ರೀಂ ಕೋರ್ಟ್ ಸಂಪೂರ್ಣ ದೋಷಪೂರಿತ ನಿರ್ಧಾರವನ್ನು ನೀಡಿದೆ. ನಾವು ಯುನೈಟೆಡ್ ಸ್ಟೇಟ್ಸ್ ಸುಪ್ರೀಂ ಕೋರ್ಟ್‌ಗೆ ತ್ವರಿತವಾಗಿ ಮೇಲ್ಮನವಿ ಸಲ್ಲಿಸುತ್ತೇವೆ ಮತ್ತು ಈ ಪ್ರಜಾಪ್ರಭುತ್ವ ವಿರೋಧಿ ನಿರ್ಧಾರವನ್ನು ತಡೆಹಿಡಿಯಲು ವಿನಂತಿ ಸಲ್ಲಿಸುತ್ತೇವೆ” ಎಂದು ಟ್ರಂಪ್ ಪ್ರಚಾರದ ವಕ್ತಾರರು ತಿಳಿಸಿದ್ದಾರೆ.
ಟ್ರಂಪ್ ಅವರ ಉಮೇದುವಾರಿಕೆಗೆ ಹಲವಾರು ರೀತಿಯ ಕಾನೂನು ಸವಾಲುಗಳು ಎದುರಾಗಿದ್ದು, ವಕೀಲರ ಗುಂಪುಗಳು ಮತ್ತು ಟ್ರಂಪ್ ವಿರೋಧಿ ಮತದಾರರಿಗೆ ಕೋರ್ಟ್‌ನ ಈ ನಿರ್ಧಾರ ಗೆಲುವು ತಂದಿದೆ. ಅಂತರ್ಯುದ್ಧದ ನಂತರ ಜಾರಿಗೊಳಿಸಲಾದ ಸಂವಿಧಾನದ 14ನೇ ತಿದ್ದುಪಡಿಯ ಸೆಕ್ಷನ್ 3ರ ಅಡಿಯಲ್ಲಿ ಟ್ರಂಪ್ ಅವರ ಅಧ್ಯಕ್ಷೀಯ ಚುನಾವಣೆ ಸವಾಲನ್ನು ಪ್ರಶ್ನಿಸಲಾಗಿದೆ.
ಇದನ್ನೂ ಓದಿ: Donald trump : ಡೊನಾಲ್ಡ್ ಟ್ರಂಪ್‌ಗೆ ಮುಳುವಾಗಿದ್ದು ಒಂದು ಫೋನ್ ಕಾಲ್!; ಏನಿದು ಜಾರ್ಜಿಯಾ ಚುನಾವಣಾ ಅಕ್ರಮ?