Site icon Vistara News

ಪ್ಯಾಲೆಸ್ತೀನ್‌ ಜಿಹಾದಿಗೆ ಅಮೆರಿಕ ಭಾರಿ ಪೆಟ್ಟು; ‘ಜಾಗತಿಕ ಉಗ್ರ’ ಎಂದು ಘೋಷಣೆ

Hamas Terrorist

US Designates Palestinian Islamic Jihad Leader Global Terrorist, Imposes Sanctions On Hamas Officials

ವಾಷಿಂಗ್ಟನ್‌: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರ (Israel Palestine War) ಮುಂದುವರಿದಿದೆ. ಅದರಲ್ಲೂ, ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು (Hamas Terrorists) ದಾಳಿ ಆರಂಭಿಸಿದ ಬಳಿಕ ಪ್ರತಿದಾಳಿ ನಡೆಸಿರುವ ಇಸ್ರೇಲ್‌ ಸೈನಿಕರು ಗಾಜಾ ನಗರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ಇದರ ಬೆನ್ನಲ್ಲೇ, ಪ್ಯಾಲೆಸ್ತೀನ್‌ನ ಉಗ್ರನೊಬ್ಬನನ್ನು ಅಮೆರಿಕವು ಜಾಗತಿಕ ಉಗ್ರ (Global Terrorist) ಎಂಬುದಾಗಿ ಘೋಷಿಸಿದೆ. ಹಾಗೆಯೇ, ಕೆಲ ಹಮಾಸ್‌ ಅಧಿಕಾರಿಗಳ ವಿರುದ್ಧ ನಿರ್ಬಂಧವನ್ನೂ ಹೇರಿದೆ.

ಪ್ಯಾಲೆಸ್ತೀನ್‌ ಇಸ್ಲಾಮಿಕ್‌ ಜಿಹಾದ್‌ ಉಗ್ರ ಸಂಘಟನೆಯ ಅಕ್ರಮ್‌ ಅಲ್‌ ಅಜೌರಿಯನ್ನು ಅಮೆರಿಕ ಜಾಗತಿಕ ಉಗ್ರ ಎಂದು ಘೋಷಿಸಿದೆ. “ಅಕ್ರಮ್‌ ಅಲ್‌ ಅಜೌರಿಯನ್ನು ಅಮೆರಿಕದ ಖಜಾನೆ ಇಲಾಖೆಯು ವಿಶೇಷವಾಗಿ ಗುರುತಿಸಲಾದ ಜಾಗತಿಕ ಉಗ್ರ ಎಂಬುದಾಗಿ ಘೋಷಿಸಿದೆ. ಈತನು ಉಗ್ರ ಸಂಘಟನೆಯ ಡೆಪ್ಯುಟಿ ಸೆಕ್ರೆಟರಿ ಜನರಲ್‌ ಆಗಿದ್ದು, ಹಲವು ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದಾನೆ. ಹಮಾಸ್‌ ಉಗ್ರರಿಗೂ ಈತ ಬೆಂಬಲ ನೀಡಿದ್ದಾನೆ” ಎಂದು ಅಮೆರಿಕ ತಿಳಿಸಿದೆ.

ಹಮಾಸ್‌ ಅಧಿಕಾರಿಗಳಿಗೆ ನಿರ್ಬಂಧ

ಇಸ್ರೇಲ್‌ ಮೇಲೆ ದಾಳಿ ನಡೆಸಲು ಸಹಕಾರ ನೀಡಿರುವ, ಇರಾನ್‌ ಸೇರಿ ಹಲವು ಇಸ್ಲಾಮಿಕ್‌ ರಾಷ್ಟ್ರಗಳಿಂದ ನೆರವು ಪಡೆದಿರುವ ಹಮಾಸ್‌ ಉಗ್ರ ಸಂಘಟನೆಯ ಕೆಲ ಅಧಿಕಾರಿಗಳನ್ನೂ ಅಮೆರಿಕ ನಿರ್ಬಂಧಿಸಿದೆ. ಇಸ್ರೇಲ್‌ ಮೇಲೆ ಹಮಾಸ್‌ ದಾಳಿ ನಡೆಸಿದ ಬಳಿಕ ಅಮೆರಿಕವು ಇಸ್ರೇಲ್‌ಗೆ ಬೆಂಬಲ ಘೋಷಿಸಿದೆ. ಅಷ್ಟೇ ಅಲ್ಲ, ಶಸ್ತ್ರಾಸ್ತ್ರಗಳನ್ನು ನೀಡುವ ಮೂಲಕ ಇಸ್ರೇಲ್‌ ಸಮರಕ್ಕೆ ಸಹಕಾರ ನೀಡಿದೆ. ಬ್ರಿಟನ್‌ ಕೂಡ ಇಸ್ರೇಲ್‌ಗೆ ಬೆಂಬಲ ಸೂಚಿಸಿದೆ. ಇದರ ಬೆನ್ನಲ್ಲೇ, ಪ್ಯಾಲೆಸ್ತೀನ್‌ ಉಗ್ರನನ್ನು ಅಮೆರಿಕ ಜಾಗತಿಕ ಉಗ್ರ ಎಂದು ಘೋಷಿಸಿದೆ.

ಇದನ್ನೂ ಓದಿ: Israel Palestine War: ‌ಇಸ್ರೇಲ್‌ ಸೈನಿಕರು ಅತ್ಯಾಚಾರಿಗಳು ಎಂದ ಶಿಕ್ಷಕನ ಬಂಧನ!

12 ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 11 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 3 ಸಾವಿರಕ್ಕೂ ಅಧಿಕ ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version